Advertisement
ಬಾಂಗ್ಲಾದೇಶ ವಿರುದ್ಧ ಶುಕ್ರವಾರ ನಡೆದ ವಿಶ್ವಕಪ್ ಕ್ರಿಕೆಟ್ ಕೂಟದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಪಾಕಿಸ್ಥಾನ 94 ರನ್ನುಗಳ ಗೆಲುವು ಸಾಧಿಸಿದ ಬಳಿಕ ಮಲಿಕ್ ತನ್ನ 20 ವರ್ಷಗಳ ಸುದೀರ್ಘ ಬಾಳ್ವೆಯಿಂದ ನಿವೃತ್ತಿಯಾಗುವ ನಿರ್ಧಾರ ಪ್ರಕಟಿಸಿದರು. 37ರ ಹರೆಯದ ಮಲಿಕ್ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಆಡಿಲ್ಲ. ಆದರೂ ಗೆಲುವಿನ ಸಂಭ್ರಮದ ಬಳಿಕ ಮೈದಾನ ತೊರೆಯುವ ವೇಳೆ ಪಾಕಿಸ್ಥಾನದ ಎಲ್ಲ ಆಟಗಾರರು ನಿಂತು ಗೌರವ ಸಲ್ಲಿಸಿದರು.
1999ರಲ್ಲಿ ವೆಸ್ಟ್ ಇಂಡೀಸ್ ತಂಡದೆದುರು ಆಡುವ ಮೂಲಕ ಶೋಯಿಬ್ ಮಲಿಕ್ ಏಕದಿನ ಕ್ರಿಕೆಟಿಗೆ ಪದಾರ್ಪಣೆಗೈದಿದ್ದರು. ಈವರೆಗೆ 287 ಪಂದ್ಯಗಳನ್ನು ಆಡಿರುವ ಅವರು 9 ಶತಕ ಮತ್ತು 44 ಅರ್ಧ ಶತಕ ಸಹಿತ 7,534 ರನ್ ಪೇರಿಸಿದ್ದಾರೆ. ಆಲ್‌ರೌಂಡರ್ ಕೂಡ ಆಗಿರುವ ಅವರು 158 ವಿಕೆಟ್ ಉರುಳಿಸಿದ್ದಾರೆ.
Related Articles
Advertisement
ಶೋಯಿಬ್ ಮಲಿಕ್ ನಿವೃತ್ತಿಯ ನಿರ್ಧಾರ ಪ್ರಕಟಿಸಿದೊಡನೆ ಹಾಲಿ-ಮಾಜಿ ಕ್ರಿಕೆಟಿಗರನೇಕರು ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸಿದ್ದಾರೆ. ಅವರ ಏಕದಿನ ಸಾಧನೆಯನ್ನು ಕೊಂಡಾಡಿದ್ದಾರೆ.
ಗೌರವಯುತ ಆಟ: ಸಾನಿಯಾ ಟ್ವೀಟ್“ಪ್ರತಿಯೊಂದು ಕತೆಗೂ ಅಂತ್ಯವಿದೆ. ಆದರೆ ಜೀವನದಲ್ಲಿ ಪ್ರತಿ ಯೊಂದು ಅಂತ್ಯವೂ ಹೊಸ ಆರಂಭವಾಗಿರುತ್ತದೆ. ನೀವು ನಿಮ್ಮ ದೇಶದ ಪರ 20 ವರ್ಷಗಳ ಸುದೀರ್ಘ ಅವಧಿಯವರೆಗೆ ಗೌರವಯುತವಾಗಿ ಆಡಿದ್ದೀರಿ ಮತ್ತು ಆ ಗೌರವವನ್ನು ಮುಂದುವ ರಿಸಲಿದ್ದೀರಿ. ಕ್ರೀಡಾ ರಂಗದಲ್ಲಿ ನಿಮ್ಮ ಸಾಧನೆಯಿಂದ ನನಗೆ ಮತ್ತು ಇಝಾನ್‌ಗೆ ಹೆಮ್ಮೆ ಯಾಗುತ್ತಿದೆ’ ಎಂದು ಮಲಿಕ್ ಅವರ ಪತ್ನಿ, ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟ್ವೀಟ್ ಮಾಡಿದ್ದಾರೆ. ಎಕ್ಸ್‌ಟ್ರಾ ಇನ್ನಿಂಗ್ಸ್: ಪಾಕಿಸ್ಥಾನ-ಬಾಂಗ್ಲಾದೇಶ
