ಹೊಸದಿಲ್ಲಿ: ಪ್ರವಾಹದಿಂದಾಗಿ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಭಾರೀ ಸಂಖ್ಯೆಯ ಪ್ರಾಣಿಗಳು ಮೃತಪಟ್ಟಿರುವ ಬಗ್ಗೆ ಬ್ರಿಟನ್ ರಾಜಕುಮಾರ ಪ್ರಿನ್ಸ್ ವಿಲಿಯಂ ಮತ್ತು ಪತ್ನಿ ಕೇಟ್ ಮಿಡ್ಲ್ಟನ್ ಆಘಾತ ವ್ಯಕ್ತಪಡಿಸಿದ್ದಾರೆ.
ಉದ್ಯಾನದ ನಿರ್ದೇಶಕ ಶಿವಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಅವರು, 2016ರಲ್ಲಿ ಕಾಜಿರಂಗ ಭೇಟಿ ಅವಿಸ್ಮರಣೀಯ.
ಅಲ್ಲಿ ಇಷ್ಟೊಂದು ಹಾನಿಯಾಗಿರುವುದು ಬೇಸರ ತರಿಸಿದೆ ಎಂದಿದ್ದಾರೆ. ಅಸ್ಸಾಂನಲ್ಲಿ ಈವರೆಗೆ ಮಳೆ, ಪ್ರವಾಹ ಸಂಬಂಧಿ ಘಟನೆಗಳಿಗೆ 96 ಮಂದಿ ಮೃತಪಟ್ಟಿದ್ದಾರೆ.
ಇದೇ ವೇಳೆ, ಅಸ್ಸಾಂ, ಬಿಹಾರ, ಉತ್ತರಪ್ರದೇಶದ ಪ್ರವಾಹ ಪೀಡಿತ ಪ್ರದೇಶಗಳಿಗೆ ರೆಡ್‌ಕ್ರಾಸ್ ಸಂಸ್ಥೆಯ ಪರಿಹಾರ ಸಾಮಗ್ರಿಗಳನ್ನು ಹೊತ್ತ 9 ಟ್ರಕ್‌ಗಳು ಶುಕ್ರವಾರ ದೆಹಲಿಯಿಂದ ತೆರಳಿದ್ದು, ಇದಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಚಾಲನೆ ನೀಡಿದ್ದಾರೆ.
ಬಿಹಾರದ ಗಂಡಕ್ ನದಿ ಅಪಾಯದ ಮಟ್ಟ ಮೀರಿ ಹರಿದ ಕಾರಣ, 45 ಗ್ರಾಮಗಳಿಗೆ ನೀರು ನುಗ್ಗಿದೆ. ಕನಿಷ್ಠ 50 ಸಾವಿರ ಮಂದಿ ಅತಂತ್ರರಾಗಿದ್ದಾರೆ. ಎನ್‌ಡಿಆರ್‌ಎಫ್ ನ ಮೂರು ತಂಡ ಸ್ಥಳಕ್ಕೆ ಆಗಮಿಸಿ, ಜನರ ರಕ್ಷಣಾ ಕಾರ್ಯ ಆರಂಭಿಸಿವೆ.