ಎಲ್ಲವೂ ಅಂದುಕೊಂಡಂತೆ ಸರಿಯಾಗಿ ನಡೆದಿದ್ದರೆ, ನಟ ಸುದೀಪ್ ಅವರು “ಶೂರ ಸಿಂಧೂರ ಲಕ್ಷ್ಮಣ’ ಚಿತ್ರದ ನಾಯಕರಾಗಿ ಅಭಿನಯಿಸಬೇಕಿತ್ತು. ಆದರೀಗ, ನಟ ಕಿಶೋರ್ “ಶೂರ ಸಿಂಧೂರ ಲಕ್ಷ್ಮಣ’ರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಯಾದಗಿರಿಯಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಆಗಿನ ಮಾಜಿ ಸಚಿವರಾಗಿದ್ದ ರಾಜುಗೌಡ ಅವರು, “ಶೂರ ಸಿಂಧೂರ ಲಕ್ಷ್ಮಣ’ ಚಿತ್ರ ಮಾಡಬೇಕೆಂದಿದ್ದು, ಆ ಚಿತ್ರದಲ್ಲಿ ಸುದೀಪ್ ಅವರು ಸಿಂಧೂರ ಲಕ್ಷ್ಮಣರಾಗಿ ನಟಿಸಲಿದ್ದಾರೆ ಎಂದು ಹೇಳಿದ್ದರು.
ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಅವರು ಕಳೆದ ಒಂದು ದಶಕದಿಂದ ಸಿಂಧೂರ ಲಕ್ಷ್ಮಣ ಅವರ ಕುರಿತು ಸಂಶೋಧನೆ ನಡೆಸಿ, ಎಲ್ಲೆಡೆ ಸಂಚರಿಸಿ ಸಮಗ್ರ ಕಥೆ ಸಿದ್ಧಪಡಿಸಿದ್ದರು. ಅದರ ಒನ್‌ಲೈನ್ ಕೇಳಿದ್ದ ರಾಜುಗೌಡ, ಈ ಕಥೆ ಸುದೀಪ್ ಮಾಡಿದರೆ ಚೆನ್ನಾಗಿರುತ್ತೆ ಅಂತ ಹೇಳಿದ್ದರು. “ಸಂಗೊಳ್ಳಿ ರಾಯಣ್ಣ’ ಚಿತ್ರದಲ್ಲಿ ದರ್ಶನ್ ನಟಿಸಿದ್ದಾರೆ. ಈ ಕಥೆಯ ಪಾತ್ರಕ್ಕೆ ಸುದೀಪ್ ಇದ್ದರೆ, ಅದು ಎಲ್ಲಾ ಭಾಷಿಗರಿಗೂ ಹೆಚ್ಚು ತಲುಪುತ್ತೆ ಅಂದುಕೊಂಡು ಚಿತ್ರ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು.
ಆದರೆ, ಸುದೀಪ್ ಬಿಜಿಯಾದ್ದರಿಂದ, “ಸಿಂಧೂರ ಲಕ್ಷ್ಮಣ’ ಚಿತ್ರ ಮಾಡುವ ಬಗ್ಗೆಯೂ ಒಂದಷ್ಟು ಗೊಂದಲಗಳಾದವು. ಈ ನಡುವೆ ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಅವರು, ಇಷ್ಟು ವರ್ಷದ ಶ್ರಮ ವ್ಯರ್ಥ ಆಗಬಾರದು ಎಂಬ ಕಾರಣಕ್ಕೆ, ಅವರೇ, ಇದೀಗ ಕಿಶೋರ್ ಅವರನ್ನಿಟ್ಟುಕೊಂಡು “ಶೂರ ಸಿಂಧೂರ ಲಕ್ಷ್ಮಣ’ ಚಿತ್ರ ಮಾಡಲು ಮುಂದಾಗಿದ್ದಾರೆ. ಪಾತ್ರಕ್ಕೆ ಸೂಕ್ತ ನಟ ಬೇಕಿದ್ದರಿಂದ, ಕಿಶೋರ್ ಸರಿಹೊಂದುತ್ತಾರೆಂದು ಅವರನ್ನೇ ಆಯ್ಕೆ ಮಾಡಿದ್ದಾರೆ ಪಲ್ಲಕ್ಕಿ ರಾಧಾಕೃಷ್ಣ.
ಈ ಚಿತ್ರಕ್ಕೆ ನಾನಾ ಶಿವಶಂಕರ್ ದೇವನಹಳ್ಳಿ ನಿರ್ಮಾಪಕರು. ಇವರಿಗಿದು ಮೊದಲ ಚಿತ್ರ. “ಕಿಶೋರ್ ಚಿತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಮುಖ್ಯವಾಗಿ ಜನಪದ ಕ್ರೀಡೆಗಳ ಬಗ್ಗೆ ಗಮನಹರಿಸಿ, ಅಭ್ಯಾಸ ಮಾಡುತ್ತಿದ್ದಾರೆ. ಆಗೆಲ್ಲಾ ಹಳ್ಳಿಗಳಲ್ಲಿ ದೇಸೀ ಆಟಗಳಾದ ಚಾಟರ್‌ಬಿಲ್ ಪ್ರಮುಖವಾಗಿತ್ತು. ಆ ಕ್ರೀಡೆ ಮೂಲಕ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕೆಂಬುದನ್ನು ಆ ಕ್ರೀಡೆಯಿಂದ ಕಲಿಯುತ್ತಿದ್ದರು. ಹಳ್ಳಿ ಜನ ಕೈಯಲ್ಲೇ ಸರಳ ಸಾಮಾಗ್ರಿ ಬಳಸಿ ಮಾಡಿದ ಉಪಕರಣ ಸಾಕಷ್ಟು ಬಲಿಷ್ಠವಾಗಿತ್ತು.
ಅಂತಹ ಅನೇಕ ಕ್ರೀಡೆಗಳ ಛಾಯೆ ಚಿತ್ರದಲ್ಲಿವೆ. ಕಿಶೋರ್, ಅದಕ್ಕಾಗಿ ಪಕ್ಕಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇನ್ನು, ಸಿಂಧೂರ ಲಕ್ಷ್ಮಣ ಅವರು ಅವಿದ್ಯಾವಂತರಾಗಿ, ಬ್ರಿಟಿಷರಿಗೆ ಎಷ್ಟೆಲ್ಲಾ ಸವಾಲು ಹಾಕಿದ್ದರು ಎಂಬುದು ಚಿತ್ರದ ಹೈಲೆಟ್’ ಎನ್ನುತ್ತಾರೆ ನಿರ್ದೇಶಕರು. ಅಂದಹಾಗೆ, ಜನವರಿಯಲ್ಲಿ ಚಿತ್ರಕ್ಕೆ ಚಾಲನೆ ಸಿಗಲಿದೆ. ಚಿತ್ರದಲ್ಲಿ ಸಾಯಿಕುಮಾರ್, ಸೀಮಾ ಬಿಸ್ವಾಸ್, ಸೀನೂ ಮಾಕಾಳಿ, ದೊಡ್ಡಣ್ಣ, ಚರಣ್‌ರಾಜ್, ರವಿಶಂಕರ್, ಗಿರೀಶ್ ಗಲಿವರ್ ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಥ್ರಿಲ್ಲರ್ ಮಂಜು ಅವರ ಸಾಹಸವಿದೆ.