ಉಡುಪಿ: ಕೇಂದ್ರ ಸರಕಾರದ ಮಟ್ಟದಲ್ಲಿ ಮಂಜೂರಾತಿಗೆ ಬಾಕಿ ಇರುವ ಜಿಲ್ಲೆಯ ವಿವಿಧ ಯೋಜನೆ ಮತ್ತು ಕಾಮಗಾರಿಗಳ ಪಟ್ಟಿಯನ್ನು ಕೂಡಲೇ ಸಲ್ಲಿಸಿ. ಈ ಬಗ್ಗೆ ಕೇಂದ್ರದ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ, ಈ ಬಗ್ಗೆ ಶೀಘ್ರದಲ್ಲಿ ಮಂಜೂರುಗೊಳಿಸಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಶುಕ್ರವಾರ ವೀಡಿಯೋ ಸಭೆಯ ಮೂಲಕ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾನ್ಸೂನ್ ಹಾನಿಯ ಕುರಿತು ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಾಗರಮಾಲಾ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳ ಬಗ್ಗೆ ವಿವರವಾದ ಮಾಹಿತಿ ನೀಡಿ. ಉಪ್ಪುಂದದಲ್ಲಿ 130 ಕೋಟಿ ರೂ. ವೆಚ್ಚದಲ್ಲಿ ಬಂದರು ನಿರ್ಮಾಣ ಕುರಿತಂತೆ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗಿದೆ. ಕೇಂದ್ರದಲ್ಲಿ ಹೊಸ ಮೀನುಗಾರಿಕಾ ಮಸೂದೆ ಸಿದ್ಧವಾಗುತ್ತಿದ್ದು, ಈ ಬಗ್ಗೆ ಸಲಹೆ ಮತ್ತು ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಸಲ್ಲಿಸಿ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಇದನ್ನೂ ಓದಿ :ಗಾಯಗೊಂಡ ಸಿಂಗಳೀಕದ ಮರಿಗೆ ಮಾನವೀಯ ಚಿಕಿತ್ಸೆ : ಮರಳಿ ತಾಯಿ ಮಡಿಲಿಗೆ
ಜಿಲ್ಲೆಯಲ್ಲಿ ಕೋವಿಡ್ 3ನೆ ಅಲೆ ಎದುರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರಪಾಲನೆ ಕುರಿತು ಪರಿಶೀಲಿಸಿ. ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಪಾಲನೆ ಕುರಿತು ಕಾರ್ಖಾನೆಗಳಿಗೆ ಭೇಟಿ ನೀಡಿ ಅಧಿಕಾರಿಗಳು ಪರಿಶೀಲಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಕಾಮಗಾರಿ ಆರಂಭಿಸಲಾಗಿರುವ ಆಕ್ಸಿಜನ್ ಘಟಕಗಳು ಶೀಘ್ರದಲ್ಲಿ ಕಾರ್ಯನಿರ್ವಹಣೆ ಮಾಡುವಂತೆ ಕ್ರಮ ಕೈಗೊಳ್ಳಿ. ದುರ್ಬಲ ವರ್ಗದವರಿಗೆ ಆದ್ಯತೆಯಲ್ಲಿ ಕೋವಿಡ್ ಲಸಿಕೆ ನೀಡಿ. ಅಪೌಷ್ಠಿಕ ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಠಿಕ ಆಹಾರ ಸೌಲಭ್ಯ ಒದಗಿಸುವಂತೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡದಂತೆ ಎಚ್ಚರವಹಿಸುವಂತೆ ಸೂಚಿಸಿದರು.
ಮಾನ್ಸೂನ್ ಅವಧಿಯಲ್ಲಿ ನೆರೆಹಾನಿಗೊಳಗಾಗುವ ಸಂತ್ರಸ್ತರಿಗೆ ತತ್‌ಕ್ಷಣದಲ್ಲಿ ಪರಿಹಾರ ವಿತರಿಸುವಂತೆ ತಿಳಿಸಿದ ಸಂಸದರು, ಹಾನಿಗೊಳಗಾಗುವ ತಗ್ಗು ಪ್ರದೇಶಗಳನ್ನು ಗುರುತಿಸಿಕೊಂಡು ಆ ಪ್ರದೇಶದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಯಾವುದೇ ಸಂದರ್ಭದಲ್ಲಿ ನೆರವು ನೀಡಲು ಸಿದ್ಧವಾಗಿರುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷ ಪ್ರಾಕೃತಿಕ ವಿಕೋಪದಿಂದ 110 ಕೋಟಿ ರೂ. ಮೂಲಸೌಕರ್ಯಕ್ಕೆ ಹಾನಿಯಾಗಿದ್ದು ಇದರಲ್ಲಿ ಸಮುದ್ರ ಕೊರೆತದಿಂದ 99 ಕೋಟಿ ರೂ. ಹಾನಿ ಸಂಭವಿಸಿದೆ. ಈ ಬಗ್ಗೆ ಪರಿಹಾರಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೋವಿಡ್ 3ನೇ ಅಲೆ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಒಟ್ಟು 50 ಮಕ್ಕಳ ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯ 2.40 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯ ನಡೆಯುತ್ತಿದೆ. ಎಂಡೋಸಲ್ಫಾನ್ ಪೀಡಿತರಿಗೆ ಹಾಗೂ ಅವರ ಕುಟುಂಬದವರಿಗೆ ಲಸಿಕೆ ನೀಡಲಾಗುತ್ತಿದೆ. ನೆರೆ ಪರಿಹಾರಕ್ಕಾಗಿ 11 ಕೋಟಿ ರೂ. ಹಣ ಇದ್ದು, ಅನುದಾನದ ಕೊರತೆ ಇಲ್ಲ. ವಿಕೋಪ ನಿರ್ವಹಣೆಗೆ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.