ಬೆಂಗಳೂರು: ಕದ್ರಿ ದೇವಸ್ಥಾನ ಸ್ಫೋಟಿಸಲು ಉಪಕರಣಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಶಂಕಿತ ಉಗ್ರ ಶಾರೀಕ್, ಮಂಗಳೂರು ಸುತ್ತಲಿನ ಹಲವು ದೇಗುಲಗಳ ನಕ್ಷೆ ಇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಾರು ಒಂದು ವರ್ಷದ “ತಾಂಟ್ರೆ ಬಾ ತಾಂಟ್’ ಗೋಡೆ ಬರಹ ಬರೆದಿದ್ದವನೇ ಇಂದು ಮಂಗಳೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಅಂದು ಆತನ ವಿರುದ್ಧ ತೀವ್ರ ತನಿಖೆಯಾಗಲಿಲ್ಲ. ಆತ ಇಂದು ಬಾಂಬ್‌ಸ್ಫೋಟ ಕೃತ್ಯಕ್ಕೆ ಮುಂದಾಗಿದ್ದಾನೆಂದು ಹೇಳಿದರು.
ಶಾರೀಕ್ 40ಕ್ಕೂ ಅಧಿಕ ಮಂದಿಗೆ ಐಎಸ್‌ಐಎಸ್ ತರಬೇತಿ ಮಾಡಿದ್ದನು. ಸ್ವತಃ ಅವನೂ ಐಎಸ್‌ಐಎಸ್ ತರಬೇತಿ ಪಡೆದುಕೊಂಡು ಬಂದಿದ್ದ. ಕರಾವಳಿಯಲ್ಲಿ ದೇವಸ್ಥಾನ ಸ್ಫೋಟ, ಕೋಮುಗಲಭೆ ಸೃಷ್ಟಿ ಮಾಡುವುದು ಅವನ ಉದ್ದೇಶವಾಗಿತ್ತು ಎಂದ ಅವರು, ಕೇರಳ ಮತ್ತು ಕರ್ನಾಟಕದ ಕರಾವಳಿ ಸಿರಿಯಾ ಟ್ರೈನಿಂಗ್ ಆಗಿ ಬಂದವರು, ಪಿಎಫ್ಐ ಸಕ್ರಿಯ ಆಗಿದ್ದವರು ಭಯೋತ್ಪಾದಕ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಎನ್‌ಐಎ ತನಿಖೆಯಿಂದ ಹಲವು ಮಾಹಿತಿ ಹೊರಬರುತ್ತಿದೆ. ಎನ್‌ಐಎ ತಂಡ ರಾಜ್ಯದಲ್ಲಿ ಬೀಡುಬಿಟ್ಟಿದೆ. ಎನ್‌ಐಎ ತಂಡಕ್ಕೆ ಕರ್ನಾಟಕ ಪೊಲೀಸರು ಸಹಕಾರ ಕೊಡಬೇಕು ಎಂದು ಹೇಳಿದರು.
ಪ್ರವೀಣ್ ಹತ್ಯೆ ಪ್ರಕರಣದ ತನಿಖೆಗೆ ಬಂದ ತಂಡ ಮಂಗಳೂರಿನಲ್ಲಿ ಬೀಡುಬಿಟ್ಟಿದೆ. ಆರ್ಥಿಕ ವ್ಯವಹಾರ, ಶಸ್ತ್ರಾಸ್ತ್ರಗಳು ಬಂದ ಬಗ್ಗೆ ಮಾಹಿತಿ ಇದೆ. ತರಬೇತಿ ನಡೆದ ಬಗ್ಗೆಯೂ ಮಾಹಿತಿ ಇದೆ. ಭಯೋತ್ಪಾದಕತೆಯನ್ನು ನಿರ್ಣಾಮ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಹಾಗೂ ರಾಜ್ಯ ತನಿಖಾ ತಂಡ ಈ ಕೆಲಸ ಮಾಡಲಿದೆ ಎಂದು ತಿಳಿಸಿದರು.
“ಕನ್ನಡಿಗರು ಹಾಗೂ ಮರಾಠಿಗರು ಗಡಿ ಭಾಗದಲ್ಲಿ ಒಟ್ಟಾಗಿ ಬದುಕುತ್ತಿದ್ದೇವೆ. ನಮ್ಮ ನಡುವೆ ಜಗಳ ಹಚ್ಚುವ ಕೆಲಸ ಮಾಡಬೇಡಿ. ಕನ್ನಡಿಗರು ಮರಾಠಿಗರು ಅಣ್ಣ ತಮ್ಮಂದಿರಂತೆ ಇದ್ದಾರೆ. ಈ ಸೌಹಾರ್ದತೆಯಲ್ಲಿ ಹುಳಿ ಹಿಂಡುವ ಕೆಲಸ ಸಲ್ಲದು. ಮಹಾರಾಷ್ಟ್ರ ನಾಯಕರು ಬಾಯಿ ಮುಚ್ಚಿಕೊಂಡು ಕುಳಿತರೆ, ಎಲ್ಲರೂ ಶಾಂತಿಯಿಂದ ಬದುಕಬಹುದು’ ಎಂದು ಖಾರವಾಗಿ ಹೇಳಿದರು.