ಅಭಿವೃದ್ಧಿ ಮತ್ತು ಭದ್ರತೆಗೆ ನೀಡುತ್ತಿದ್ದ ಕೋಟಿಗಟ್ಟಲೆ ಡಾಲರ್ ನೆರವನ್ನು ಪಾಕಿಸ್ಥಾನ ಭಯೋತ್ಪಾದನೆ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದೆ ಎಂದು ತಡವಾಗಿ ಯಾದರೂ ಅಮೆರಿಕಕ್ಕೆ ಜ್ಞಾನೋದಯವಾಗಿರುವುದು ಭಾರತದ ಪಾಲಿಗೆ ಶುಭಸೂಚನೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಪಾಕಿಸ್ಥಾನದ ಮೇಲೆ ಹರಿಹಾಯ್ದಿರುವ ರೀತಿಯನ್ನು ನೋಡಿದರೆ ಮುಂದಿನ ದಿನಗಳು ಪಾಕ್ ಪಾಲಿಗೆ ದುಸ್ತರವಾಗುವ ಸಾಧ್ಯತೆ ಕಾಣಿಸುತ್ತದೆ. 15 ವರ್ಷಗಳಲ್ಲಿ ಪಾಕಿಸ್ಥಾನಕ್ಕೆ ಅಮೆರಿಕ 2.14 ಲಕ್ಷ ಕೋ. ರೂ. ನೆರವು ನೀಡಿದೆ. ಆದರೆ ಪ್ರತಿಯಾಗಿ ಪಾಕ್ ಕೊಟ್ಟಿರುವುದು ಬರೀ ಸುಳ್ಳು ಮತ್ತು ವಂಚನೆ ಯನ್ನು. ಅಪಾ^ನಿಸ್ಥಾನದಲ್ಲಿ ನಾವು ಉಗ್ರರ ವಿರುದ್ಧ ಹೋರಾಡುತ್ತಿದ್ದರೆ ಅದೇ ಉಗ್ರರಿಗೆ ಪಾಕ್ ಸಹಾಯ ಮಾಡಿ ನಮ್ಮ ವಿರುದ್ಧ ಎತ್ತಿಕಟ್ಟುತ್ತಿದೆ ಎಂದು ಧೂರ್ತ ಪಾಕ್‌ನ ಜನ್ಮ ಜಾಲಾಡಿದ್ದಾರೆ ಟ್ರಂಪ್. ಈ ಮಾತಿನಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆಯಿಲ್ಲ. ಒಂದು ವೇಳೆ ಅಮೆರಿಕ ಹಾಗೂ ಇನ್ನಿತರ ಶಕ್ತ ರಾಷ್ಟ್ರಗಳು 1947ರಿಂದೀಚೆಗೆ ನೀಡಿರುವ ಆರ್ಥಿಕ ನೆರವುಗಳನ್ನು ಪಾಕಿಸ್ಥಾನ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಂಡಿದ್ದರೆ ಆ ದೇಶ ಇಂದು ಕನಿಷ್ಠ ಭಾರತಕ್ಕೆ ಸರಿಸಮಾನವಾಗಿಯಾದರೂ ನಿಲ್ಲಬೇಕಿತ್ತು. ಆದರೆ ಉಗ್ರವಾದಕ್ಕೆ ಕುಮ್ಮಕ್ಕು ನೀಡುವ ಕುಟಿಲ ನೀತಿಯನ್ನು ಅನುಸರಿಸಿದ ಕಾರಣ ಸಕಲ ಉಗ್ರ ಸಂಘಟ ನೆಗಳು ತವರು ನೆಲವಾಗಿ ಬದಲಾಗಿದೆ. ಸಿಕ್ಕಿದ ಅಂತರಾಷ್ಟ್ರೀಯ ನೆರವು ಗಳನ್ನೆಲ್ಲ ಉಗ್ರವಾದವನ್ನು ಪೋಷಿಸಲು ಬಳಸಿದ ಪರಿಣಾಮವಾಗಿ ಪಾಕ್ ಈಗಲೂ ಜಗತ್ತಿನ ದರಿದ್ರ ರಾಷ್ಟ್ರಗಳಲ್ಲಿ ಒಂದಾಗಿದೆ. ಪಾಕಿನಲ್ಲಿ ಈಗಲೂ ಹುಲುಸಾಗಿ ಏನಾದರೂ ಬೆಳೆಯು ತ್ತಿದ್ದರೆ ಅದು ಭಯೋತ್ಪಾದನೆ ಮಾತ್ರ.
