Advertisement

ಕಟಾವು ವೇಳೆಯೇ ಭತ್ತ ಖರೀದಿ: ಶೋಭಾ ಭರವಸೆ

12:49 AM Mar 19, 2022 | Team Udayavani |

ಉಡುಪಿ: ಉಭಯ ಜಿಲ್ಲೆಗಳ ರೈತರು ಬೆಳೆಯುವ ಎಂಒ-4 ಸೇರಿದಂತೆ ವಿವಿಧ ತಳಿಗಳ ಭತ್ತವನ್ನು ಕಟಾವು ಸಂದರ್ಭದಲ್ಲೇ ಬೆಂಬಲ ಬೆಲೆಯಡಿ ಖರೀದಿಸಲು ಕೇಂದ್ರ ಸರಕಾರ ಸಮ್ಮತಿ ನೀಡಿದೆ. ಈ ಬಗ್ಗೆ ಆಯಾ ರಾಜ್ಯ ಸರಕಾರಗಳು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೇಂದ್ರ ಕೃಷಿ ಖಾತೆಯ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ರಾಜ್ಯ ಸರಕಾರದ ಪ್ರಸ್ತಾವನೆ ವಿಳಂಬವಾದರೆ ಬೆಂಬಲ ಬೆಲೆಯಡಿ ಭತ್ತದ ಖರೀದಿ ತಡವಾಗುತ್ತದೆ. ಹೀಗಾಗಿ ಕಟಾವು ಸಂದರ್ಭದಲ್ಲೇ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ದೇಶದಲ್ಲಿ 300ಕ್ಕೂ ಅಧಿಕ ತಳಿಗಳ ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ಕೇಳುತ್ತಿದ್ದಾರೆ. ಭತ್ತದ ಬೇಸಾಯ ಹವಾಮಾನ ಆಧಾರಿತವಾಗಿದ್ದು, ತಮಿಳುನಾಡು, ಕೇರಳಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಕಟಾವು ತಡವಾಗುತ್ತದೆ. ಹೀಗಾಗಿ ಆಯಾಯ ರಾಜ್ಯ ಸರಕಾರವೇ ಬೆಂಬಲ ಬೆಲೆ ಖರೀದಿಗೆ ಸೂಕ್ತ ಸಮಯ ನಿಗದಿಪಡಿಸಬೇಕು. ಸ್ಥಳೀಯ ಭತ್ತ ಖರೀದಿಗೆ ಕೇಂದ್ರ ಸರಕಾರ ಅನುಮತಿ ನೀಡಿದ್ದು, ಬೇರೆ ರಾಜ್ಯಗಳಿಂದಲೂ ಈಗ ಬೇಡಿಕೆ ಬರುತ್ತಿದೆ ಎಂದು ಶುಕ್ರವಾರ ಜಿಲ್ಲಾಧಿಕಾರಿ ಸಂಕೀರ್ಣದ ತಮ್ಮ ಕಚೇರಿಯಲ್ಲಿ ಅಹ ವಾಲು ಸ್ವೀಕ ರಿ ಸಿದ ಸಂದರ್ಭ ಮಾಧ್ಯಮದವರಿಗೆ ಶೋಭಾ ತಿಳಿಸಿದರು.

ನ್ಯಾಯಾಲಯದ ತೀರ್ಪು :

