Advertisement

ಮತ ವಿಭಜಿಸಲು ಶಿವಶಂಕರ ರೆಡ್ಡಿ ಕುತಂತ್ರ: ಆರೋಪ

09:59 PM Nov 15, 2019 | Lakshmi GovindaRaju |

ಗೌರಿಬಿದನೂರು: ನಾನು 25 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದೇನೆ. ಗೌರಿಬಿದನೂರು ಶಾಸಕರ ರಾಜಕೀಯವನ್ನು ನಾನು ಚೆನ್ನಾಗಿ ಅರಿತಿದ್ದು, ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸೋಲುತ್ತಾರೆ ಎಂಬ ಭಯದಿಂದ ಮತ ವಿಭಜನೆ ಮಾಡಲು ಕೆಲವು ಅಭ್ಯರ್ಥಿಗಳನ್ನು ಸ್ಪರ್ಧಿಸುವಂತೆ ಮಾಡಿದ್ದರು ಎಂದು ಜೆಡಿಎಸ್‌ ಮುಖಂಡ ಸಿ.ಆರ್‌.ನರಸಿಂಹಮೂರ್ತಿ ಗಂಭೀರ ಆರೋಪ ಮಾಡಿದರು. ನಗರದ ಎಎನ್‌ಆರ್‌ವಿ ಫ‌ಂಕ್ಷನ್‌ ಹಾಲ್‌ನಲ್ಲಿ ಜೆಡಿಎಸ್‌ ಪಕ್ಷದ ಮುಖಂಡರು ಮತ್ತು ಗೌರಿಬಿದನೂರು ಹಿತರಕ್ಷಣಾ ವೇದಿಕೆ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ಮುಖಂಡ ಸಿ.ಆರ್‌.ನರಸಿಂಹಮೂರ್ತಿ ಮಾತನಾಡಿದರು.

Advertisement

ನಗರಸಭೆ ಗದ್ದುಗೆ ನಮಗೆ: ಶಾಸಕರು ಕೇವಲ ತಂತ್ರಗಾರಿಕೆ ಮಾಡಿದ್ದಾರಷ್ಟೆ. ಆದರೆ ನಗರದ ಮತದಾರರು ನಮ್ಮನ್ನು ಬೆಂಬಲಿಸಿದ್ದಾರೆ. ನಾಲ್ಕು ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳು 1, 2, 2, 4 ಮತಗಳಿಂದ ಸೋತಿದ್ದು, 22 ನೇ ವಾರ್ಡ್‌ ಒಂದು ಪೋಸ್ಟಲ್‌ ಇರುವ ಬಗ್ಗೆ ಬ್ಯಾಲೇಟ್‌ ರಿಜಿಸ್ಟ್ರಾರ್‌ ಸಹ ಚುನಾವಣಾಧಿಕಾರಿ ಬಳಿ ಇರಲಿಲ್ಲ. ಒಟ್ಟಾರೆ ನಮ್ಮ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಕಾಂಗ್ರೆಸ್‌ ಪಕ್ಷಕ್ಕಿಂತ 188 ಮತಗಳನ್ನು ಹೆಚ್ಚಿಗೆ ಪಡೆದುಕೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಜಯ ಗಳಿಸಿರುವ ಸಪ್ತಗಿರಿ ಸಹ ನಮ್ಮ ಜೊತೆ ಇದ್ದು, ಬಿಜೆಪಿ ಪಕ್ಷದವರು ಸೇರಿ 16 ಜನ ಸದಸ್ಯರಿದ್ದು, ಮುಂದಿನ ದಿನಗಳಲ್ಲಿ ನಾವೇ ನಗರಸಭೆ ಚುಕ್ಕಾಣಿ ಹಿಡಿಯುವುದಾಗಿ ತಿಳಿಸಿದರು.