ಪಾಕಿಸ್ಥಾನವನ್ನು ಅಮೆರಿಕ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಮತ್ತು ನೆರವು ತಡೆ ಹಿಡಿಯುವುದು ಇದು ಮೊದಲೇ ನಲ್ಲ. ಈ ಹಿಂದೆಯೂ ಹಲವು ಬಾರಿ ಇಂತಹ ಕಠಿಣ ಕ್ರಮ ಕೈಗೊಂಡಾಗಲೆಲ್ಲ ಪಾಕಿಸ್ಥಾನ ಹೇಗಾದರೂ ಮಾಡಿ ಪೂಸಿ ಹೊಡೆದು ನೆರವಿನ ನಿಧಿಯನ್ನು ಪಡೆದು ಕೊಳ್ಳುವಲ್ಲಿ ಸಫಲವಾಗುತ್ತಿತ್ತು. ಆದರೆ ಟ್ರಂಪ್ ಅಧ್ಯಕ್ಷರಾದ ಬಳಿಕ ಪಾಕ್ ಪಾಲಿಗೆ ಸಂಕಷ್ಟದ ದಿನಗಳು ಶುರು ವಾಗಿವೆ. ಭಾರತದ ಪರ ತುಸು ಹೆಚ್ಚೇ ಒಲವು ಹೊಂದಿರುವ ಟ್ರಂಪ್ ಪದೇ ಪದೇ ಪಾಕ್‌ಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಸಲ ಟ್ರಂಪ್ ಇಷ್ಟು ಕಠಿಣವಾಗಲು ಭಾರತ ಪ್ರೀತಿಗಿಂತಲೂ ಚೀನ ಒಡ್ಡುತ್ತಿರುವ ಸವಾಲು ಕಾರಣ. ಪಾಕ್ ಮೂಲಕ ಹಾದು ಹೋಗುವ ಚೀನಾ-ಪಾಕ್ ಆರ್ಥಿಕ ಕಾರಿಡಾರ್ ಭಾರತದ ಪಾಲಿಗೆ ಮಾತ್ರವಲ್ಲದೆ ಅಮೆರಿಕ ಪಾಲಿಗೂ ಬೆದರಿಕೆಯಾಗಿ ಪರಿಣಮಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುವ ಈ ಕಾರಿಡಾರ್‌ಗೆ ಭಾರತ ಈಗಾಗಲೇ ಪ್ರಬಲ ವಿರೋಧ ವ್ಯಕ್ತ¤ಪಡಿಸಿದೆ. ಈ ಯೋಜನೆ ಕಾರ್ಯಗತಗೊಂಡದ್ದೇ ಆದರೆ ಚೀನಕ್ಕೆ ನೇರವಾಗಿ ಅರಬಿ ಸಮುದ್ರ ಪ್ರವೇಶಿಸಲು ಸಾಧ್ಯವಾಗುತ್ತದೆ. ಅಮೆರಿಕಕ್ಕೆ ಕಳವಳವಿರುವುದು ಈ ಕಾರಣಕ್ಕೆ. ಹೀಗಾಗಿ ಪಾಕ್ ಆಟವನ್ನು ಮಟ್ಟ ಹಾಕಲು ದೊಡ್ಡಣ್ಣ ಅವಕಾಶ ಎದುರು ನೋಡುತ್ತಿದೆ. ಇದೇ ಕಾರಣದಿಂದ ಟ್ರಂಪ್ ಹರಿಹಾಯ್ದ ಬೆನ್ನಲ್ಲೇ ಪಾಕ್ ಬೆಂಬಲಕ್ಕೆ ಚೀನ ಧಾವಿಸಿ ಬಂದಿದೆ.
