ಕಾರ್ಕಳ : ರಾಷ್ಟ್ರಧ್ವಜಕ್ಕೆ ಜಾತಿ, ಧರ್ಮದ ಭೇದವಿಲ್ಲ. ದೇಶವಾಸಿಗಳೆಲ್ಲರೂ ದೇಶಭಕ್ತರಾಗಬೇಕು. ಎಲ್ಲರ ಮನದಲ್ಲೂ ತ್ರಿವರ್ಣ ಧ್ವಜದ ಬಗ್ಗೆ ಗೌರವ ಹುಟ್ಟಬೇಕು ಎನ್ನುವ ಕಾರಣಕ್ಕೆ ಹರ್ ಘರ್ ತಿರಂಗಾ ಅಭಿಯಾನ ದೇಶದೆಲ್ಲೆಡೆ ನಡೆಯುತ್ತಿದೆ. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ಲಕ್ಷಾಂತರ ಮಂದಿಯ ಆತ್ಮಗಳಿಗೆ ಅಮೃತ ಮಹೋತ್ಸವ ಸಂದರ್ಭ ಗೌರವ ಸಲ್ಲಿಸಬೇಕಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಜಿಲ್ಲಾ ಯುವ ಮೋರ್ಚಾದ ವತಿಯಿಂದ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ನಗರದಲ್ಲಿ ನಡೆದ ಬೃಹತ್ ತಿರಂಗಾ ಯಾತ್ರೆಯಲ್ಲಿ ಅವರು ಮಾತನಾಡಿದರು.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೇನಾನಿ ಗಳಿಂದ ನಾವಿಂದು ಬದುಕುತ್ತಿದ್ದೇವೆ. 15 ಸಾವಿರ ಕಿ.ಮೀ. ದೂರದಲ್ಲಿರುವ ದೇಶದ ಗಡಿಯಲ್ಲಿ ನಮ್ಮ ಯೋಧರು ಪ್ರಾಣವನ್ನು ಪಣಕ್ಕಿಟ್ಟು ನಮ್ಮನ್ನು ಕಾಯುತ್ತಿದ್ದಾರೆ. ಅವರ ಹೋರಾಟದ ಜತೆ ನಾವೆಲ್ಲರೂ ನಿಲ್ಲಬೇಕಿದೆ ಎಂದರು.
ಅವಿಭಜಿತ ಜಿಲ್ಲೆಯ ಕೊಡುಗೆ ಸ್ಮರಣೀಯ
ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ದೊಡ್ಡ ಮಟ್ಟದಲ್ಲಿದೆ. ಸ್ವಾತಂತ್ರ್ಯ ಹೋರಾಟಕ್ಕೂ ಮೊದಲು ಪೋರ್ಚುಗೀಸರ ವಿರುದ್ಧ ರಣಕಹಳೆಯನ್ನು ವೀರರಾಣಿ ಅಬ್ಬಕ್ಕ ಮೊಳಗಿಸಿದ್ದರು. ಸುಳ್ಯದ ರೈತ ನಾಯಕರು ಬ್ರಿಟಿಷರ ವಿರುದ್ಧ ಸಿಡಿದೆದ್ದು 12 ದಿನಗಳ ಕಾಲ ಸ್ವತಂತ್ರರಾಗಿದ್ದರು.
ದ.ಕ., ಉಡುಪಿಯ ಹಿರಿಯರು ಸ್ವಾತಂತ್ರ್ಯಕ್ಕೆ ನೀಡಿದ ಕೊಡುಗೆ ಯನ್ನು ಸ್ಮರಿಸಿ ದೇಶ ಪ್ರೇಮ ಬೆಳೆಸಿಕೊಳ್ಳೋಣ ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಬಿಜೆಪಿ ಪ್ರಭಾರಿ ಉದಯ ಕುಮಾರ್, ಯಶಪಾಲ್ ಸುವರ್ಣ, ನವೀನ್ ಶೆಟ್ಟಿ ಕುತ್ಯಾರು, ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಹಿರಿಯರಾದ ಬೋಳ ಪ್ರಭಾಕರ ಕಾಮತ್, ಎಂ.ಕೆ. ವಿಜಯಕುಮಾರ್ ವೇದಿಕೆಯಲ್ಲಿದ್ದರು.
ವಿಖ್ಯಾತ್ ಶೆಟ್ಟಿ ಸ್ವಾಗತಿಸಿ, ಸುಹಾಸ್ ಶೆಟ್ಟಿ ವಂದಿಸಿದರು. ಸ್ವರಾಜ್ ಮೈದಾನದಿಂದ ಗಾಂಧಿ ಮೈದಾನದ ತನಕ 75 ಮೀ. ಉದ್ದದ ತಿರಂಗಾ ಯಾತ್ರೆ ನಡೆಯಿತು. ಯುವ ಮೋರ್ಚಾ ಸದಸ್ಯರು, ವಿವಿಧ ಘಟಕದವರು ರ್ಯಾಲಿಯಲ್ಲಿ ಭಾಗವಹಿಸಿದ್ದರು.