Advertisement
ಪಕ್ಷದಲ್ಲಿ ಕಳೆದ ಆರು ತಿಂಗಳಿನಿಂದ ಬಂಡಾಯ ಶಾಸಕರು ಮೇಲಿಂದ ಮೇಲೆ ರಾಜೀನಾಮೆ ಎಚ್ಚರಿಕೆ ನೀಡುತ್ತಿದ್ದರೂ, ಅತೃಪ್ತರನ್ನು ಕಡೆಗಣಿಸಿ, ಪಕ್ಷೇತರ ಶಾಸಕರಿಗೆ ಮಣೆ ಹಾಕಿದ್ದು, ಅತೃಪ್ತ ಶಾಸಕರಲ್ಲಿ ಅಸಮಾಧಾನ ಹೆಚ್ಚಾಗುವಂತೆ ಮಾಡಿತ್ತು.
Related Articles
Advertisement
ಇಬ್ಬರು ಪಕ್ಷೇತರರನ್ನು ಮಾತ್ರ ಸೇರಿಸಿಕೊಂಡು ಬಿಜೆಪಿಯ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಿದ್ದೇವೆ ಎಂದು ರಾಜಕೀಯ ಜಾಣ್ಮೆ ಪ್ರದರ್ಶನ ಮಾಡಿದ್ದೇವೆಂದು ಬೆನ್ನು ತಟ್ಟಿಕೊಂಡಿದ್ದರು. ಕಾಂಗ್ರೆಸ್ ನಾಯಕರ ಈ ನಡೆ ಅತೃಪ್ತ ಶಾಸಕರಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.
ಹೀಗಾಗಿ ಪಕ್ಷದ ನಾಯಕರ ವಿರುದ್ಧ ಸಿಡಿದೇಳಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಬಂಡಾಯಗಾರರು ರಾಜೀನಾಮೆಗೆ ನಿರ್ಧರಿಸುವ ಮೊದಲೇ ಆನಂದ್‌ಸಿಂಗ್ ರಾಜಿನಾಮೆ ನೀಡುವ ಮೂಲಕ ಕೈ ನಾಯಕರಿಗೆ ಶಾಕ್ ನೀಡಿದ್ದು, ಇದು ಕಾಂಗ್ರೆಸ್ ಪಾಳಯದಲ್ಲಿ ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ.
ಕನಿಷ್ಠ ಆರು ತಿಂಗಳು ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದುಕೊಂಡಿದ್ದ ಕಾಂಗ್ರೆಸ್ ನಾಯಕರಿಗೆ ದಿಢೀರ್ ಬೆಳವಣಿಗೆ ಮಳೆಗಾಲದ ಅಧಿವೇಶನಕ್ಕೂ ಮುನ್ನವೇ ಸರ್ಕಾರದ ಪತನಕ್ಕೆ ನಾಂದಿ ಹಾಡಲಿದೆಯಾ ಎಂಬ ಚರ್ಚೆಗೆ ಗ್ರಾಸವಾಗಿದೆ. ಆದರೆ, ಬಿಜೆಪಿಗೆ ಬೇಕಾದಷ್ಟು ಶಾಸಕರು ರಾಜೀನಾಮೆ ನೀಡುವುದಿಲ್ಲ ಎನ್ನುವ ಸಮಾಧಾನದ ನಡುವೆಯೇ ಕೈ ನಾಯಕರು ಅತೃಪ್ತರನ್ನು ಉಳಿಸಿಕೊಳ್ಳುವ ಕಸರತ್ತು ಆರಂಭಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಬಿಟ್ಟರೆ ಬೇರೆ ಯಾರಿಗೂ ಮೈತ್ರಿ ಸರ್ಕಾರ ಮುಂದುವರೆಯುವುದು ಬೇಕಾಗಿಲ್ಲ ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಸರ್ಕಾರ ಮುಂದುವರೆಸಿದಷ್ಟು ಪಕ್ಷಕ್ಕೆ ಹಾನಿಯೇ ಹೆಚ್ಚು ಎಂಬ ಅಭಿಪ್ರಾಯ ಬಹುತೇಕ ನಾಯಕರಲ್ಲಿ ಮೂಡಿದ್ದು,
ಇತ್ತೀಚೆಗೆ ನಡೆದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿಯೂ ಈ ರೀತಿಯ ಅಭಿಪ್ರಾಯ ವ್ಯಕ್ತವಾಗಿತ್ತು. ಅದೇ ಕಾರಣಕ್ಕೆ ಶಾಸಕರ ರಾಜಿನಾಮೆ ಪರ್ವಕ್ಕೆ ಚಾಲನೆ ದೊರೆತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವದ ಸಮಸ್ಯೆ ಎದುರಾಗಿದ್ದು, ಸಿದ್ದರಾಮಯ್ಯ ಮತ್ತೆ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಅದರ ಒಂದು ಭಾಗವಾಗಿಯೇ ಶಾಸಕರ ರಾಜಿನಾಮೆ ಪರ್ವ ಆರಂಭವಾಗಿದೆ ಎನ್ನಲಾಗಿದ್ದು, ಅತೃಪ್ತರನ್ನು ಉಳಿಸಿಕೊಳ್ಳುವ ನೆಪದಲ್ಲಿ ಸಿದ್ದರಾಮಯ್ಯ ಎಲ್ಲವನ್ನೂ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
* ಶಂಕರ ಪಾಗೋಜಿ