Advertisement

ಯಕ್ಷಗಾನದ ಮೂಲ ಸ್ವರೂಪ ಉಳಿಯಬೇಕು: ಸಚಿವ ಶೋಭಾ ಕರಂದ್ಲಾಜೆ

11:38 PM Feb 11, 2023 | Team Udayavani |

ಉಡುಪಿ: ಭಾಷೆ, ಸಾಹಿತ್ಯ, ಮಾತುಗಾರಿಕೆ, ಪ್ರಬುದ್ಧತೆ, ಸಂಸ್ಕೃತಿ, ಸಂಸ್ಕಾರ ಎಲ್ಲವನ್ನು ಒಳಗೊಂಡಿರುವ ಯಕ್ಷಗಾನದ ಮೂಲ ಸ್ವರೂಪವನ್ನು ಉಳಿಸಿಕೊಳ್ಳಬೇಕು. ಇದಕ್ಕಾಗಿ ಸಾಮಾಜಿಕ ಪ್ರಸಂಗಗಳ ಬದಲಾಗಿ ಪೌರಾಣಿಕ ಪ್ರಸಂಗಗಳಿಗೆ ಆದ್ಯತೆ ನೀಡಬೇಕು ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಜಿಲ್ಲಾಡಳಿತ ವತಿಯಿಂದ ಎಂಜಿಎಂ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇವಸ್ಥಾನ, ಸಂಸ್ಕೃತಿ, ಸಂಸ್ಕಾರ, ವೇದ, ಪುರಾಣ, ನಾಟ್ಯ, ಹಾಡುಗಾರಿಕೆ ಹಾಗೂ ಯಕ್ಷಗಾನದ ನಡುವೆ ಅವಿನಾಭಾವ ಸಂಬಂಧವಿದೆ. ವೇದ, ಪುರಾಣಗಳ ಸಾರವನ್ನು ಯಕ್ಷಗಾನದ ಮೂಲಕ ಸುಲಭವಾಗಿ ಮಕ್ಕಳಿಗೆ ತಿಳಿಸಬಹುದು. ಈ ನಿಟ್ಟಿನಲ್ಲಿ ಶಾಲಾ ಪಠ್ಯಕ್ರಮದಲ್ಲಿ ಯಕ್ಷಗಾನವನ್ನು ಅಳವಡಿಸಬೇಕಿದೆ ಎಂದು ಹೇಳಿದರು.

ಯಕ್ಷಗಾನವನ್ನು ಧರ್ಮದ ದೃಷ್ಟಿಕೋನದಲ್ಲಿ ನೋಡಬಾರದು. ಧರ್ಮವನ್ನು ಮೀರಿ ನಿಂತ ಕಲೆಯಿದು. ಯಕ್ಷಗಾನ ವಿಷಯದಲ್ಲಿ ವಿವಾದವನ್ನು ಸೃಷ್ಟಿಸುವುದೂ ಸರಿಯಲ್ಲ. ಎಲ್ಲರೂ ಒಂದಾಗಿ ಯಕ್ಷಗಾನವನ್ನು ಉಳಿಸಿ, ಬೆಳೆಸಬೇಕು. ಇದಕ್ಕಾಗಿ ಸರಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ ಎಂದರು.

ಸಮ್ಮೇಳನ ಸಮಿತಿ ಕಾರ್ಯಾಧ್ಯಕ್ಷ ಹಾಗೂ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ| ಜಿ.ಎಲ್‌. ಹೆಗಡೆ ಪ್ರಸ್ತಾವನೆಗೈದರು.

Advertisement

ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ, ಶಾಸಕ ಕೆ. ರಘುಪತಿ ಭಟ್‌, ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಕೆ. ಉದಯ ಕುಮಾರ್‌ ಶೆಟ್ಟಿ, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಗುರ್ಮೆ ಸುರೇಶ್‌ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ., ಜಿಪಂ ಸಿಇಒ ಪ್ರಸನ್ನ ಎಚ್‌., ಕಟೀಲು ದೇವಸ್ಥಾನ ಅರ್ಚಕ ವಾಸುದೇವ ಆಸ್ರಣ್ಣ, ಕೊಲ್ಲೂರು ದೇವಸ್ಥಾನದ ಆಡಳಿತ ಮೊಕ್ತೇಸರ ಕೆರಾಡಿ ಚಂದ್ರಶೇಖರ ಶೆಟ್ಟಿ, ಕುಂಭಾಶಿ ವಿನಾಯಕ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯ, ಮಂದಾರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಚ್‌. ಧನಂಜಯ ಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತr ಉಪಸ್ಥಿತರಿದ್ದರು. ಸಮ್ಮೇಳನದ ಪ್ರಧಾನ ಸಂಚಾಲಕ ಪಿ. ಕಿಶನ್‌ ಹೆಗ್ಡೆ ಸ್ವಾಗತಿಸಿ, ಕೆ.ಎಂ.ಶೇಖರ್‌ ವಂದಿಸಿದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.

ಮೇಳದ ಪ್ರಮುಖ ಆಕರ್ಷಣೆ
ಯಕ್ಷಗಾನದ ಪಾರಂಪರಿಕ ದಿರಿಸುಗಳು, ಪ್ರಸಾಧನ ಸಾಮಗ್ರಿಗಳು, ದಶಕಗಳ ಹಿಂದಿನ ಮಾವಿನ ಸೊಪ್ಪಿನ ರಂಗಸ್ಥಳ, ಆಧುನಿಕ ರಂಗಸ್ಥಳ, ಸೆಲ್ಫಿ ಪಾಯಿಂಟ್‌, ಯಕ್ಷಗಾನಂ ಗೆಲ್ಗೆ ಮರಳು ಶಿಲ್ಪ, ಸ್ಥಳದಲ್ಲಿಯೇ ಯಕ್ಷಗಾನ ವೇಷ ಧರಿಸುವ, ಮುಖ ವರ್ಣಿಕೆ, ಕಿರೀಟ ಧಾರಣೆ ಹೀಗೆ ಯಕ್ಷಗಾನದ ಕೌತುಕಗಳ ಸ್ವಯಂ ಅನುಭವ ಪಡೆಯಲು ಅವಕಾಶವಿದೆ. ಹಿಂದಿನ ಕಾಲದ ರಂಗಸ್ಥಳ, ಅದರ ಚೌಕಿ, ವೇಷಭೂಷಣಗಳ ಪೆಟ್ಟಿಗೆ, ಯಕ್ಷಗಾನಕ್ಕೆ ಸಂಬಂಧಿಸಿದ ವಿವಿಧ ಪುಸ್ತಕಗಳ ಪ್ರದರ್ಶನ, ಸುಮಾರು 200 ಕೀರ್ತಿಶೇಷ ಹಿರಿಯ ಯಕ್ಷ ಸಾಧಕರ ಭಾವಚಿತ್ರ ಸಹಿತ ಪರಿಚಯದ ಜತೆಗೆ ವಿವಿಧ ಮಳಿಗೆಗಳು ಪ್ರಮುಖ ಆಕರ್ಷಣೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next