Advertisement

ಸೋಲುವ ಭೀತಿ ನನಗಿಲ್ಲ ; ಪ್ರಮೋದ್‌ ಹತಾಶೆಗೆ ಅವರ ಹೇಳಿಕೆಗಳೇ ಸಾಕ್ಷಿ

02:54 AM Apr 13, 2019 | Team Udayavani |

ಉಡುಪಿ: ನಾಮಪತ್ರ ಸಲ್ಲಿಕೆಯಾದಂದಿನಿಂದ ನಾನು ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದೇನೆ. ನಾಯಕರು, ಕಾರ್ಯಕರ್ತರು “ಮತ್ತೂಮ್ಮೆ ಮೋದಿ ಪ್ರಧಾನಿ’ ಎಂಬ ಘೋಷಣೆಯೊಂದಿಗೆ ಹಗಲು ರಾತ್ರಿ ಶ್ರಮಿಸುತ್ತಿದ್ದು, ಬಿಜೆಪಿ ಗೆಲುವು ನಿಶ್ಚಿತವಾಗಿದೆ.

Advertisement

ಸೋಲುವ ಭೀತಿ ಇರುವುದು ಮೈತ್ರಿ ಪಕ್ಷದ ಅಭ್ಯರ್ಥಿಗೆ. ಅವರು ಹತಾಶರಾಗಿರುವುದಕ್ಕೆ ಅವರ ಹೇಳಿಕೆಗಳೇ ಸಾಕ್ಷಿ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಕಾಪು ಕ್ಷೇತ್ರದ ಹಿರಿಯಡಕದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.ಕ್ಷೇತ್ರದ 7 ಮಂದಿ ಶಾಸಕರು ಮತ್ತು 2 ಜಿಲ್ಲೆಗಳ ಅಧ್ಯಕ್ಷರು, ಸಾವಿರಾರು ಮುಖಂಡರು ಹಾಗೂ ಕಾರ್ಯಕರ್ತರು ಪ್ರಚಾರದಲ್ಲಿ ನಿರತರಾಗಿದ್ದು, ಈ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚು ಅಂತರದಿಂದ ಗೆಲ್ಲುವುದಲ್ಲಿ ಸಂಶಯವೇ ಇಲ್ಲ ಎಂದರು.

ಕಾಂಗ್ರೆಸ್‌ನವರು 60 ವರ್ಷಗಳಿಂದ ಇಂದಿರಾ ಗಾಂಧಿ ಹೆಸರನ್ನು ಹೇಳುತ್ತಾ ಅವರ ಮತ್ತು ರಾಜೀವ್‌ ಗಾಂಧಿ ಅಂತ್ಯಸಂಸ್ಕಾರದ ವೀಡಿಯೊ ತುಣುಕುಗಳನ್ನು ತೋರಿಸಿ ಮತ ಕೇಳಬಹುದಾದರೆ ಬಿಜೆಪಿ ಕಾರ್ಯಕರ್ತರು ಈ ದೇಶಕ್ಕೆ ಗೌರವ ತಂದ, ಐದೇ ವರ್ಷಗಳಲ್ಲಿ ಅದ್ಭುತ ಸಾಧನೆ ಮಾಡಿದ, ಜಗತ್ತಿಗೆ ಬಲಿಷ್ಠ ಭಾರತವನ್ನು ಪರಿಚಯಿಸಿದ ಹೆಮ್ಮೆಯ ಪ್ರಧಾನಿಯ ಹೆಸರನ್ನು ಏಕೆ ಬಳಸಬಾರದು? ಮೈತ್ರಿ ಪಕ್ಷದವರಿಗೆ ಇದನ್ನು ಕೇಳಲು ನೈತಿಕತೆ ಇದೆಯೇ ಎಂದು ಶೋಭಾ ಪ್ರಶ್ನಿಸಿದರು.

ಈ ಬಾರಿ ಚುನಾವಣೆಯಲ್ಲಿ ಕನಿಷ್ಠ ಚಿಹ್ನೆಯನ್ನು ಉಳಿಸಿ ಕೊಳ್ಳಲು ಸಾಧ್ಯವಾಗದ ಕಾಂಗ್ರೆಸಿಗರು ಹತಾಶರಾಗಿ ಪಕ್ಷ ಬಿಟ್ಟ ಪ್ರಮೋದ್‌ ಅವರಿಂದ ಏನೇನೋ ಹೇಳಿಕೆ ನೀಡಿಸುತ್ತಿರುವುದು ಹಾಸ್ಯಾಸ್ಪದ ಎಂದರು.

