ಬೆಳಗಾವಿ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಭಾವ ತನ್ನ ಅಕ್ಕನ ಮಗ ಸೇರಿ ದಂಪತಿ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಿದ ಘಟನೆ ಶನಿವಾರ ಮಧ್ಯಾಹ್ನ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ.
ಅಂಬೇವಾಡಿ ಗ್ರಾಮದ ಘಗೇಶ್ವರ ಗಲ್ಲಿಯ ಅಮೀತ ಪಾವಲೆ(48) ಹಾಗೂ ನೀತಾ ಪಾವಲೆ ಎಂಬವರ ಮೇಲೆ ಗುಂಡಿನ ದಾಳಿ ನಡೆದಿದೆ. ದಂಪತಿ ಗಾಯಗೊಂಡಿದ್ದು, ಕೂಡಲೇ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡು ಹಾರಿಸಿದ ಆರೋಪಿ ನವೀನ ಗಲ್ಲಿಯ ಕಾಚು ಮೋನಿಂಗ ತರಳೆ ಪರಾರಿಯಾಗಿದ್ದಾನೆ. ಈತನ ಶೋಧಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಭಾವ ಹಾಗೂ ಅಳಿಯನ ಮಧ್ಯೆ ಜಗಳವಿತ್ತು. ಅನೇಕ ವರ್ಷಗಳಿಂದ ಇವರು ಆಗಾಗ ಜಗಳವಾಡುತ್ತಿದ್ದರು. ಅಂಬೇವಾಡಿಯ ಶಿವಾಜಿ ಗಲ್ಲಿಯಲ್ಲಿ ಅಮೀತ್ ಹಾಗೂ ಪತ್ನಿ ನೀತಾ ನಿಂತಿದ್ದರು. ಕಾಚು ತನ್ನ ಬಳಿಯಿದ್ದ ಡಬಲ್ ಬಾರ್ ಬಂದೂಕಿನಿಂದ ನಾಲ್ಕು ಗುಂಡು ಹಾರಿಸಿಸಿದ್ದಾನೆ. ಒಂದು ಗುಂಡು ಅಮೀತನ ತಲೆಗೆ ಇನ್ನೊಂದು ಹೊಟ್ಟೆಗೆ ತಗುಲಿದೆ. ಮೂರನೇ ಗುಂಡು ಅಮೀತನ ಜೊತೆಯಿದ್ದ ಪತ್ನಿ ನೀತಾಗೆ ತಗುಲಿದೆ.
ಇದರಿಂದ ಗಂಬೀರವಾಗಿ ಗಾಯಗೊಂಡಿದ್ದ ಅಮೀತ ಮತ್ತು ಆತನ ಪತ್ನಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಬಳಿಕ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಖ್ಕೆ ಗ್ರಾಮೀಣ ಎಸಿಪಿ ಶಿವಾರೆಡ್ಡಿ, ಕಾಕತಿ ಇನ್ಸಪೆಕ್ಟರ್ ಆರ್. ಹಳ್ಳೂರ, ಎಎಸ್‌ಐ ಫಟವರ್ಧನ್, ಸಿಬ್ಬಂದಿಗಳಾದ ಮಾರುತಿ ಪೂಜಾರಿ, ಕೆಂಪಣ್ಣ ದಿಂಡಲಕುಪ್ಪಿ, ವಿಠ್ಠಲ ಪಟ್ಟೇದ ಸೇರಿದಂತೆ ಇತರರು ಇದ್ದರು. ಈ ಕುರಿತು ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.