– 2014ರ ಬಳಿಕ ಪಾಕಿಸ್ಥಾನ ಮೊದಲ ಸಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿತು. ಪಾಕ್ ಕೊನೆಯ ಸಲ ಜಯಿಸಿದ್ದು 2014ರ ಏಶ್ಯ ಕಪ್ ಪಂದ್ಯಾವಳಿಯಲ್ಲಿ. ಇದು ವಿಶ್ವಕಪ್‌ನಲ್ಲಿ ಬಾಂಗ್ಲಾ ವಿರುದ್ಧ ಪಾಕಿಗೆ ಒಲಿದ ಮೊದಲ ಜಯವೂ ಹೌದು. – ಶಾಹೀನ್ ಅಫ್ರಿದಿ ವಿಶ್ವಕಪ್ ಪಂದ್ಯದಲ್ಲಿ 5 ಪ್ಲಸ್ ವಿಕೆಟ್ ಕಿತ್ತ ಅತೀ ಕಿರಿಯ ಬೌಲರ್ (19 ವರ್ಷ, 90 ದಿನ). ಈ ದಾಖಲೆ ಕೀನ್ಯಾದ ಕಾಲಿನ್ಸ್ ಒಬುಯ ಹೆಸರಲ್ಲಿತ್ತು. 2003ರಲ್ಲಿ ಶ್ರೀಲಂಕಾ ವಿರುದ್ಧ ಒಬುಯ 21 ವರ್ಷ, 212ನೇ ದಿನದಲ್ಲಿ ಈ ಸಾಧನೆಗೈದಿದ್ದರು. ಅಫ್ರಿದಿ ಏಕದಿನದಲ್ಲಿ 6 ವಿಕೆಟ್ ಉರುಳಿಸಿದ
4ನೇ ಕಿರಿಯ ಬೌಲರ್. – ಅಫ್ರಿದಿ ಕೇವಲ 5 ಪಂದ್ಯಗಳಿಂದ 16 ವಿಕೆಟ್ ಕಿತ್ತರು. ಇದರೊಂದಿಗೆ ವಿಶ್ವಕಪ್‌ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಕಿರಿಯ ಬೌಲರ್ ಎನಿಸಿದರು. ಹಿಂದಿನ ದಾಖಲೆ ಅಬ್ದುಲ್ ರಜಾಕ್ ಹೆಸರಲ್ಲಿತ್ತು. 1999ರಲ್ಲಿ, 19ರ ಹರೆಯದಲ್ಲಿ ಅವರು 13 ವಿಕೆಟ್ ಉರುಳಿಸಿದ್ದರು. – ಶಾಹೀನ್ ಅಫ್ರಿದಿ ವಿಶ್ವಕಪ್‌ನಲ್ಲಿ 6 ವಿಕೆಟ್ ಕಿತ್ತ ಪಾಕಿಸ್ಥಾನದ ಮೊದಲ ಬೌಲರ್. 2011ರಲ್ಲಿ ಕೀನ್ಯಾ ವಿರುದ್ಧ ಶಾಹಿದ್ ಅಫ್ರಿದಿ 16ಕ್ಕೆ 5 ವಿಕೆಟ್ ಉರುಳಿಸಿದ್ದು ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. – ಶಕಿಬ್ ಅಲ್ ಹಸನ್ ವಿಶ್ವಕಪ್ ಗ್ರೂಪ್ ಹಂತದಲ್ಲಿ 600 ರನ್ ಬಾರಿಸಿದ ಮೊದಲ ಕ್ರಿಕೆಟಿಗ. 2003ರಲ್ಲಿ ಸಚಿನ್ ತೆಂಡುಲ್ಕರ್ 586 ರನ್ ಹೊಡೆದದ್ದು
ಹಿಂದಿನ ದಾಖಲೆ. – ಇಮಾಮ್ ಉಲ್ ಹಕ್ ವಿಶ್ವಕಪ್‌ನಲ್ಲಿ ಶತಕ ಹೊಡೆದ ಪಾಕಿಸ್ಥಾನದ ಕಿರಿಯ ಕ್ರಿಕೆಟಿಗ (23 ವರ್ಷ, 205 ದಿನ). 1987ರಲ್ಲಿ ಶ್ರೀಲಂಕಾ ವಿರುದ್ಧ ಸಲೀಂ ಮಲಿಕ್ 24 ವರ್ಷ, 192ನೇ ದಿನದಲ್ಲಿ ಸೆಂಚುರಿ ಬಾರಿಸಿದ್ದು
