Advertisement
ಕೃಷ್ಣಾ ಮತ್ತು ಘಟಪ್ರಬಾ ಪ್ರವಾಹದಿಂದಾಗಿ ಕೃಷಿಯಷ್ಟೇ ಅಲ್ಲ, ಪ್ರಮುಖವಾಗಿ ನೇಕಾರಿಕೆ ಹಾಗೂ ಸಣ್ಣ ಕೈಗಾರಿಕೆಗಳಿಗೆ ಭಾರೀ ಹೊಡೆತ ಬಿದ್ದಿದೆ. ರೈತರು ಹಾಗೂ ನೇಕಾರರು ದೇಶದ ಎರಡು ಕಣ್ಣುಗಳು. ನೈಸರ್ಗಿಕ ವಿಕೋಪ ಈ ಬಾರಿ, ಈ ಎರಡು ಕಣ್ಣುಗಳಲ್ಲೂ ನೋವು ತುಂಬಿಸಿದೆ. ಪ್ರವಾಹದಿಂದಾಗಿ ಎರಡೂ ಕಣ್ಣುಗಳಲ್ಲಿ ಮುಂದೆ ನಾವು ಮೇಲೇಳುತ್ತೇವೆ ಎಂಬ ವಿಶ್ವಾಸವೇ ಮಾಯವಾಗಿದೆ.
Related Articles
Advertisement
ನೇಕಾರರ 100 ಕೋಟಿ ರೂ. ಸಾಲ ಮನ್ನಾ ಮಾಡಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. ಆದರೆ, ಅದು ಕೇವಲ ಸಹಕಾರ ಬ್ಯಾಂಕುಗಳ ಸಾಲಕ್ಕೆ ಮಾತ್ರ ಅನ್ವಯಿಸುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಸಾಲವನ್ನೂ ಸಹ ಮನ್ನಾ ಮಾಡಲೇಬೇಕಾಗಿದೆ. ಇಲ್ಲವಾದರೆ ಈಗಿನ ಸ್ಥಿತಿಯಲ್ಲಿ ನೇಕಾರರು ಸಾಲ ತುಂಬುವುದಂತೂ ಅಸಾಧ್ಯದ ಮಾತೇ ಸರಿ.
ಬಟ್ಟೆ ಸುಂದರ, ಬದುಕು ಬರ್ಬರ: ಇದೀಗ, ನಮ್ಮಲ್ಲಿ ಬಟ್ಟೆ ಖರೀದಿ ಮಾಡುವವರೇ ಇಲ್ಲದಂತಾಗಿದೆ. ಜಿಎಸ್‌ಟಿ ಜಾರಿಗೆ ತಂದ ಮೇಲೆ ನೇಕಾರ ಉದ್ಯಮ ಏಳುಬೀಳುಗಳ ಹಾದಿಯಲ್ಲಿ ಸಾಗುತ್ತಿತ್ತು. ಕಚ್ಚಾ ವಸ್ತುಗಳ ಕೊರತೆ, ಮಾರುಕಟ್ಟೆ ಏರಿಳಿತ, ತೆರಿಗೆ… ಹೀಗೆ ಹತ್ತಾರು ಸಮಸ್ಯೆಗಳಿಂದ ಕೂಡಿರುವ ನೇಕಾರನ ಬದುಕು ಆತ ನೇಯುವ ಬಟ್ಟೆಯಷ್ಟು ಸುಂದರವಾಗಿಲ್ಲ.
ರಬಕವಿ, ರಾಮದುರ್ಗ, ಕಮತಗಿ, ಗೋವಿನಕೊಪ್ಪ, ಖಾಸಬಾಗ, ವಡಗಾಂವ, ಸುಲೇಬಾಂವಿ, ಯಮಕನಮರಡಿ, ಸವದತ್ತಿ, ಮುನ್ನೋಳ್ಳಿ ಸೇರಿದಂತೆ ಕೈಮಗ್ಗ ಮತ್ತು ಪವರಲೂಮ್ ನೇಕಾರರು ಎಲ್ಲೆಲ್ಲಿ ಇದ್ದಾರೋ ಅಲ್ಲಿ ಜವಳಿ ಇಲಾಖೆಯವರು ಬಂದು ಕೂಡಲೇ ಸರ್ವೆ ಮಾಡಿ, ಅವರಿಗೆ ಅನುದಾನ, ಸಹಾಯಧನ ಒದಗಿಸಿ ಕೊಟ್ಟರೆ ಮಾತ್ರ ನೇಕಾರರ ಬದುಕು ಚೇತರಿಸಿಕೊಳ್ಳುತ್ತದೆ. ಇಲ್ಲವಾದರೆ ನೇಕಾರರ ಬದುಕು ಕಷ್ಟಕ್ಕೆ ಸಿಕ್ಕಿಕೊಳ್ಳುತ್ತದೆ. ಕಾರಣ ಇದರ ಕಡೆ ಸರಕಾರ ಗಮನ ಹರಿಸಬೇಕು. -ಉಮಾಶ್ರೀ, ಮಾಜಿ ಸಚಿವರು, ಮಾಜಿ ಶಾಸಕರು * ಕಿರಣ ಶ್ರೀಶೈಲ ಆಳಗಿ