Advertisement

ಶೂಟಿಂಗ್‌: ದೀಪಕ್‌, ಲಕ್ಷಯ್‌ ಬೆಳ್ಳಿ ಬೆಡಗು

06:05 AM Aug 21, 2018 | Team Udayavani |

ಪಾಲೆಂಬಾಂಗ್‌: ಏಶ್ಯನ್‌ ಗೇಮ್ಸ್‌ ಶೂಟಿಂಗ್‌ನಲ್ಲಿ ಭರವಸೆಯ ಪ್ರದರ್ಶನ ನೀಡುತ್ತಿರುವ ಭಾರತ, ಸೋಮವಾರ ಎರಡು ಬೆಳ್ಳಿ ಪದಕಗಳಿಗೆ ಗುರಿ ಇರಿಸಿದೆ. ಪುರುಷರ 10 ಮೀ. ರೈಫ‌ಲ್‌ನಲ್ಲಿ ದೀಪಕ್‌ ಕುಮಾರ್‌ ಹಾಗೂ ಟ್ರ್ಯಾಪ್‌ ವಿಭಾಗದ ಫೈನಲ್‌ನಲ್ಲಿ ಲಕ್ಷಯ್‌ ದ್ವಿತೀಯ ಸ್ಥಾನದೊಂದಿಗೆ ಈ ಗೌರವ ಸಂಪಾದಿಸಿದರು. ಇದು ಇವರಿಬ್ಬರಿಗೂ ಒಲಿದ ಮೊದಲ ಏಶ್ಯಾಡ್‌ ಪದಕವೆಂಬುದು ವಿಶೇಷ.

Advertisement

ಭಾರತಕ್ಕೆ ದಿನದ ಮೊದಲ ಪದಕ ದಿಲ್ಲಿಯ ದೀಪಕ್‌ ಕುಮಾರ್‌ ಅವರಿಂದ ಬಂತು. ಅವರು 10 ಮೀ. ರೈಫ‌ಲ್‌ ಸ್ಪರ್ಧೆಯಲ್ಲಿ 247.7 ಅಂಕ ಗಳಿಸಿ ದ್ವಿತೀಯ ಸ್ಥಾನ ಅಲಂಕರಿಸಿದರು. ಹಾಲಿ ಚಾಂಪಿಯನ್‌, ಚೀನದ ಯಾಂಗ್‌ ಹೊರಾನ್‌ ಕಣದಲ್ಲಿದ್ದುದರಿಂದ ಈ ಸ್ಪರ್ಧೆ ಅತ್ಯಂತ ಕಠಿನವಾಗಿತ್ತು. ನಿರೀಕ್ಷೆಯಂತೆ ಹೊರಾನ್‌ ಅವರೇ ಚಿನ್ನದ ಬೇಟೆಯಾಡಿದರು (249.1 ಅಂಕ). ಚೈನೀಸ್‌ ತೈಪೆಯ ಲು ಶೊಶುವಾನ್‌ ಕಂಚು ಪಡೆದರು (226.8 ಅಂಕ).

ಇದು 24 ಹೊಡೆತಗಳ ಫೈನಲ್‌ ಸ್ಪರ್ಧೆಯಾಗಿತ್ತು. ಆದರೆ 18ನೇ ಶಾಟ್‌ ತನಕ ದೀಪಕ್‌ ಪದಕದ ರೇಸ್‌ನಲ್ಲೇ ಇರಲಿಲ್ಲ. ಅನಂತರ ನಿಖರತೆ ಸಾಧಿಸುವ ಮೂಲಕ ದೀಪಕ್‌ ಮೇಲೇರುತ್ತ ಹೋದರು. ದೊಡ್ಡ ಮಟ್ಟದ ಕೂಟದಲ್ಲಿ ದೀಪಕ್‌ ಗೆದ್ದ ಮೊದಲ ವೈಯಕ್ತಿಕ ಕೂಟ ಇದಾಗಿದೆ. ಇದಕ್ಕೂ ಮುನ್ನ ಅವರು ಕಳೆದ ವರ್ಷದ ಶೂಟಿಂಗ್‌ ವಿಶ್ವಕಪ್‌ನಲ್ಲಿ ಮೆಹುಲಿ ಘೋಷ್‌ ಜತೆಗೂಡಿ ಮಿಕ್ಸೆಡ್‌ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು.

ರವಿ ಕುಮಾರ್‌, ಅಪೂರ್ವಿಗೆ 5ನೇ ಸ್ಥಾನ
ರವಿವಾರ ಭಾರತಕ್ಕೆ ಮೊದಲ ಏಶ್ಯಾಡ್‌ ಪದಕ ತಂದಿತ್ತ ರವಿ ಕುಮಾರ್‌ ಕೂಡ ಫೈನಲ್‌ ಸ್ಪರ್ಧೆಯಲ್ಲಿದ್ದರು. ಆದರೆ ಅವರು 5ನೇ ಸ್ಥಾನಕ್ಕೆ ಕುಸಿದು ಪದಕ ವಂಚಿತರಾದರು. 60 ಶಾಟ್‌ಗಳ ಅರ್ಹತಾ ಸುತ್ತಿನಲ್ಲಿ ದೀಕಪ್‌ 4ನೇ, ರವಿ 5ನೇ ಸ್ಥಾನದಲ್ಲಿದ್ದರು. ಇವರಿಬ್ಬರೂ ಭಾರತೀಯ ವಾಯುಸೇನೆಯಲ್ಲಿ ಉದ್ಯೋಗಿಗಳಾಗಿದ್ದು, ಉತ್ತಮ ಗೆಳೆಯರೂ ರೂಮ್‌ಮೇಟ್‌ಗಳೂ ಆಗಿದ್ದಾರೆ.

