ಹೊಸದಿಲ್ಲಿ: ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ ಸ್ಪರ್ಧೆಯ ಅಂತಿಮ ದಿನವಾದ ರವಿವಾರ ಆತಿಥೇಯ ಭಾರತ ಎರಡು ಚಿನ್ನದ ಪದಕ ಗೆದ್ದು ಮೆರೆದಾಡಿತು. ಈ ಎರಡೂ ಪದಕಗಳು ಪುರುಷರ ಹಾಗೂ ವನಿತೆಯರ ಟ್ರ್ಯಾಪ್ ತಂಡ ವಿಭಾಗದಲ್ಲಿ ಒಲಿದವು.
ವನಿತಾ ತಂಡ ವಿಭಾಗದ ಫೈನಲ್‌ನಲ್ಲಿ ಶ್ರೇಯಸಿ ಸಿಂಗ್, ರಾಜೇಶ್ವರಿ ಕುಮಾರಿ ಮತ್ತು ಮನೀಷಾ ಕೀರ್ ಸೇರಿಕೊಂಡು ಕಜಾಕ್‌ಸ್ಥಾನ ವಿರುದ್ಧ 6-0 ಮೇಲುಗೈ ಸಾಧಿಸಿದರು. ಅರ್ಹತಾ ಸುತ್ತಿನಲ್ಲೂ ಭಾರತ (321) ಮತ್ತು ಕಜಾಕ್‌ಸ್ಥಾನ (308) ಕ್ರಮವಾಗಿ ಮೊದಲೆರಡು ಸ್ಥಾನ ಗಳಿಸಿದ್ದವು.
ಬಳಿಕ ಪುರುಷರ ವಿಭಾಗದಲ್ಲಿ ಪೃಥ್ವಿರಾಜ್ ತೊಂಡೈಮಾನ್, ಲಕ್ಷ್ಯ ಶೆರಾನ್ ಮತ್ತು ಕೈನನ್ ಚೆನಾಯ್ ಸೇರಿಕೊಂಡು ಸ್ಲೊವಾಕಿಯಾ ತಂಡವನ್ನು 6-4ರಿಂದ ಮಣಿಸಿ ಚಿನ್ನಕ್ಕೆ ಗುರಿ ಇರಿಸಿದರು. ಕತಾರ್‌ಗೆ ಸೋಲುಣಿಸಿದ ಕಜಾಕ್‌ಸ್ಥಾನ ಕಂಚನ್ನು ತನ್ನದಾಗಿಸಿಕೊಂಡಿತು.
ಪುರುಷರ 25 ಮೀ. ರ್‍ಯಾಪಿಡ್ ಫೈರ್ ವಿಭಾಗದಲ್ಲಿ ಭಾರತಕ್ಕೆ ಬಂಗಾರ ಕೈತಪ್ಪಿತು. ವಿಜಯ್‌ವೀರ್ ಸಿಧು, ಗುರುಪ್ರೀತ್ ಸಿಂಗ್ ಮತ್ತು ಆದರ್ಶ್ ಸಿಂಗ್ ಅಮೆರಿಕ ಶೂಟರ್‌ಗಳ ಕೈಯಲ್ಲಿ 2-10 ಅಂತರದ ಆಘಾತಕ್ಕೆ ಸಿಲುಕಿ ಬೆಳ್ಳಿಗೆ ತೃಪ್ತಿಪಟ್ಟರು.
ಕೂಟದಲ್ಲಿ ಭಾರತ ಒಟ್ಟು 30 ಪದಕ ಗೆದ್ದು ಅಗ್ರಸ್ಥಾನದ ಗೌರವ ಸಂಪಾದಿಸಿತು. ಇದರಲ್ಲಿ 15 ಚಿನ್ನದ ಪದಕ ಇರುವುದು ವಿಶೇಷ. ದ್ವಿತೀಯ ಸ್ಥಾನಲ್ಲಿರುವ ಅಮೆರಿಕ ಕೇವಲ 4 ಚಿನ್ನ, 3 ಬೆಳ್ಳಿ ಹಾಗೂ ಒಂದು ಕಂಚು ಜಯಿಸಿದೆ.