ಪಕ್ಷಕ್ಕೆ ಸೇರಲು ಬೆದರಿಕೆ: ವಾರ್ಡ್‌ ನಂ.30ರ ಪಕ್ಷೇತರ ಅಭ್ಯರ್ಥಿ ಭಾಗ್ಯಮ್ಮ ಅವರಿಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಆಶ್ವಾಸನೆ ನೀಡಿ ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಅವರಿಗೆ ಆಮಿಷ ಒಡ್ಡಿದೆ. ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನೇ ಸರ್ಕಾರ ಪ್ರಕಟಿಸಿಲ್ಲ. ಆದರೆ 5-6 ಸದಸ್ಯರಿಗೆ ಜನರಿಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಆಮಿಷ ಒಡ್ಡಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿರುವ ಸಪ್ತಗಿರಿ ನಮ್ಮ ಜೊತೆ ಗುರುತಿಸಿಕೊಂಡಿದ್ದಕ್ಕೆ ಕಾಂಗ್ರೆಸ್‌ನವರು ಪಕ್ಷಕ್ಕೆ ಸೇರುವಂತೆ ಬೆದರಿಸುತ್ತಿದ್ದಾರೆ ಎಂದು ತಿಳಿಸಿದರು.

ಚುನಾವಣಾಧಿಕಾರಿ ಕೈವಾಡ: ಜೆಡಿಎಸ್‌ ಮುಖಂಡ ಬಿ.ಜಿ.ವೇಣುಗೋಪಾಲ ರೆಡ್ಡಿ ಮಾತನಾಡಿ, ಮತ ಎಣಿಕೆ ಸಮಯದಲ್ಲಿ ನಾವು ಕಾನೂನಿಗೆ ಗೌರವ ನೀಡಿ ಮತ ಎಣಿಕೆ ಕೇಂದ್ರಕ್ಕೆ ಬರಲಿಲ್ಲ. ಇದುವೇ ನಮ್ಮ ಕೆಲವು ಅಭ್ಯರ್ಥಿಗಳಿಗೆ ಸೋಲಾಗಿದೆ. ಈ ಸೋಲಿನ ಹಿಂದೆ ಚುನಾವಣಾಧಿಕಾರಿ ನಂಜುಂಡಸ್ವಾಮಿ ಅವರ ಕೈವಾಡ ಇದ್ದು, ಅವರನ್ನು ಅಮಾನತು ಮಾಡಿ ಎಂದು ಆಗ್ರಹಿಸಿದರು. ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್‌.ಅಶೋಕ್‌ ಕುಮಾರ್‌ ಮಾತನಾಡಿ, ಶಾಸಕರ ಬೆಂಬಲಿಗರು ಪಕ್ಷೇತರವಾಗಿ ಗೆದ್ದವರಿಗೆ ಕಾಂಗ್ರೆಸ್‌ಗೆ ಬೆಂಬಲ ನೀಡುವಂತೆ ಹಾಗೂ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಗೌರಿಬಿದನೂರು ಹಿತ ರಕ್ಷಣಾ ವೇದಿಕೆ ಮುಖಂಡ ಎಂ.ನರಸಿಂಹಮೂರ್ತಿ ಅವರು ಗೆಲುವು ಸಾಧಿಸಿರುವ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ವೇದಿಕೆಯಲ್ಲಿ ಅಬ್ಬುಲ್ಲಾ, ಜೆಡಿಎಸ್‌ ಪಕ್ಷದ ಮುಖಂಡರಾದ ಆಲಂಪಲ್ಲಿ ವೇಣು, ನಗರಸಭೆ ಮಾಜಿ ಸದಸ್ಯ ಅನಂತರಾಜು, ಸದಸ್ಯೆ ಪದ್ಮಾವತಮ್ಮ, ಸದಸ್ಯ ಸಪ್ತಗಿರಿ, ಮಾರ್ಕೆಟ್‌ ರಾಜು, ಮಂಜುನಾಥ್‌ ಇತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next