Advertisement

ಉತ್ತರಿಸುವ ಅಗತ್ಯವಿಲ್ಲ
ಉಸ್ತುವಾರಿ ಸಚಿವರಾಗಿದ್ದ ಪ್ರಮೋದ್‌ ಅವರು ಉಡುಪಿ ವಿಧಾನಸಭಾ ಕ್ಷೇತ್ರದಲ್ಲೇ ತಿರಸ್ಕರಿಸಲ್ಪಟ್ಟು, ಅಸ್ತಿತ್ವ ಕಳೆದುಕೊಂಡ ದುರ್ಬಲ ಅಭ್ಯರ್ಥಿಯಾಗಿದ್ದಾರೆ. ತನ್ನ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಒಂದು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಗೆಲ್ಲಲಾಗದೆ, ಸಂಪೂರ್ಣ ಹತಾಶರಾಗಿ ನಿರಂತರವಾಗಿ ಬೇರೆ ಪಕ್ಷಗಳ ಬಾಗಿಲು ಬಡಿಯುತ್ತಿರುವ ದುರ್ಬಲ ವ್ಯಕ್ತಿಯ ಹೇಳಿಕೆಗಳಿಗೆ ಉತ್ತರಿಸುವ ಅಗತ್ಯ ಬಿಜೆಪಿಗರಿಗಿಲ್ಲ ಎಂದು ಶೋಭಾ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರ “ಆಯುಷ್ಮಾನ್‌ ಭಾರತ’ ಯೋಜನೆ ಒಂದು ಕುಟುಂಬಕ್ಕೆ 5 ಲಕ್ಷ ರೂ. ವರೆಗಿನ ವೈದ್ಯಕೀಯ ವೆಚ್ಚ ಭರಿಸುವ ಅದ್ಭುತ ಯೋಜನೆ ಯಾಗಿದ್ದು, ಕೋಟ್ಯಂತರ ಜನರು ಇದರ ಫ‌ಲಾನು ಭವಿಗಳಾಗಿದ್ದಾರೆ. ಜನೌಷಧ ಮಳಿಗೆ ತೆರೆದು ಅಗ್ಗದ ದರದಲ್ಲಿ ಔಷಧ ನೀಡಿದ್ದಾರೆ. ಉಜ್ವಲ ಯೋಜನೆ ಜಾರಿಗೆ ತಂದು ಕೋಟ್ಯಂತರ ಮಹಿಳೆಯರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ದೀನದಯಾಳು ಗ್ರಾಮೀಣ ವಿದ್ಯುದೀಕರಣ ಮೂಲಕ ಬಡವರ ಮನೆ ಬೆಳಗಿದ್ದಾರೆ. ಸ್ವತ್ಛ ಭಾರತದ ನಿರ್ಮಾತೃ, ಲಕ್ಷಾಂತರ ಉದ್ಯೋಗ ಸೃಷ್ಟಿಸಿ ಯುವಕರ ಬಾಳಿಗೆ ಭದ್ರತೆಯನ್ನು ನೀಡಿದ್ದು, ವಿವಿಧ ವಿಮಾ ಯೊಜನೆಗಳ ಮೂಲಕ ಅಶಕ್ತರ ಬಾಳಿನಲ್ಲಿ ಶಕ್ತಿ ತುಂಬಿದ್ದಾರೆ ಎಂದರು.

ಶತ್ರು ರಾಷ್ಟ್ರಗಳಿಂದ, ಉಗ್ರರಿಂದ ದೇಶವನ್ನು ಮುಕ್ತ ಗೊಳಿಸಿದ ಪ್ರಧಾನಿಯನ್ನು ಜನ ಮರೆಯುವರೇ? ಸಂಕಲ್ಪಿತ ಭಾರತ, ಸಶಕ್ತ ಭಾರತಕ್ಕಾಗಿ ಮೋದಿಯೊಂದಿಗೆ ಕೈ ಜೋಡಿಸಿ ಎಂದು ಶೋಭಾ ವಿನಂತಿಸಿದರು.

ಕುಯಿಲಾಡಿ ಸುರೇಶ್‌ ನಾಯಕ್‌, ಗುರ್ಮೆ ಸುರೇಶ್‌ ಶೆಟ್ಟಿ, ಲಾಲಾಜಿ ಆರ್‌. ಮೆಂಡನ್‌, ಕುತ್ಯಾರು ನವೀನ್‌ ಶೆಟ್ಟಿ, ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಉಮೇಶ್‌ ಶೆಟ್ಟಿ, ಹರೀಶ್‌, ಪ್ರವೀಣ್‌ ಪೂಜಾರಿ, ಸಂಧ್ಯಾ ಕಾಮತ್‌, ಜಿಯಾನಂದ ಹೆಗ್ಡೆ, ಸುರೇಶ್‌ ಶೆರ್ವೆಗಾರ್‌, ಸತ್ಯಾನಂದ ನಾಯಕ್‌, ಅಶೋಕ್‌ ಜೋಗಿ, ಸವಿತಾ ನಾಯಕ್‌ ಉಪಸ್ಥಿತರಿದ್ದರು.


Advertisement

Udayavani is now on Telegram. Click here to join our channel and stay updated with the latest news.

Next