Advertisement

ಬೆಂಗಳೂರಿಗೆ ಟ್ರಂಪ್‌ ಹೊಸ ಶಾಕ್‌; ಹೊರಗುತ್ತಿಗೆ ನಿಷೇಧ ವಿಧೇಯಕ ಮಂಡನೆ

03:45 AM Feb 05, 2017 | |

ವಾಷಿಂಗ್ಟನ್‌: “ಅಮೆರಿಕನ್ನರ ಉದ್ಯೋಗಗಳನ್ನು ಬೆಂಗಳೂರಿಗರು ಕಸಿಯುತ್ತಿದ್ದಾರೆ’ ಎಂದು ಈ ಹಿಂದೆ ಒಬಾಮ ಹೇಳಿದ್ದರು. ಚುನಾವಣಾ ಪ್ರಚಾರದ ವೇಳೆ ಡೊನಾಲ್ಡ್‌ ಟ್ರಂಪ್‌ ಕೂಡ ಅದನ್ನೇ ವಾಗ್ಧಾಳಿಗೆ ಬಳಸಿಕೊಂಡರು. ಆದರೆ, ಟ್ರಂಪ್‌ ಈಗ ಒಂದು ಹೆಜ್ಜೆ ಮುಂದೆ ಹೋಗಿ ಬೆಂಗಳೂರಿಗೆ ಶಾಕ್‌ ನೀಡಿದ್ದಾರೆ. ಹೊರಗುತ್ತಿಗೆ ಸಂಬಂಧಿಸಿದಂತೆ ಮಹತ್ವದ ಮಸೂದೆ ಜಾರಿಯ ಮೂಲಕ ಅಮೆರಿಕ ಸದ್ದಿಲ್ಲದೆ ಈ ಆಘಾತ ನೀಡಿದೆ!

Advertisement

ಬೆಂಗಳೂರಿನ ಕಾಲ್‌ ಸೆಂಟರ್‌ ಮತ್ತು ಬಿಪಿಒ ಉದ್ಯೋಗಗಳನ್ನು ಕಸಿಯಲು ಮಹತ್ವದ ಮಸೂದೆಯೊಂದು ಜನವರಿ 29ರಂದೇ ಮಂಡನೆಯಾಗಿದೆ. ಅದರಲ್ಲಿ ಹೊರಗುತ್ತಿಗೆ ನೀಡುವ ಕಂಪನಿಗಳಿಗೆ ಅಮೆರಿಕ ಸರ್ಕಾರ ನೀಡುವ ಸಬ್ಸಿಡಿಯನ್ನು ತಡೆಹಿಡಿಯುವುದು, ಅಂಥ ಕಂಪನಿಗಳ ಜೊತೆ ಸರ್ಕಾರ ವ್ಯವಹಾರ ನಿಲ್ಲಿಸುವ ಅಂಶಗಳೂ ಸೇರಿವೆ. 

ಭಾರತದ ಐಟಿ ವಲಯ ಎಚ್‌1ಬಿ ವೀಸಾ ಕುರಿತು ತಲೆಕೆಡಿಸಿಕೊಳ್ಳುತ್ತಿರುವಾಗಲೇ, ಈ ವೀಸಾಕ್ಕೆ ಸಂಬಂಧಿಸಿದಂತೆ ಅಮೆರಿಕ ಈ ಶಾಕ್‌ ನೀಡಿದೆ.

ಇಲ್ಲೇ ಓದಿ, ಇಲ್ಲೇ ನೆಲೆಸಿ!: ಅಮೆರಿಕ ಇದರೊಂದಿಗೆ ಇನ್ನೊಂದು ಮಹತ್ವದ ಮಸೂದೆ ಜಾರಿಮಾಡಿದೆ. ಜನವರಿ 20ರಂದು ವಿದೇಶಿ ವಿದ್ಯಾರ್ಥಿಗಳನ್ನು ಎಚ್‌ 1ಬಿ ವೀಸಾಕ್ಕಾಗಿಯೇ ಅಮೆರಿಕದಲ್ಲಿ ಓದಿಸುವ ವಿಧೇಯಕವನ್ನು ಅಲ್ಲಿನ ಸಂಸತ್‌ನಲ್ಲಿ ಮಂಡಿಸಲಾಗಿದೆ.  “ಅಮೆರಿಕದಲ್ಲೇ ಓದಿ, ಅಲ್ಲಿಯೇ ನೆಲೆಸಿ’ ಎನ್ನುವುದು ಮಸೂದೆಯ ಒಟ್ಟಾರೆ ಧ್ವನಿ. ಕೆಲವು ಕಂಪನಿಗಳು ಅಮೆರಿಕದ ಉದ್ಯೋಗಿಗಳನ್ನು ಕೆಳದರ್ಜೆಯಲ್ಲಿ ಕಾಣುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಮಂಡಿಸಲಾಗಿದೆ.  ವಿದೇಶಿ ಉದ್ಯೋಗಿಗಳಿಗಿಂತ, ಅಮೆರಿಕ ವಿವಿಯಲ್ಲಿ ಅಧ್ಯಯನಿಸುವ ವಿದ್ಯಾರ್ಥಿಗಳಿಗೆ ಹೆಚ್ಚು ಮಹತ್ವ ನೀಡಿ ಎಚ್‌ಧಿ1ಬಿ ವೀಸಾ ಒದಗಿಸುವುದಕ್ಕೂ ಈ ಮಸೂದೆ ನೆರವಾಗಲಿದೆ.