ಹಿಂದಿನ ದಾಖಲೆ. – ಬಾಬರ್ ಆಜಂ ವಿಶ್ವಕಪ್ ಕೂಟವೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ಪಾಕಿಸ್ಥಾನಿ ಆಟಗಾರ (8 ಇನ್ನಿಂಗ್ಸ್, 474). 1992ರಲ್ಲಿ ಜಾವೇದ್ ಮಿಯಾಂದಾದ್ 9 ಇನ್ನಿಂಗ್ಸ್‌ಗಳಿಂದ 437 ರನ್ ಹೊಡೆದ ದಾಖಲೆ ಪತನಗೊಂಡಿತು. – ಮುಸ್ತಫಿಜುರ್ ರಹಮಾನ್ ಸತತ ವಿಶ್ವಕಪ್ ಪಂದ್ಯಗಳಲ್ಲಿ 5 ವಿಕೆಟ್ ಕಿತ್ತ 3ನೇ ಬೌಲರ್. ಗ್ಯಾರಿ ಗಿಲ್ಮೋರ್, ಅಶಾಂತ ಡಿ ಮೆಲ್ ಉಳಿದಿಬ್ಬರು. – ಮುಸ್ತಫಿಜುರ್ 54 ಪಂದ್ಯಗಳಿಂದ 100 ವಿಕೆಟ್ ಪೂರ್ತಿಗೊಳಿಸಿದರು. – ಈ ಪಂದ್ಯದಲ್ಲಿ ಅತ್ಯಧಿಕ 13 ವಿಕೆಟ್‌ಗಳು ಎಡಗೈ ಪೇಸ್ ಬೌಲರ್‌ಗಳ ಪಾಲಾದವು. ಇದು ಏಕದಿನ ದಾಖಲೆ. – ಏಕದಿನ ಪಂದ್ಯವೊಂದರಲ್ಲಿ ಕೇವಲ 2ನೇ ಸಲ ಎಡಗೈ ಬೌಲರ್‌ಗಳಿಬ್ಬರು 5 ಪ್ಲಸ್ ವಿಕೆಟ್ ಕಿತ್ತರು. 2015ರ ವಿಶ್ವಕಪ್ ಗ್ರೂಪ್ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್ ಈ ಸಾಧನೆ ಮಾಡಿದ್ದರು. – ಮಶ್ರಫೆ ಮೊರ್ತಜ ಏಕದಿನ ಸರಣಿ/ಪಂದ್ಯಾವಳಿಯಲ್ಲಿ ಅತ್ಯಂತ ಕಳಪೆ ಬೌಲಿಂಗ್ ಸರಾಸರಿ ದಾಖಲಿಸಿದರು (361.00, ಕನಿಷ್ಠ 50 ಓವರ್ ಮಾನದಂಡ). 56 ಓವರ್‌ಗಳಲ್ಲಿ 361 ರನ್ನಿತ್ತು ಒಂದು ವಿಕೆಟ್ ಉರುಳಿಸಿದ್ದಷ್ಟೇ ಮೊರ್ತಜ ಸಾಧನೆ. 1996ರ “ಟೈಟಾನ್ ಕಪ್’ ಟೂರ್ನಿಯಲ್ಲಿ ಜಾವಗಲ್ ಶ್ರೀನಾಥ್ 258 ರನ್ನಿತ್ತು ಒಂದು ವಿಕೆಟ್ ಉರುಳಿಸಿದ್ದು ಹಿಂದಿನ ಕಳಪೆ ಸರಾಸರಿ ಆಗಿತ್ತು. – ವಿಶ್ವಕಪ್‌ನಲ್ಲಿ ಪರಾಭವಗೊಂಡ ಪಂದ್ಯಗಳಲ್ಲಿ ಅತ್ಯಧಿಕ 642 ರನ್ ಬಾರಿಸಿದ ದಾಖಲೆಯನ್ನು ಶಕಿಬ್ ಅಲ್ ಹಸನ್ ಸರಿದೂಗಿಸಿದರು. ಸಚಿನ್ ತೆಂಡುಲ್ಕರ್ ಕೂಡ ಪರಾಜಿತ 16 ಪಂದ್ಯಗಳಲ್ಲಿ ಇಷ್ಟೇ ರನ್ ಹೊಡೆದಿದ್ದಾರೆ. – ಶಕಿಬ್ ವಿಶ್ವಕಪ್ ಕೂಟವೊಂದರಲ್ಲಿ 600 ರನ್ ಜತೆಗೆ 10 ಪ್ಲಸ್ ವಿಕೆಟ್ (11) ಕಿತ್ತ ಮೊದಲ ಆಲ್‌ರೌಂಡರ್.