ಅಂದು ಶಿವರಾತ್ರಿ. ಆ ಸಿನಿಮಾಗೂ ತುಂಬಾನೇ ವಿಶೇಷ ದಿನ ಎನ್ನಬಹುದು. ಹೌದು. ಅದು “ಶಿವಾರ್ಜುನ’ ಚಿತ್ರ. ಆ ಚಿತ್ರ ನಿರ್ಮಿಸಿದ್ದು ಕೂಡ ಶಿವಾರ್ಜುನ. ಅಷ್ಟೇ ಅಲ್ಲ, ನಿರ್ದೇಶಿಸಿದ್ದು ಶಿವತೇಜಸ್. ಅಲ್ಲಿಗೆ ಅಂದು ಶಿವನ ಮಹಿಮೆ ಆ ಸಿನಿಮಾ ಮೇಲಿತ್ತು ಅಂದರೆ ತಪ್ಪಿಲ್ಲ. ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂರುವರೆ ದಶಕಗಳ ಕಾಲ ಸೇವೆ ಸಲ್ಲಿಸಿ, ಇಂದಿಗೂ ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ಶಿವಾರ್ಜುನ ಅವರ ನಿರ್ಮಾಣದ ಚಿತ್ರವಿದು. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಬಿಡುಗಡೆ ತಯಾರಿಯಲ್ಲಿದೆ. ಶಿವರಾತ್ರಿ ಹಬ್ಬದ ದಿನದಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಸಂಸದ ತೇಜಸ್ವಿ ಸೂರ್ಯ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದರು. ಅಂದು ಧ್ರುವ ಸರ್ಜಾ ಕೂಡ ಸಹೋದರನ ಸಿನಿಮಾಗೆ ಶುಭ ಹಾರೈಸಲು ಆಗಮಿಸಿದ್ದರು.
ಮಾತುಕತೆಗೂ ಮೊದಲು ಅಲ್ಲೊಂದು ಸಾರ್ಥಕ ಸಮಾರಂಭ ನಡೆಯಿತು. ನಿರ್ಮಾಪಕ ಶಿವಾರ್ಜುನ ಅವರು, ಕನ್ನಡ ಚಿತ್ರರಂಗದಲ್ಲಿ ಮೂರ್‍ನಾಲ್ಕು ದಶಕಗಳ ಕಾಲ ಪೋಸ್ಟರ್ ಅಂಟಿಸಿದವರು, ಲೈಟ್ ಹಿಡಿದವರು, ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದವರು ಹೀಗೆ ಹಲವು ವಿಭಾಗದಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಆರು ಮಂದಿಯನ್ನು ಗುರುತಿಸಿ, ಸನ್ಮಾನಿಸಿ, ಗೌರವಿಸುವ ಕಾರ್ಯ ಮಾಡಿದರು. ವೇದಿಕೆ ಮೇಲೆ ಆರು ಮಂದಿಯನ್ನು ಪ್ರೀತಿಯಿಂದ ಆಹ್ವಾನಿಸಿ ಗಣ್ಯರಿಂದ ಸನ್ಮಾನಿಸಿದರು.
ನಟ ಚಿರಂಜೀವಿ ಸರ್ಜಾ ತಮ್ಮ “ಶಿವಾರ್ಜುನ’ ಕುರಿತು ಹೇಳಿದ್ದು ಹೀಗೆ. “ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಇಂಥದ್ದೊಂದು ಸಿನಿಮಾ ಮಾಡಿದ್ದಕ್ಕೆ ಖುಷಿಯಾಗುತ್ತಿದೆ. ಈ ಚಿತ್ರ ನನಗೆ ಸ್ಪೆಷಲ್. ಅದು ನಾನು ಕೆಲಸ ಮಾಡಿದ್ದೇನೆ ಎಂಬ ಕಾರಣಕ್ಕೆ ಸ್ಪೆಷಲ್ ಅಲ್ಲ. ನಿರ್ಮಾಪಕ ಶಿವಾರ್ಜುನ್ ಅಂಕಲ್ ಮಾಡುತ್ತಿರುವ ಚಿತ್ರ ಎಂಬುದು ವಿಶೇಷ. ಅವರು ನಮ್ಮ ಫ್ಯಾಮಿಲಿಯವರು. ಅವರಿಗಾಗಿ ಮಾಡಿದ ಚಿತ್ರವಿದು. ಹಾಗಾಗಿ, ಈ ಸಿನಿಮಾ ಅವರಿಗೆ ದೊಡ್ಡ ಯಶಸ್ಸು ಕೊಡಬೇಕು. ಪ್ರತಿಭಾವಂತರು ಸೇರಿ ಮಾಡಿರುವ ಚಿತ್ರವಿದು. ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ’ ಅಂದರು ಚಿರಂಜೀವಿ ಸರ್ಜಾ.
