ಹೊಸದಿಲ್ಲಿ: ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಕಿವೀಸ್ ವಿರುದ್ಧ ಟೀಂ ಇಂಡಿಯಾ ಸೋತ ನಂತರ ಭಾರತೀಯರು ಸೇರಿ ಹಲವು ಕಡೆಯಿಂದ ಟೀಕೆಗಳು ಎದುರಾಗಿದೆ. ಆದರೆ ಪಾಕಿಸ್ಥಾನದ ಮಾಜಿ ವೇಗದ ಬೌಲರ್ ಶೋಯೇಬ್ ಅಖ್ತರ್ ಭಾರತ ಕ್ರಿಕೆಟಿಗರ ಬೆಂಬಲಕ್ಕೆ ನಿಂತಿದ್ದಾರೆ.
ಹೌದು, ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಮಾತಾನಾಡಿದ ಅಖ್ತರ್, ಅಭಿಮಾನಿಗಳು ಟೀಂ ಇಂಡಿಯಾವನ್ನು ನಿಂದಿಸಬಾರದು. ವಿರಾಟ್ ಪಡೆ ಕೂಟದಲ್ಲಿ ಅದ್ಭುತವಾಗಿ ಆಡಿದ್ದಾರೆ. ಹಾಗಾಗಿ ಅವರ ಬೆಂಬಲಕ್ಕೆ ನಿಲ್ಲಬೇಕು ಎಂದಿದ್ದಾರೆ.
ಸಂಕಷ್ಟದ ಸಮಯದಲ್ಲಿ ಭಾರತೀಯ ಬ್ಯಾಟಿಂಗ್ ನ ಕೈ ಹಿಡಿದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ರವೀಂದ್ರ ಜಡೇಜಾ ಅವರನ್ನು ವಿಶೇಷವಾಗಿ ಹೊಗಳಿದ ಅಖ್ತರ್, ಧೋನಿ ಒಬ್ಬ ‘ಲೆಜೆಂಡ್’ ಎಂದರು.
“ ಧೋನಿ ಒಬ್ಬಶ್ರೇಷ್ಠ ಆಟಗಾರ. ಅವರು ಭಾರತೀಯ ಕ್ರಿಕೆಟ್ ನ ಶ್ರೇಷ್ಠ ರಾಯಭಾರಿ. ಆದರೆ ಸೆಮಿ ಪಂದ್ಯದಲ್ಲಿ ಡೈವ್ ಹಾಕಿದ್ದರೆ ರನ್ ಔಟ್ ಆಗುವುದರಿಂದ ತಪ್ಪಿಸಿಕೊಳ್ಳ ಬಹುದಿತ್ತು” ಎಂದು ಅಖ್ತರ್ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಹೇಳಿದ್ದಾರೆ.
ಜಡೇಜಾ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಅಖ್ತರ್, ಜಡೇಜಾ ಕ್ರೀಸ್ ಗೆ ಬಂದ ನಂತರವೇ ಭಾರತದ ಗೆಲುವಿನ ಆಸೆ ಚಿಗುರಿದ್ದು. ಆದರೆ ಜಡೇಜಾ ಔಟ್ ಆದ ರೀತಿ ಬಗ್ಗೆ ಬೇಜಾರಾಯಿತು. ಸಿಕ್ಸರ್ ಬಾರಿಸುವ ಚೆಂಡನ್ನು ಅವರು ಕ್ಯಾಚ್ ನೀಡಿ ಔಟಾದರು ಎಂದರು.
ಭಾರತೀಯ ಅಭಿಮಾನಿಗಳಿಗೆ ಮನವಿ ಮಾಡಿದ ರಾವಲ್ಪಿಂಡಿ ಎಕ್ಸ್ ಪ್ರೆಸ್ ಅಖ್ತರ್, ಟೀಂ ಇಂಡಿಯಾ ಕೂಟದುದ್ದಕ್ಕೂ ಉತ್ತಮವಾಗಿ ಆಡಿದೆ. ಸೆಮಿ ಫೈನಲ್ ಗೆ ಬಂದಿದ್ದು ಕಡಿಮೆ ಸಾಧನೆಯೇನಲ್ಲ. ಅವರ ಸಾಧನೆಗೆ ಗೌರವ ನೀಡಿ, ತೆಗಳ ಬೇಡಿ ಎಂದರು.
ಮ್ಯಾಂಚೆಸ್ಟರ್ ನಲ್ಲಿ ನಡೆದಿದ್ದ ಸೆಮಿ ಫೈನಲ್ ಪಂದ್ಯದಲ್ಲಿ ವಿರಾಟ್ ಪಡೆ ಕಿವೀಸ್ ವಿರುದ್ಧ 18 ರನ್ ಅಂತರದಿಂದ ಸೋಲನುಭವಿಸಿತ್ತು.