ಹೈದರಾಬಾದ್ : ತನ್ನ ಬಾಯ್ ಫ್ರೆಂಡ್ ದೀಕ್ಷಿತ್ ಪಟೇಲ್ ಎಂಬಾತನ ಜತೆಗೆ ವಿಡಿಯೋ ಕಾಲ್ ಮಾಡುತ್ತಿರುವಾಗಲೇ ಹೈದರಾಬಾದಿನ ಎಂಬಿಎ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಅತ್ಯಂತ ಆಘಾತಕಾರಿ ಘಟನೆ ವರದಿಯಾಗಿದೆ.
ಈ ದುರ್ಘಟನೆಯು ನಿನ್ನೆ ಭಾನುವಾರ ಕೊಂಪಳ್ಳಿಯಲ್ಲಿ ನಡೆಯಿತು. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಬಿ ಹನೀಶಾ ಚೌಧರಿ (24) ಎಂದು ಗುರುತಿಸಲಾಗಿದೆ. ಈಕೆ ಶಿವಶಿವಾನಿ ಇನ್‌ಸ್ಟಿಟ್ಯೂಟ್‌ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಳು. ಹನೀಶಾ ಮತ್ತು ದೀಕ್ಷಿತ್ ನಡುವೆ ಪ್ರೇಮ ಸಂಬಂಧ ಇತ್ತೆಂದು ಗೊತ್ತಾಗಿದೆ.
ಮದುವೆ ಕಾರ್ಯಕ್ರಮವೊಂದರಲ್ಲಿ ತಾನು ಭಾಗಿಯಾದುದಕ್ಕೆ ದೀಕ್ಷೀತ್ ಅಸಮಾಧಾನ ವ್ಯಕ್ತಪಡಿಸಿದ್ದ. ಇದರಿಂದ ಸಿಟ್ಟಿಗೆದ್ದ ಹನೀಶಾ ಈ ಅತಿರೇಕದ ಕೃತ್ಯ ಎಸಗಿದಳು ಎಂದು ಪೊಲೀಸರು ತಿಳಿಸಿದ್ದಾರೆ.
ಹನೀಶಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದೀಕ್ಷಿತ್ ಜತೆಗೆ ಆಕೆಗೆ ಮಾತಿನ ಜಗಳ ಉಂಟಾಗಿತ್ತು. ಹನೀಶಾ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ವಿಡಿಯೋ ಕಾಲ್ ವೇಳೆ ತಾನು ನೋಡಿದ್ದೇನೆ ಎಂದು ದೀಕ್ಷಿತ್ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಒಡನೆಯೇ ದೀಕ್ಷಿತ್, ಹನೀಶಾಳ ಹಾಸ್ಟೆಲ್‌ಗೆ ಧಾವಿಸಿ ಬಂದಿದ್ದಾನೆ; ಆಕೆಯ ಕೊಠಡಿಯ ಬಾಗಿಲು ಒಡೆದು ಒಳಪ್ರವೇಶಿಸಿದ್ದಾನೆ. ಹನೀಶಾಳನ್ನು ಆತ ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾನೆ. ಆದರೆ ಅಷ್ಟರೊಳಗಾಗಿ ಆಕೆ ಅಸುನೀಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಹನೀಶಾ ಳ ಹೆತ್ತವರು ಕೊಟ್ಟಿರುವ ದೂರಿನ ಪ್ರಕಾರ ಶಂಕಾಸ್ಪದ ಸಾವಿನ ಕೇಸನ್ನು ಪೊಲೀಸರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.