Advertisement

ಖೇಲ್‌ರತ್ನಕ್ಕೆ ಶೂಟರ್‌ ಅಂಜುಮ್‌ ಹೆಸರು ಶಿಫಾರಸು

07:53 AM May 15, 2020 | Sriram |

ಹೊಸದಿಲ್ಲಿ: ಪ್ರತಿಷ್ಠಿತ ಖೇಲ್‌ರತ್ನ ಪ್ರಶಸ್ತಿಗಾಗಿ ಪ್ರತಿಭಾನ್ವಿತ ಶೂಟರ್‌ ಅಂಜುಮ್‌ ಮೌದ್ಗಿಲ್‌ ಹೆಸರನ್ನು “ನ್ಯಾಶನಲ್‌ ರೈಫಲ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ’ (ಎನ್‌ಆರ್‌ಎಐ) ನಾಮನಿರ್ದೇಶನ ಮಾಡಿದೆ. ಇದೇ ವೇಳೆ ಕ್ರೀಡಾ ತರಬೇತುದಾರರಿಗೆ ನೀಡುವ ದ್ರೋಣಾಚಾರ್ಯ ಪ್ರಶಸ್ತಿಗಾಗಿ ಸತತ ಎರಡನೇ ವರ್ಷ ಜಸ್‌ಪಾಲ್‌ ರಾಣಾ ಹೆಸರನ್ನು ಸೂಚಿಸಿದ್ದಾಗಿ ಎನ್‌ಆರ್‌ಎಐ ಮೂಲವೊಂದು ತಿಳಿಸಿದೆ.

Advertisement

ಅರ್ಜುನ ಪ್ರಶಸ್ತಿಗಾಗಿ ಚಾಂಪಿಯನ್‌ ಶೂಟರ್‌ ಸೌರಭ್‌ ಚೌಧರಿ ಮತ್ತು ಅಭಿಷೇಕ್‌ ವರ್ಮ ಹೆಸರನ್ನು ಕಳುಹಿಸಿಕೊಟ್ಟಿದ್ದಾಗಿ ವರದಿ ಹೇಳಿದೆ. ಆದರೆ ಇನ್ನೊಂದು ಮೂಲದ ಪ್ರಕಾರ ರಾಷ್ಟ್ರೀಯ ಪ್ರಶಸ್ತಿಗಳಿಗಾಗಿ ಶೂಟರ್‌ಗಳ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ ಎಂದು ತಿಳಿದು ಬಂದಿದೆ.

ಒಲಿಂಪಿಕ್ಸ್‌ ಅರ್ಹತೆ ಪಡೆದ ಸಾಧಕಿ
ಚಂಡೀಗಢದ 26ರ ಹರೆಯದ ಅಂಜುಮ್‌ ಮೌದ್ಗಿಲ್‌ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಪಡೆದ ಭಾರತದ ಇಬ್ಬರು ಶೂಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅಂಜುಮ್‌ 10 ಮೀ. ಏರ್‌ ರೈಫಲ್‌ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

2008ರಲ್ಲಿ ಶೂಟಿಂಗ್‌ ಸ್ಪರ್ಧೆಗೆ ಇಳಿದ ಅಂಜುಮ್‌ ಅದೇ ವರ್ಷ ಕೊರಿಯಾದಲ್ಲಿ ನಡೆದ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಕಳೆದ ವರ್ಷ ಮ್ಯೂನಿಚ್‌ ಮತ್ತು ಬೀಜಿಂಗ್‌ನಲ್ಲಿ ಏರ್ಪಟ್ಟ ಇದೇ ಕೂಟದ ಮಿಶ್ರ ತಂಡ ಸ್ಪರ್ಧೆಯಲ್ಲಿ ದಿವ್ಯಾಂಶ್‌ ಸಕ್ಸೇನಾ ಜತೆಗೂಡಿ ಚಿನ್ನಕ್ಕೆ ಮುತ್ತಿಟ್ಟಿದ್ದರು.

ಕಳೆದ ವರ್ಷ ದ್ರೋಣಾಚಾರ್ಯ ಪ್ರಶಸ್ತಿಯಿಂದ ವಂಚಿತರಾಗಿದ್ದ ಜಸ್‌ಪಾಲ್‌ ರಾಣಾ ಅವರನ್ನು ಈ ವರ್ಷ ಮತ್ತೆ ಶಿಫಾರಸು ಮಾಡಲಾಗಿದೆ. ಮನು ಭಾಕರ್‌, ಸೌರಭ್‌ ವರ್ಮ, ಅನೀಷ್‌ ಭನ್ವಾಲಾ ಮೊದಲಾದವರನ್ನು ವಿಶ್ವ ದರ್ಜೆಯ ಶೂಟರ್‌ಗಳನ್ನಾಗಿ ರೂಪಿಸುವಲ್ಲಿ ರಾಣಾ ಪಾತ್ರ ಮಹತ್ವದ್ದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.