15,000 ಕೋ. ರೂ. ನೆರವು ಎನ್ನುವುದು ಪಾಕ್ ಪಾಲಿಗೆ ದೊಡ್ಡ ಮೊತ್ತವೇ. ಈ ಸಲ ಟ್ರಂಪ್ ನಿರ್ಧಾರ ಪಾಕ್ ಸರಕಾರಕ್ಕೆ ಸರಿಯಾಗಿಯೇ ಬಿಸಿ ಮುಟ್ಟಿಸಿದೆ. ಬುಧವಾರ ಸರಕಾರ ಉನ್ನತ ಮಟ್ಟದ ಸಭೆ ಕರೆದಿರುವುದೇ ಇದಕ್ಕೆ ಸಾಕ್ಷಿ. ತಾನು ಭಯೋತ್ಪಾದನೆಯನ್ನು ಬೆಂಬಲಿಸುತ್ತಿಲ್ಲ, ಬದಲಾಗಿ ಭಯೋತ್ಪಾದನೆ ನಿಗ್ರಹಕ್ಕಾಗಿ ಹೋರಾಡುತ್ತಿದ್ದೇನೆ ಎಂದು ಪಾಕ್ ಹೇಳಿದರೆ ಉಳಿದವರು ಬಿಡಿ ಪಾಕಿಸ್ಥಾನದವರೇ ನಂಬಲು ತಯಾರಿಲ್ಲ. ಭಯೋತ್ಪಾ ದನೆಯ ಮೂಲಕ ಭಾರತಕ್ಕೆ ಇನ್ನಿಲ್ಲದ ಕಾಟ ಕೊಟ್ಟು ಕಾಶ್ಮೀರವನ್ನು ಕಿತ್ತುಕೊಳ್ಳುವುದೇ ಪಾಕಿನ ಮುಖ್ಯ ಕಾರ್ಯತಂತ್ರ. ಹೀಗಾಗಿ ಜಾಗತಿಕ ಭಯೋತ್ಪಾದಕರೆಂದೇ ಘೋಷಿತರಾಗಿರುವ ಹಾಫಿಜ್ ಸಯೀದ್, ಅಜರ್ ಮೆಹಮೂದ್‌ನಂತಹ ಕಡು ಪಾತಕಿಗಳು ಮುಕ್ತವಾಗಿ ಓಡಾಡಿಕೊಂಡು ಸಭೆಗಳನ್ನು ನಡೆಸುತ್ತಿದ್ದರೂ ಅಲ್ಲಿನ ಸರಕಾರ ಅವರನ್ನು ಹಿಡಿದು ಜೈಲಿಗೆ ತಳ್ಳುವ ಬದಲಾಗಿ ಪರೋಕ್ಷವಾಗಿ ಸಕಲ ಸಹಾಯಗಳನ್ನು ಮಾಡುತ್ತಿದೆ. ನೇರ ಯುದ್ಧ ಮಾಡಿ ಜಯಿಸಲು ಆಗುವುದಿಲ್ಲ ಎಂದು ಅರಿವಿರುವುದರಿಂದ ಭಯೋತ್ಪಾದಕರನ್ನು ಛೂ ಬಿಡುವುದು ಪಾಕಿನ ರಣಹೇಡಿ ತಂತ್ರ. ಇದಕ್ಕೆಲ್ಲ ಅಮೆರಿಕ ಸೇರಿದಂತೆ ಹಲವು ದೇಶಗಳು ಕೊಡುತ್ತಿದ್ದ ಹಣ ಬಳಕೆಯಾಗು ತ್ತಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕ ತಳೆದಿರುವ ಬಿಗು ನಿಲುವಿನಿಂದ ಭಾರತಕ್ಕೆ ಪ್ರಯೋಜನವಿದೆ. ಟ್ರಂಪ್ ಪರಮ ತಿಕ್ಕಲನಾಗಿದ್ದರೂ ಪಾಕಿಸ್ಥಾನದ ಸಂದರ್ಭ ದಲ್ಲಿ ಈ ತಿಕ್ಕಲುತನದಿಂದ ನಮಗೆ ಲಾಭವೇ ಇದೆ.