Advertisement
ರಾಜಾಜಿನಗರದ ವೆಸ್ಟ್ ಆಫ್ಕಾರ್ಡ್ ರಸ್ತೆ ನಿವಾಸಿ ಶೋಭಾ ಲಕ್ಷ್ಮೀನಾರಾಯಣ (28) ಆತ್ಮಹತ್ಯೆ ಮಾಡಿಕೊಂಡವರು. “ಹಾರ್ಮನ್’ ಎಂಬ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಎರಡು ದಿನಗಳಿಂದ ರಜೆಯಲ್ಲಿದ್ದ ಶೋಭಾ ಅವರು ಗುರುವಾರ ಬೆಳಗ್ಗೆ 7.30ರ ಸುಮಾರಿಗೆ ಎಂದಿನಂತೆ ಕೆಲಸಕ್ಕೆ ಬಂದಿದ್ದಾರೆ.
Related Articles
Advertisement
ಶೋಭಾ ಅವರ ತಾತನ (ಲಕ್ಷ್ಮೀನಾರಾಯಣ ತಂದೆ) ಹೆಸರಿನಲ್ಲಿ ಮಂಡ್ಯದಲ್ಲಿ ಜಮೀನು ಮತ್ತು ಬೆಂಗಳೂರಲ್ಲಿ ಮನೆ ಇದೆ. ಆಸ್ತಿ ವಿಚಾರವಾಗಿ ಶೋಭಾ ಮತ್ತು ದೊಡ್ಡಪ್ಪನ ಮಕ್ಕಳ ನಡುವೆ ಜಗಳವಾಗಿ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಕೋರ್ಟ್ ಮೇಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ. ಈ ವಿಚಾರವಾಗಿ ಶೋಭಾ ಮಾನಸಿಕ ಖನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.
ಖನ್ನತೆ, ಒತ್ತಡಕ್ಕೆ ಚಿಕಿತ್ಸೆ: ಒಂದು ವರ್ಷದಿಂದ ಒತ್ತಡಕ್ಕೊಳಗಾಗಿದ್ದ ಶೋಭಾ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಬೆಳಗ್ಗೆ ಎಂದಿನಂತೆ ಕಂಪನಿಯ ಕ್ಯಾಬ್‌ನಲ್ಲಿ ಕೆಲಸಕ್ಕೆ ತೆರಳಿದ್ದ ಆಕೆ ಬೆಳಗ್ಗೆ 7.30ರ ಸುಮಾರಿಗೆ ಲಾಗಿನ್ ಆಗಿದ್ದರು. ಬಳಿಕ ಸಹೋದ್ಯೋಗಿ ಸುಮಾ ಅವರೊಂದಿಗೆ ಸ್ವಲ್ಪಹೊತ್ತು ಮಾತನಾಡಿ ತನ್ನ ಚೇಂಬರ್ ಬಳಿ ತೆರಳಿದ್ದರು.
ಶೋಭಾ ಅವರು ಕೆಲಸ ಮಾಡುವ ಕಂಪನಿ ಕಟ್ಟಡದ ನಾಲ್ಕನೇ ಮಹಡಿಯಲ್ಲಿದ್ದು, ಚೇಂಬರ್‌ನಿಂದ ಐದನೇ ಮಹಡಿಗೆ ಹೋಗಿ ಅಲ್ಲಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಶೋಭಾ ಐದನೇ ಮಹಡಿಯಿಂದ ಜಿಗಿದಿದ್ದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಸುರೇಶ್ ಎಂಬುವರು ಕೂಡಲೇ “108 ಆ್ಯಂಬ್ಯುಲೆನ್ಸ್’ಗೆ ಕರೆ ಮಾಡಿದ್ದರು. ಆದರೆ, ಆ್ಯಂಬುಲೆನ್ಸ್ ಸ್ಥಳಕ್ಕೆ ಬರುವಷ್ಟರಲ್ಲಿ ತೀವ್ರ ರಕ್ತಸ್ರಾವವಾಗಿ ಶೋಭಾ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಶೋಭಾ ಬ್ಯಾಗ್‌ನಲ್ಲಿ ಸ್ಟ್ರೆಸ್ ಮ್ಯಾನೇಜ್‌ಮೇಂಟ್‌ಗೆ ಸಂಬಂಧಿಸಿದ ಎರಡು ಪುಸ್ತಕಗಳು ಸಿಕ್ಕಿವೆ. ಆಸ್ತಿ ವಿಚಾರವಾಗಿ ನೊಂದಿದ್ದ ಶೋಭಾ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಕುಟುಂಬದವರು ಹೇಳಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಆಸ್ತಿಗಾಗಿ ನಡೆಯಿತೇ ವಾಮಾಚಾರ?ಆಸ್ತಿ ವಿಚಾರವಾಗಿ ಶೋಭಾ ಅವರಿಗೆ ದೊಡ್ಡಪ್ಪನ ಮಕ್ಕಳಾದ ಕಿರಣ್, ಭಾಗ್ಯ ಮತ್ತಿತರರು ತೊಂದರೆ ಕೊಡುತ್ತಿದ್ದರು. ಶೋಭಾ ವಿರುದ್ಧ ವಾಮಾಚಾರ ಮಾಡಲು ಯತ್ನಿಸಿದ್ದರು ಎಂದು ಮೃತರ ಸಂಬಂಧಿ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತನಿಖೆ ಬಳಿಕ ಸತ್ಯಾಂಶ ತಿಳಿಯಲಿದೆ ಹಿರಿಯ ಅಧಿಕಾರಿ “ಉದಯವಾಣಿ’ಗೆ ತಿಳಿಸಿದ್ದಾರೆ.