ಹೊಸದಿಲ್ಲಿ/ದುಬಾೖ: ವಿಶ್ವದ ಅತೀ ಪ್ರಮುಖ ತೈಲ ಉತ್ಪಾದಕ ಕಂಪೆನಿ ಸೌದಿ ಅರೇಬಿಯಾದ ಅರಾಮ್‌ಕೋ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ ನಡೆದಿರುವುದರಿಂದಾಗಿ ಭಾರತ ಸಹಿತ ಹಲವು ರಾಷ್ಟ್ರಗಳಿಗೆ ತೈಲ ಕೊರತೆ ಆತಂಕ ಕಾಡಿದೆ. ದಾಳಿಯ ಪರಿಣಾಮ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ತಲುಪುವ ಆತಂಕ ಎದುರಾಗಿರುವುದರಿಂದ ದೇಶದಲ್ಲಿ ತೈಲ ದರ ಏರಿಕೆಯ ಗುಮ್ಮ ಕಾಡುತ್ತಿದೆ.
ಡ್ರೋನ್ ದಾಳಿಯಿಂದಾಗಿ ಎರಡು ತೈಲ ಘಟಕಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದ್ದು, ಸೌದಿ ಅರೇಬಿಯಾ ಒಟ್ಟು ಉತ್ಪಾದಿಸುತ್ತಿದ್ದ ತೈಲದಲ್ಲಿ ಅರ್ಧದಷ್ಟು ಕೊರತೆಯಾಗಿದೆ. ಬ್ರೆಂಟ್ ಕಚ್ಚಾ ತೈಲವು ಶುಕ್ರವಾರ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ 60.25 ಡಾಲರ್ ಆಗಿತ್ತು.
ಈ ಬಗ್ಗೆ ಮಾತನಾಡಿದ ಭಾರತದ ಅಧಿಕಾರಿಯೊಬ್ಬರು, ಇದೊಂದು ಗಂಭೀರ ಸನ್ನಿವೇಶ. ನಾವು ಇದರ ಮೇಲೆ ನಿಗಾ ವಹಿಸಿದ್ದೇವೆ ಎಂದಿದ್ದಾರೆ. ಕಚ್ಚಾ ತೈಲ ಹಾಗೂ ಅಡುಗೆ ಅನಿಲ ಪೂರೈಕೆಯಲ್ಲಿ ಭಾರತಕ್ಕೆ ಸೌದಿ ಅರೇಬಿಯಾ ಅತ್ಯಂತ ಪ್ರಮುಖ ದೇಶವಾಗಿದೆ. ತೈಲ ಬೆಲೆಯಲ್ಲಿ ಏರಿಕೆಯಾದರೆ ಭಾರತದ ಆಮದು ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದರಿಂದ ವ್ಯಾಪಾರದಲ್ಲಿ ಅಸಮತೋಲನ ಉಂಟಾಗುತ್ತದೆ. ಬ್ಯಾರೆಲ್ ಮೇಲೆ ಒಂದು ಡಾಲರ್ ಏರಿಕೆಯಾದರೂ ಭಾರತವು ವಾರ್ಷಿಕ ವಾಗಿ 10,700 ಕೊಟಿ ರೂ. ಹೆಚ್ಚುವರಿ ವೆಚ್ಚ ಮಾಡಬೇಕಾಗುತ್ತದೆ. ಭಾರತ ಶೇ. 80ರಷ್ಟು ತೈಲ ವನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದರಲ್ಲಿ ಸೌದಿ ಅರೇಬಿಯಾದ ಪಾಲು ಕೂಡ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.
ಸೌದಿ ಅರೇಬಿಯಾದ ಅಬ್‌ಖೈಖ್ ಮತ್ತು ಖುರೈಸ್ ತೈಲ ಘಟಕಗಳ ಮೇಲೆ ಯೆಮೆನ್ ಬಂಡುಕೋರರು ಡ್ರೋನ್ ದಾಳಿ ನಡೆಸಿದ್ದು, ಇದರಿಂದಾಗಿ ಪ್ರತಿದಿನ 57 ಲಕ್ಷ ಬ್ಯಾರೆಲ್ ತೈಲ ಉತ್ಪಾದನೆ ಸ್ಥಗಿತಗೊಂಡಿದೆ.
ಇನ್ನು ಮಧ್ಯಪ್ರಾಚ್ಯವನ್ನೇ ಗಣನೆಗೆ ತೆಗೆದು ಕೊಂಡರೆ, ಸೋಮವಾರ ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ 3ರಿಂದ 5 ಡಾಲರ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಯುದ್ಧಕ್ಕೆ ಸಿದ್ಧರಿದ್ದೇವೆ: ಇರಾನ್
ಸೌದಿ ಅರೇಬಿಯಾದ ಮೇಲಿನ ದಾಳಿಗೆ ಇರಾನ್ ಕಾರಣ ಎಂದು ಅಮೆರಿಕ ಆರೋಪಿಸಿದೆ. ಆದರೆ ಅದನ್ನು ಇರಾನ್ ತಳ್ಳಿ ಹಾಕಿದೆ. ಸರಕಾರಿ ವಾಹಿನಿ ಜತೆಗೆ ಮಾತನಾಡಿದ ಇರಾನ್ ವಿದೇಶಾಂಗ ಇಲಾಖೆ ವಕ್ತಾರ ಅಬ್ಟಾಸ್ ಮೌಸವಿ “ಸೌದಿ ಅರೇಬಿಯಾದ ಮೇಲಿನ ದಾಳಿಗೆ ನಾವು ಕಾರಣ ಎಂಬ ಅಮೆರಿಕ ಆರೋಪ ನಿರಾಧಾರ. ಅಗತ್ಯಬಿದ್ದರೆ ಪೂರ್ಣ ಪ್ರಮಾಣದ ಯುದ್ಧಕ್ಕೂ ಸಿದ್ಧರಿದ್ದೇವೆ’ ಎಂದಿದ್ದಾರೆ.
ಇದರಿಂದಾಗಿ ಇರಾನ್ ಮತ್ತು ಅಮೆರಿಕದ ಮಧ್ಯೆ ಈಗಾಗಲೇ ಹದಗೆಟ್ಟಿರುವ ಸಂಬಂಧ ಮತ್ತಷ್ಟು ಕ್ಷೀಣಿಸುವ ಸಾಧ್ಯತೆಯೂ ಇದೆ. ಇದು ತೈಲ ಬೆಲೆಯ ಮೇಲೆಯೂ ಪರಿಣಾಮ ಬೀರಬಹುದು ಎನ್ನಲಾಗಿದೆ. ದಾಳಿಗೆ ಯೆಮೆನ್‌ನ ಹುತಿ ಬಂಡುಕೋರರು ಈಗಾಗಲೇ ಹೊಣೆ ಹೊತ್ತುಕೊಂಡಿದ್ದು, ಸೌದಿ ನೇತೃತ್ವದಲ್ಲಿ ಯೆಮೆನ್ ಬಂಡುಕೋರರ ಮೇಲೆ ಸೇನಾ ಪಡೆಗಳ ಒಕ್ಕೂಟ ನಡೆಸುತ್ತಿರುವ ದಾಳಿಗೆ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದೆ.