ಬೆಂಗಳೂರು: “ಈ ಹಿಂದೆ ಮಧ್ಯಪ್ರದೇಶ ರಸ್ತೆಗಳೂ ಅಪಹಾಸ್ಯದ ವಿಷಯಗಳಾಗಿ ಬಳಕೆ ಆಗುತ್ತಿದ್ದವು. ಆದರೆ, ಈಗ ಆ ರಾಜ್ಯದ ಚಿತ್ರಣ ಬದಲಾಗಿದ್ದು, ಅಲ್ಲಿನ ಜಮೀನು (ಹೊಲ)ಗಳಿಗೂ ರಸ್ತೆ ನಿರ್ಮಿಸಲಾಗಿದೆ. ಇದು ಅಭಿವೃದ್ಧಿ ಮಂತ್ರದ ಫಲ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ತಿಳಿಸಿದರು.
ಮಧ್ಯಪ್ರದೇಶದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ನಗರದ ಯಶವಂತಪುರದ ತಾಜ್ ಹೋಟೆಲ್‌ನಲ್ಲಿ ಗುರುವಾರ ರೋಡ್ ಶೋ ನಡೆಸಿದ ಅವರು, ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಮುಕ್ತ ಆಹ್ವಾನ ನೀಡಿದರು.
“ರಾಜ್ಯದಲ್ಲಿ ಅಭಿವೃದ್ಧಿ ಪಥ ಅತ್ಯಂತ ವೇಗವಾಗಿ ಸಾಗುತ್ತಿದೆ. ಸುಮಾರು ಮೂರು ಲಕ್ಷ ಕಿ.ಮೀ. ರಸ್ತೆಗಳನ್ನು ನಿರ್ಮಿಸಲಾಗಿದೆ. ಒಂದು ಕಾಲದಲ್ಲಿ ಈ ರಸ್ತೆಗಳು ಹಾಸ್ಯಾಸ್ಪದ ವಸ್ತು ಆಗಿದ್ದವು. ಇಂದು ಹಳ್ಳಿಗಳಿಗೆ ಮಾತ್ರವಲ್ಲ; ಜಮೀನುಗಳಿಗೂ ರಸ್ತೆಗಳಿವೆ. ಇದಲ್ಲದೆ, ನರ್ಮದಾ ಎಕ್ಸ್‌ಪ್ರೆಸ್ ಸೇರಿದಂತೆ ಸಾಕಷ್ಟು ರೈಲುಗಳು ಮತ್ತು ಮಾರ್ಗಗಳು, ವಿಮಾನ ಸಂಪರ್ಕ ಜಾಲ ವ್ಯಾಪಕವಾಗಿ ಹರಡಿಕೊಂಡಿದೆ. ಇದರಿಂದ ಸರಕು ಸಾಗಣೆಗೆ ಅನುಕೂಲವಾಗಿದೆ. ಜತೆಗೆ ನೀರಿನ ಲಭ್ಯತೆಯೂ ಸಾಕಷ್ಟಿದೆ’ ಎಂದು ಉದ್ಯಮಿಗಳ ಗಮನಸೆಳೆದರು.
ಮಧ್ಯಪ್ರದೇಶ ಕೈಗಾರಿಕಾ ನೀತಿ ಮತ್ತು ಕೈಗಾರಿಕಾ ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೀಷ್ ಸಿಂಗ್ ಮಾತನಾಡಿ, ರಾಜ್ಯದ ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) ಶೇ. 20ರಷ್ಟಿದ್ದು, ಇದೇ ಪ್ರಮಾಣವನ್ನು ಕಳೆದ ಒಂದು ದಶಕದಿಂದ ಕಾಯ್ದುಕೊಂಡು ಬಂದಿದೆ. ಇದು ಸುಸ್ಥಿರ ಅಭಿವೃದ್ಧಿಗೆ ಸಣ್ಣ ಉದಾಹರಣೆ ಅಷ್ಟೇ. ಕೈಗಾರಿಕೆಗಳಿಗಾಗಿಯೇ ಜಲಾಶಯಗಳಲ್ಲಿ ನೀರು ತೆಗೆದಿಡಲಾಗಿದೆ. ಈಸ್ ಆಫ್ ಡುಯಿಂಗ್ ಬ್ಯುಸಿನೆಸ್ ವ್ಯವಸ್ಥೆ ಇದ್ದು, 6 ಒಳನಾಡು ಕಂಟೈನರ್ ಘಟಕ (ಐಸಿಡಿ)ಗಳಿವೆ. ಇದು ಸರಕು ಸಾಗಣೆಗೆ ಪೂರಕವಾಗಿದೆ ಎಂದರು.
Related Articles
ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಪಶ್ಚಿಮ ಭಾಗದಲ್ಲಿ ಭೂಮಿಯ ಲಭ್ಯತೆ ಸಾಕಷ್ಟಿದೆ. ಇವುಗಳ ಮಂಜೂರಾತಿ ಕೂಡ ಅತ್ಯಂತ ಸುಲಭವಾಗಿ ದೊರೆಯುತ್ತದೆ. ಕಾರ್ಮಿಕರ ವೆಚ್ಚ ಉಳಿದ ರಾಜ್ಯಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ಇದೆ ಎಂದು ವಿವರಿಸಿದರು.
ಮಧ್ಯಪ್ರದೇಶದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.