ಬೆಂಗಳೂರು: ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ನಿರಂತರವಾಗಿ ಬೆಂಬಲಿಸುತ್ತಾ ಕನ್ನಡಿಗರ ಸ್ವಾಭಿಮಾನಕ್ಕೆ ಸವಾಲು ಹಾಕಿದ ನಾಡ ವಿರೋಧಿ ಶಿವಸೇನೆ ಪಕ್ಷವನ್ನು ರಾಜ್ಯದಲ್ಲಿ ಸ್ಥಾಪಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕರ್ನಾಟಕ ನವನಿರ್ಮಾಣ ಸೇನೆ ಎಚ್ಚರಿಸಿದೆ.
ನಗರದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಸಮೀಪ ಶ್ರೀರಾಮಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಪ್ರತಿಕೃತಿ ದಹಿಸಿದ ಸೇನೆ ಕಾರ್ಯಕರ್ತರು, ಶಿವಸೇನೆಯನ್ನು ಕರ್ನಾಟಕದಲ್ಲಿ ಸ್ಥಾಪಿಸಲು ಹೊರಟಿರುವ ಶ್ರೀರಾಮ ಸೇನೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ, ಕನ್ನಡಿಗ, ಕರ್ನಾಟಕವನ್ನು ನಿರಂತರವಾಗಿ ವಿರೋಧಿಸುತ್ತಾ ಬಂದ ಶಿವಸೇನೆಗೆ ಕನ್ನಡದ ನೆಲದಲ್ಲಿ ರಾಜಕಾರಣಮಾಡಲು ಯಾವುದೇ ನೈತಿಕ ಹಕ್ಕಿಲ್ಲ. ಕೊಲ್ಲಾಪುರ ಜಿಲ್ಲೆಯ ಗಡಿ ಗ್ರಾಮ ಮಹಾಜನ ವರದಿ ಅನ್ವಯ ಕರ್ನಾಟಕಕ್ಕೆ ಸೇರಿರುವ ಶಿನ್ನೋಳ್ಳಿಯಲ್ಲಿ ಶಿವಸೇನೆ ವರಿಷ್ಠ ಉದ್ದವ್ ಠಾಕ್ರೆ ಬೆಳಗಾವಿ ಮಹಾರಾಷ್ಟ್ರದ್ದು ಎಂದು ಉದ್ಧಟತನದ ಹೇಳಿಕೆ ನೀಡಿ ಹೋಗಿದ್ದಾರೆ.
ಇಂತಹ ನಾಡ ದ್ರೋಹಿಗಳಿಗೆ ಕರ್ನಾಟಕದಲ್ಲಿ ಅಸ್ತಿತ್ವ ಸ್ಥಾಪಿಸಲು ಕರ್ನಾಟಕ ನವನಿರ್ಮಾಣ ಸೇನೆ ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದು ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಸವಾಲು ಹಾಕಿದರು. ಶಿವಸೇನೆಯನ್ನು ಕರ್ನಾಟಕಕ್ಕೆ ತರಬೇಕು ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹಾಗೂ ಕೆಲ ರಾಜಕಾರಣಿಗಳು ಪ್ರಯತ್ನಿಸುತ್ತಿದ್ದಾರೆ.
ಅವರು ನಿಜವಾದ ಕನ್ನಡಿಗರೇ ಆಗಿದ್ದರೆ, ಅವರ ಮೈಯಲ್ಲಿ ಕನ್ನಡದ ರಕ್ತವೇ ಹರಿಯುತ್ತಿದ್ದರೆ ಈ ಕೂಡಲೇ ತಮ್ಮ ಪ್ರಯತ್ನ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಗಡಿನಾಡು ಬೆಳಗಾವಿ ಜಿಲ್ಲೆಯ ವಿಚಾರದಲ್ಲಿ ಕನ್ನಡ ಮತ್ತು ಮರಾಠಿಗರ ಮಧ್ಯೆ ಭಾಷಾ ದ್ವೇಷದ ಕಿಡಿ ಹಚ್ಚಿ ಬೆಳಗಾವಿ ಸೇರಿದಂತೆ ಕಾರವಾರ, ಬೀದರ್,
ನಿಪ್ಪಾಣಿ, ಬಾಲ್ಕಿ ಪ್ರದೇಶಗಳು ಮಹಾರಾಷ್ಟ್ರ ಪ್ರದೇಶಗಳು ಎಂದು ರಾಜ್ಯದ ಭೂ ಭಾಗಗಳ ಮೇಲಿಂದಲೇ ತಮ್ಮ ಅಸ್ತಿತ್ವ ಕಟ್ಟಿಕೊಂಡಿರುವ ಪಕ್ಷ ಶಿವಸೇನೆ. ಧರ್ಮದ ಹೆಸರಿನಲ್ಲಿ ಮಾಡಬಾರದ ಅನಾಚಾರಗಳನ್ನು ಶಿವಸೇನೆ ಮಹಾರಾಷ್ಟ್ರದಲ್ಲಿ ಮಾಡಿದೆ. ಮಹಾದಾಯಿ ನೀರು ಹಂಚಿಕೆ ವಿಚಾರದಲ್ಲಿ ಬಹಿರಂಗವಾಗಿಯೇ ಕರ್ನಾಟಕವನ್ನು ವಿರೋಧಿಸಿದೆ.
ಬೆಳಗಾವಿಯಲ್ಲಿ ಹಲವಾರು ಗಡಿ ಸಂಘರ್ಷಗಳಿಗೆ ಪೀಠಿಕೆ ಹಾಕಿರುವ ಶಿವಸೇನೆಗೆ ಕನ್ನಡಿಗರು ಬೆಂಬಲಿಸಬಾರದು. ಶ್ರೀರಾಮಸೇನೆ ಕೂಡಲೇ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಎಚ್ಚರಿಕೆ ನೀಡಿದರು.