ಮಲ್ಪೆ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಅಗಲಗೊಳಿಸುವುದಕ್ಕೆ ಸಂಬಂಧಿಸಿ ಪರ್ಕಳದಲ್ಲಿ 8 ಮಂದಿ ಕೋರ್ಟ್‌ಗೆ ಹೋಗಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಈ ಭಾಗದಲ್ಲಿ ಹೆದ್ದಾರಿ ಭೂಸ್ವಾಧೀನಕ್ಕೆ ಭೂ ಸಂತ್ರಸ್ತರಿಗೆ 2.5 ಕೋ.ರೂ.ಗಳಿಂದ 3 ಕೋ.ರೂ.ಗಳವರೆಗೆ ಪರಿಹಾರ ಸಿಕ್ಕಿದ್ದರೂ ವ್ಯಾಜ್ಯ ನಿಲ್ಲಿಸುತ್ತಿಲ್ಲ. ಶೀಘ್ರವೇ ಕೋರ್ಟ್‌ನಲ್ಲಿ ಇದರ ವಿಚಾರ ನಡೆಯಲಿದ್ದು, ತೀರ್ಪು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ. ಜನ ಸಾಮಾನ್ಯರ ಜತೆಗೆ ಶಿವಮೊಗ್ಗ, ಶೃಂಗೇರಿ ಭಾಗದಿಂದ ಬರುವ ಆ್ಯಂಬುಲೆನ್ಸ್‌ಗಳಿಗೂ ಈ ರಸ್ತೆಯನ್ನು ಅಗಲಗೊಳಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಕುಟುಂಬ ರಾಜಕಾರಣದಿಂದ ಜಾತಿ ರಾಜಕಾರಣ :

Advertisement

ಕುಟುಂಬ ರಾಜಕಾರಣದಿಂದ ಜಾತಿ ರಾಜಕಾರಣ ಆರಂಭವಾಗುತ್ತದೆ. ಇದು ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿ ಇಂದಿರಾ, ಸೋನಿಯಾ, ರಾಹುಲ್‌, ಪ್ರಿಯಾಂಕಾ ಗಾಂಧಿ -ಹೀಗೆ ಕುಟುಂಬದವರೇ ಬರುತ್ತಿರುವುದರಿಂದ ದೇಶಕ್ಕೆ ಯಾವ ಲಾಭವಿಲ್ಲ. ಈ ನಿಟ್ಟಿನಲ್ಲಿ ಪ್ರಧಾನಿ ಕುಟುಂಬ ರಾಜಕಾರಣ ಒಳ್ಳೆಯ ದಲ್ಲ ಎಂದಿದ್ದಾರೆ. ದೇಶದ ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯವಿದೆ ಎಂದು ಶೋಭಾ ಹೇಳಿದರು.

ಅಹವಾಲು ಸ್ವೀಕಾರ :

ಕುಂದಾಪುರ ಮೇಲ್ಸೇತುವೆಯ ಸರ್ವೀಸ್‌ ರಸ್ತೆಯ ಸಮಸ್ಯೆಯನ್ನು ಬಗೆಹರಿಸುವಂತೆ ಕುಂದಾಪುರ ಪುರಸಭೆಯ ಸದಸ್ಯರು ಹಾಗೂ ಅಲ್ಲಿನ ಬಿಜೆಪಿ ಮುಖಂಡರು ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಮನವಿ ಸಲ್ಲಿಸಿದರು. ತತ್‌ಕ್ಷಣ ಹೆದ್ದಾರಿ ಅಧಿಕಾರಿಗಳಿಗೆ ಕರೆ ಮಾಡಿದ ಸಚಿವರು ಸಮಸ್ಯೆಗೆ ಶೀಘ್ರ ಪರಿಹಾರ ನೀಡುವಂತೆ ನಿರ್ದೇಶನ ನೀಡಿದರು. ಬ್ರಹ್ಮಾವರ ವಕೀಲರ ಸಮಿತಿಯಿಂದ ಬ್ರಹ್ಮಾವರದಲ್ಲಿ ನ್ಯಾಯಾಲಯ ನಿರ್ಮಾಣದ ಬಗ್ಗೆ ಮನವಿ ಸಲ್ಲಿಸಲಾಯಿತು. ಅನಂತರ ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಿದರು. ಇದಕ್ಕೆ ಮುನ್ನ ಸಚಿವರು ಜಿಲ್ಲೆಯ ಗಂಭೀರ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಮತ್ತು ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ಅವರೊಂದಿಗೆ ಚರ್ಚೆ ನಡೆಸಿದರು.