ಎಚ್‌1ಬಿ ವೀಸಾ ಹೊಂದಿದವರಿಗೆ ವಾರ್ಷಿಕ ವೇತನ ಕನಿಷ್ಠ 87 ಲಕ್ಷ ರೂ. (1,30,000 ಡಾಲರ್‌) ನೀಡಬೇಕೆಂಬ ಮಸೂದೆ ಮಂಡನೆಗೆ ಈಗಾಗಲೇ ಸಿದ್ಧತೆ ನಡೆದಿದೆ.  ಆದರೆ, ರಿಪಬ್ಲಿಕನ್‌ ಸರ್ಕಾರದ ಸಂಸದರು ಇದಕ್ಕೂ ವಿರೋಧ ಹೊಂದಿದೆ.

Advertisement

ಟ್ರಂಪ್‌ ನೀತಿಗೆ ತಡೆಯಾಜ್ಞೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶಿಸಿರುವ ವಲಸೆ ವಿರೋಧಿ ನೀತಿ ಈಗ ಕಾನೂನಿನ ಬಲೆಯಲ್ಲಿ ಸಿಲುಕಲು ಆರಂಭಿಸಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕೋರ್ಟ್‌ ಮೊರೆ ಹೋಗುವುದಾಗಿ ಎಚ್ಚರಿಸಿದ್ದ ಬೆನ್ನಲ್ಲೇ, ಇಲ್ಲಿನ ಜಿಲ್ಲಾ ನ್ಯಾಯಾಧೀಶರೊಬ್ಬರು ಈ ನೀತಿಗೆ ತಡೆಯಾಜ್ಞೆ ತಂದಿದ್ದಾರೆ.

ತಡೆಯಾಜ್ಞೆಗೆ ಸಹಿಹಾಕಿರುವ ಸೀಟಲ್‌ ಜಿಲ್ಲೆಯ ನ್ಯಾಯಾಧೀಶ ಜೇಮ್ಸ್‌ ರಾಬರ್ಟ್‌, “ವಿವೇಚನೆ ಇಲ್ಲದೆ ಟ್ರಂಪ್‌ ಜಾರಿ ತಂದಿರುವ ವಲಸೆ ವಿರೋಧಿ ನೀತಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ. ಈಗ ತಡೆಯಾಜ್ಞೆ ಜಾರಿಯಾಗಿದ್ದು, ಟ್ರಂಪ್‌ ಇದಕ್ಕೆ ತಲೆಬಾಗಲೇಬೇಕು. ಕಾನೂನಿನ ಮುಂದೆ ಯಾವ ಅಧ್ಯಕ್ಷರೂ ದೊಡ್ಡವರಲ್ಲ, ಅಮೆರಿಕದ ಈ ಹಿಂದಿನ ಎಲ್ಲ ಅಧ್ಯಕ್ಷರೂ ಕಾನೂನಿಗೆ ಗೌರವ ಕೊಡುತ್ತಲೇ ಬಂದಿದ್ದಾರೆ’ ಎಂದು ಹೇಳಿದ್ದಾರೆ.

ನಾನು ನನ್ನ ಜವಾಬ್ದಾರಿಯನ್ನು ಮರೆತಿಲ್ಲ. ಸರ್ಕಾರದ ನೀತಿಯ ಹಿಂದೆ ಅಮೆರಿಕನ್ನರ ರಕ್ಷಣೆ, ಉದ್ಯೋಗ ಮತ್ತು ಸಂಬಳಗಳು ಕೆಲಸ ಮಾಡಿವೆ. ಅಮೆರಿಕವನ್ನು ಪ್ರೀತಿಸುವವರಿಗಷ್ಟೇ ಮನ್ನಣೆ ನೀಡೋಣ.
– ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next