ಬೆಂಗಳೂರು: ಕಳೆದ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಗೆದ್ದಿದ್ದ ಕೇಂದ್ರದ ರಾಜ್ಯ ಖಾತೆಯ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರು ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಶೋಭಾ ಕರಂದ್ಲಾಜೆ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೆಲ ಕಾರ್ಯಕರ್ತರಿಂದ ಗೋ ಬ್ಯಾಕ್ ಚಳವಳಿ ಎದುರಿಸಿದ್ದರು. ಆದರೆ ಬೆಂಗಳೂರು ಉತ್ತರದಲ್ಲಿ ಸಂಸದರಾಗಿದ್ದ ಡಿ.ವಿ.ಸದಾನಂದ ಗೌಡರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ ಶೋಭಾ ಅವರಿಗೆ ಟಿಕೆಟ್ ನೀಡಿತ್ತು. ಇದೀಗ ಬೆಂಗಳೂರು ಉತ್ತರದ ಮತದಾರರು ಸಹ ಶೋಭಾ ಅವರಿಗೆ ಜೈ ಎಂದಿದ್ದಾರೆ.
ಕಳೆದ ಬಾರಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದಾಗಿ ತುಮಕೂರಿನ ಸಂಸದರಾಗಿದ್ದರೂ ಟಿಕೆಟ್ ಕಳೆದುಕೊಂಡಿದ್ದ ಮುದ್ದ ಹನುಮೇಗೌಡ ಆ ಬಳಿಕ ಬಿಜೆಪಿ ಸೇರಿದ್ದರು. ಆದರೆ ಈ ಬಾರಿ ಬಿಜೆಪಿ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿಲ್ಲ ಎಂದು ಖಾತ್ರಿ ಆದ ಬಳಿಕ ಮತ್ತು ಕಾಂಗ್ರೆಸ್‌ನ ಕೆಲ ನಾಯಕರ ಒತ್ತಾಸೆ ಮೇರೆಗೆ ಮತ್ತೆ ಕಾಂಗ್ರೆಸ್‌ಗೆ ವಾಪಸ್ ಆಗಿ ತುಮಕೂರಿನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆರಂಭದಲ್ಲಿ ಮುದ್ದಹನುಮೇ ಗೌಡರಿಗೆ ಉತ್ತಮ ವಾತಾವರಣವಿದೆ ಎಂಬ ಭಾವನೆ ಮೂಡಿದ್ದೂ ಸಹ ಆ ಬಳಿಕ ವಿ.ಸೋಮಣ್ಣರ ಪ್ರಚಾರದ ಮುಂದೆ ಮಂಕಾದರು.
ಇನ್ನು ಜಯಪ್ರಕಾಶ್ ಹೆಗ್ಡೆ ಅವರು ಸಹ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಟೆಕಟ್ ಸಿಗುವುದಿಲ್ಲ ಎಂದು ಸ್ಪಷ್ಟವಾದ ಬಳಿಕ ಕಾಂಗ್ರೆಸ್‌ನ ಕದ ಬಡಿಯುತ್ತಿದ್ದರು. ಅತ್ತ ಕಾಂಗ್ರೆಸ್‌ಗೂ ಈ ಕ್ಷೇತ್ರದಲ್ಲಿ ಬಿಜೆಪಿಯನ್ನು ಮಣಿಸುವ ಸೂಕ್ತ ಅಭ್ಯರ್ಥಿ ತಮ್ಮ ಬತ್ತಳಿಕೆಯಲ್ಲಿ ಇಲ್ಲವೆಂದು ಅರಿವಾಗುತ್ತಿದ್ದಂತೆ ಜಯಪ್ರಕಾಶ್ ಹೆಗ್ಡೆ ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಟಿಕೆಟ್ ನೀಡಿತ್ತು. ಆದರೆ ಜಯಪ್ರಕಾಶ್ ಹೆಗ್ಡೆ ಅವರನ್ನು ಮತದಾರರು ಕೈ ಹಿಡಿಯಲಿಲ್ಲ.