“ಸವಲತ್ತು ಬೇಕು, ಕಾನೂನು ಬೇಡ  ಧೋರಣೆ ಸರಿಯಲ್ಲ’  :

ಉಡುಪಿ: ಈ ನೆಲದ ನೀರು ಕುಡಿದು, ಸರಕಾರಿ ಸವಲತ್ತುಗಳನ್ನು ಅನುಭವಿಸಿಯೂ ಇಲ್ಲಿನ ಕಾನೂನು ಮಾತ್ರ ಬೇಡ ಎಂಬ ಧೋರಣೆ ಸರಿಯಲ್ಲ. ಸಂವಿಧಾನ, ಕಾನೂನನ್ನು ಎಲ್ಲರೂ ಗೌರವಿಸಲೇ ಬೇಕು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ಥಳೀಯ ಹಿಜಾಬ್‌ ವಿವಾದ ಪಾಕಿಸ್ಥಾನದಲ್ಲಿ ತತ್‌ಕ್ಷಣವೇ ಸುದ್ದಿಯಾಗುತ್ತದೆ. ಇದರ ಲಿಂಕ್‌, ಹಿಂದಿರುವ ಸಂಘಟನೆಯ ಬಗ್ಗೆ ತನಿಖೆ ಆಗಬೇಕು. ಹಿಜಾಬ್‌ ವಿಚಾರದಲ್ಲಿ ನ್ಯಾಯಾಲಯದ ತೀರ್ಪನ್ನು ಎಲ್ಲರೂ ಗೌರವಿಸಬೇಕು. ನ್ಯಾಯಾಲಯಕ್ಕೆ ಹೋದವರೇ ನ್ಯಾಯಾಲಯದ ತೀರ್ಪಿನ ವಿರುದ್ಧ ಬಂದ್‌ ಮಾಡಿರುವುದು ಸರಿಯಲ್ಲ. ಕಾನೂನಿನ ಗಟ್ಟಿತನ ಎಷ್ಟು ಎಂಬುದನ್ನು ಮುಂದಿನ ದಿನಗಳಲ್ಲಿ ತೋರಿಸಬೇಕಾದ ಅಗತ್ಯತೆ ಬಂದರೆ ಅದನ್ನು ತೋರಿಸಬೇಕಾಗುತ್ತದೆ ಎಂದರು.

ಅಮಿತ್‌ ಶಾಗೆ ಪತ್ರ :

ರಾಜ್ಯದ ಹಿಜಾಬ್‌ ವಿವಾದ, ಶಿವಮೊಗ್ಗದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷನ ಕೊಲೆ ಹಾಗೂ ಇತ್ತೀಚೆಗಿನ ಎಲ್ಲ ಬೆಳವಣಿಗೆಗಳ ಸಮಗ್ರ ತನಿಖೆ ನಡೆಸಲು ಎನ್‌ಐಎಗೆ ಒಪ್ಪಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದೇನೆ ಎಂದರು.

ಹಿಜಾಬ್‌ ಶ್ರೀಮಂತರ ಮಕ್ಕಳಿಗೂ ಅನ್ವಯಿಸುವುದೇ? :

ಮುಸ್ಲಿಂ ಸಮುದಾಯದ ಬಡ ಹೆಣ್ಣು ಮಕ್ಕಳಿಗೆ ಧರ್ಮದ ಅಫೀಮು ಹತ್ತಿಸಿ, ಶಿಕ್ಷಣದಿಂದ ವಂಚಿತರನ್ನಾಗಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಹಿಜಾಬ್‌ ಕಡ್ಡಾಯ ಎಂಬುದು ಶ್ರೀಮಂತ ಹೆಣ್ಣು ಮಕ್ಕಳಿಗೆ ಅನ್ವಯಿಸಲಿದೆಯೇ? ಇದರ ಹಿಂದೆ ಕೆಲಸ ಮಾಡುವ ಕಾಣದ ಕೈಗಳನ್ನು ಪತ್ತೆ ಮಾಡಿ ಶಿಕ್ಷೆ ನೀಡುವ ಕಾರ್ಯ ತನಿಖೆಯಿಂದ ಆಗಬೇಕು. ಇದರಲ್ಲಿ ತೊಡಗಿರುವ ಸಂಘಟನೆಗಳನ್ನು ನಿಷೇಧಿಸಲು ಪೂರಕ ಮಾಹಿತಿ ಕಲೆ ಹಾಕಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next