ಬೆಂಗಳೂರು/ ಹಾಸನ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ನೆರೆ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದ ವಿಡಿಯೋ ವೈರಲ್ ಆಗುತ್ತಿದ್ದು, ಸಚಿವರ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿವೆ.
ಮೂರು ದಿನಗಳ ಹಿಂದೆ ಹಾಸನ ಹಾಲು ಒಕ್ಕೂಟದಿಂದ ರಾಮನಾಥಪುರದಲ್ಲಿ ನೆರೆ ಸಂತ್ರಸ್ತರಿಗೆ ಹಾಲು, ಬಿಸ್ಕೆಟ್ ರವಾನಿಸಲಾಗಿತ್ತು. ನಿರಾಶ್ರಿತರಿಗೆ ಬಿಸ್ಕೆಟ್ ಪೊಟ್ಟಣಗಳನ್ನು ರೇವಣ್ಣ ಅವರು ಎಸೆದಿರುವ ದೃಶ್ಯಾವಳಿಗಳು ಸುದ್ದಿವಾಹಿನಿಗಳಲ್ಲಿ ಸೋಮವಾರ ಇಡೀ ದಿನ ಪ್ರಸಾರವಾಗಿದ್ದು, ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.
ನಿರಾಶ್ರಿತರ ಶಿಬಿರದಲ್ಲಿದ್ದರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುವ ಮನಸ್ಸಿಲ್ಲದಿದ್ದರೆ ಸ್ಥಳೀಯ ಮುಖಂಡರು ವಿತರಿಸುವಂತೆ ಸಚಿವರು ಸೂಚಿಸಬಹುದಿತ್ತು. ಆದರೆ ಪ್ರಾಣಿಗಳಿಗೆ ಎಸೆದಂತೆ ಬಿಸ್ಕೆಟ್ ಪೊಟ್ಟಣಗಳನ್ನು ಎಸೆದಿರುವುದು ನೋವಿನ ಸಂಗತಿ ಎಂದು ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಬಿಸ್ಕೆಟ್ ಪೊಟ್ಟಣಗಳನ್ನು ಸಚಿವರು ಎಸೆಯುವ ಸಂದರ್ಭದಲ್ಲಿ ಹಾಜರಿದ್ದ ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಅವರು, ಸಚಿವರು ಮಡಿಕೇರಿಗೆ ಹೋಗುವ ತರಾತುರಿಯಲ್ಲಿದ್ದರು. ಹಾಗಾಗಿ ಸಮಾಧಾನದಿಂದ ವಿತರಿಸಲು ಆಗದಿರಬಹುದು. ಆದರೆ ಅವರು ಬಿಸ್ಕೆಟ್ ಪೊಟ್ಟಣಗಳನ್ನು ಎಸೆದಿರುವುದನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಸಚಿವರಾಗಿ ಇಂತಹ ವರ್ತನೆ ಅವರಿಗೆ ಶೋಭೆ ತರುವುದಿಲ್ಲ. ಸಂತ್ರಸ್ತರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಅವರು ಈ ರೀತಿ ವರ್ತಿಸುತ್ತಿರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯರಾದ ಬಿಜೆಪಿಯ ಎನ್.ರವಿಕುಮಾರ್ ದೂರಿದ್ದಾರೆ.
ರೇವಣ್ಣ ದುರಹಂಕಾರದಿಂದ ನಿರಾಶ್ರಿತರಿಗೆ ಬಿಸ್ಕೆಟ್ ಎಸೆದಿಲ್ಲ. ನಮ್ಮ ಸರ್ಕಾರದಲ್ಲಿ ಯಾವ ಸಚಿವರೂ ದುರಹಂಕಾರಿಗಳಿಲ್ಲ.
ಹಾಸನದಿಂದ ಸಾವಿರಾರು ಲೀಟರ್ ಹಾಲು-ಬಟ್ಟೆಯನ್ನು ಅವರು ಕಳುಹಿಸಿಕೊಟ್ಟಿದ್ದಾರೆ. ತಪ್ಪಾಗಿ ಆ ರೀತಿ ಬಿಂಬಿಸಲಾಗಿದೆ.
– ಎಚ್.ಡಿ.ಕುಮಾರಸ್ವಾಮಿ,ಮುಖ್ಯಮಂತ್ರಿ