ವನಿತೆಯರ 10 ಮೀ. ಆರ್‌ ರೈಫ‌ಲ್‌ ಫೈನಲ್‌ಗೆ ನೆಗೆದ ಅಪೂರ್ವಿ ಚಾಂಡೇಲ ಕೂಡ 5ನೇ ಸ್ಥಾನ ತಲುಪಿ ಪದಕದಿಂದ ದೂರ ಉಳಿದರು.

Advertisement

ಲಕ್ಷಯ್‌-ಸಂಧು ಪೈಪೋಟಿ
ಪುರುಷರ ಟ್ರ್ಯಾಪ್‌ ಶೂಟಿಂಗ್‌ನಲ್ಲಿ ಭಾರತದ 19ರ ಹರೆಯದ ಲಕ್ಷಯ್‌ ರಜತ ಪದಕ ಗೆಲ್ಲುವ ಮೂಲಕ ಮೊದ ಬಾರಿಗೆ ಎಲ್ಲರ ಲಕ್ಷ್ಯವನ್ನು ತನ್ನತ್ತ ಸೆಳೆದರು. ಆದರೆ ಭಾರತದ ಸೀನಿಯರ್‌ ಶೂಟರ್‌ ಮಾನವ್‌ಜೀತ್‌ ಸಿಂಗ್‌ ಸಂಧು ಇದೇ ವಿಭಾಗದಲ್ಲಿ 4ನೆಯವರಾಗಿ ಪದಕ ಕಳೆದುಕೊಳ್ಳಬೇಕಾಯಿತು.

ಅರ್ಹತಾ ಸುತ್ತಿನಲ್ಲಿ ಸಂಧು 119 ಅಂಕ (ಶೂಟ್‌ ಆಫ್ನಲ್ಲಿ 12 ಅಂಕ) ಸಂಪಾದಿಸಿ ಅಗ್ರಸ್ಥಾನದ ಗೌರವ ಸಂಪಾದಿಸಿದ್ದರು. ಇಲ್ಲಿ ಲಕ್ಷಯ್‌ 4ನೆಯವರಾಗಿದ್ದರು (119 ಅಂಕ, ಶೂಟ್‌ ಆಫ್ನಲ್ಲಿ 0).

ಫೈನಲ್‌ನಲ್ಲಿ ಲಕ್ಷಯ್‌ ಆರಂಭ ಅಮೋಘ ಮಟ್ಟದಲ್ಲಿತ್ತು. ಮೊದಲ ಸುತ್ತಿನ 15 ಟಾರ್ಗೆಟ್‌ಗಳಲ್ಲಿ 14ರಲ್ಲಿ ಗುರಿ ಮುಟ್ಟಿದ್ದರು. ಆದರೆ ಸಂಧುಗೆ 11ರಲ್ಲಷ್ಟೇ ಯಶಸ್ಸು ಸಿಕ್ಕಿತ್ತು. 25 ಶಾಟ್ಸ್‌ ಮುಗಿದಾಗ ಲಕ್ಷಯ್‌-ಸಂಧು ತಲಾ 21 ಅಂಕಗಳೊಂದಿಗೆ ಸಮಬಲದಲ್ಲಿದ್ದರು. 30 ಶಾಟ್ಸ್‌ ಮುಗಿದಾಗ ಕಣದಲ್ಲಿದ್ದ ನಾಲ್ವರಲ್ಲಿ ಇಬ್ಬರು ಭಾರತೀಯರೇ ಆಗಿದ್ದರು. ಹೀಗಾಗಿ ಭಾರತಕ್ಕೆ ಅವಳಿ ಪದಕದ ನಿರೀಕ್ಷೆ ಇತ್ತು.
ಈ ಹಂತದಲ್ಲಿ ಲಕ್ಷಯ್‌ ತಮ್ಮ ದ್ವಿತೀಯ ಸ್ಥಾನವನ್ನು ಗಟ್ಟಿಗೊಳಿಸುತ್ತ ಹೋದರೆ, ಸಂಧು ನಾಲ್ಕರಲ್ಲೇ ಉಳಿದರು. ಒಟ್ಟು 50 ಶಾಟ್‌ಗಳ ಫೈನಲ್‌ ಸ್ಪರ್ಧೆಯಲ್ಲಿ ಲಕ್ಷಯ್‌ 43ರಲ್ಲಿ ಯಶಸ್ಸು ಸಾಧಿಸಿದರೆ, ಚೈನೀಸ್‌ ತೈಪೆಯ ಕುನಿ³ ಯಾಂಗ್‌ 48 ನಿಖರ ಗುರಿಗಳೊಂದಿಗೆ ಚಿನ್ನ ಗೆದ್ದರು.

“ನನಗೆ ರವಿಯೇ ಪದಕಕ್ಕೆ ಸ್ಫೂರ್ತಿ. ಅರ್ಹತಾ ಸುತ್ತಿನಲ್ಲೂ ನಾನು ಹಿನ್ನಡೆಯಲ್ಲಿದ್ದೆ. ಮಧ್ಯಮ ಹಂತವೂ ಕೆಟ್ಟದಾಗಿತ್ತು. ಆಗ ನನ್ನನ್ನು ಹುರಿದುಂಬಿಸಿದ್ದೇ ರವಿ. ನಾನು ತಾಳ್ಮೆಯಿಂದ ಮುಂದುವರಿದು ಪದಕ ಗೆದ್ದೆ’
– ದೀಪಕ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next