ನಿರ್ದೇಶಕ ಶಿವತೇಜಸ್ ಅವರು ಅಂದು ಅವಕಾಶ ಕಲ್ಪಿಸಿದ ನಿರ್ಮಾಪಕರಿಗೆ ಥ್ಯಾಂಕ್ಸ್ ಹೇಳಿದರು. “ಎಲ್ಲರ ಬೆಂಬಲ, ಸಹಕಾರ ಇದ್ದುದರಿಂದ ಒಳ್ಳೆಯ ಸಿನಿಮಾ ಮಾಡಲು ಸಾಧ್ಯವಾಗಿದೆ. ಇದೊಂದು ಪಕ್ಕಾ ಮನರಂಜನೆಯ ಚಿತ್ರ. ಎಲ್ಲಾ ವರ್ಗಕ್ಕೂ ಇಷ್ಟವಾಗುವ ಅಂಶಗಳಿವೆ’ ಎಂದರು ಶಿವತೇಜಸ್.
ನಟಿ ತಾರಾ ಅವರಿಗೂ ಇಲ್ಲೊಂದು ವಿಶೇಷ ಪಾತ್ರವಿದೆಯಂತೆ. ಈ ಚಿತ್ರದಲ್ಲಿ ಅವರು ತಮ್ಮ ಪುತ್ರ ಕೃಷ್ಣ ಜೊತೆ ನಟಿಸಿದ್ದಾರೆ. ಅಷ್ಟೇ ಅಲ್ಲ, ಪತಿ ವೇಣು ಛಾಯಾಗ್ರಹಣ ಮಾಡಿದ್ದನ್ನು ನೆನಪಿಸಿಕೊಂಡರು. ಶಿವಾರ್ಜುನ ಅವರ ಒಳ್ಳೆಯತನಕ್ಕೆ ಎಲ್ಲರೂ ಪ್ರೀತಿಯಿಂದ ಕೆಲಸ ಮಾಡಿದ್ದಾರೆ. ಸಿನಿಮಾ ಪಕ್ಕಾ ಮನರಂಜನಾತ್ಮಕವಾಗಿದೆ. ಎಲ್ಲಾ ಪ್ಯಾಕೇಜ್ ಇರುವ ಚಿತ್ರವಿದು’ ಎಂದರು ತಾರಾ.
ಹಾಸ್ಯ ನಟ ಶಿವರಾಜ್ ಕೆ.ಆರ್.ಪೇಟೆ, “ಅವರಿಗೆ ಚಿರು ಜೊತೆ ಇದು ಎರಡನೇ ಚಿತ್ರವಂತೆ. ಅವರು-ನಯನಾ ಕಾಂಬಿನೇಷನ್ ಪಾತ್ರವಿದ್ದು, ಈ ಚಿತ್ರ ಗೆಲ್ಲಲೇಬೇಕು. ಕಾರಣ, ಶಿವಾರ್ಜುನ ಅವರು ಇಷ್ಟು ವರ್ಷ ಚಿತ್ರರಂಗದಲ್ಲಿ ದುಡಿದು, ಅದೇ ಹಣವನ್ನೇ ಚಿತ್ರಕ್ಕೆ ಹಾಕಿದ್ದಾರೆ. ಹಾಗಾಗಿ ಚಿತ್ರ ಗೆಲ್ಲಬೇಕು’ ಎಂದರು.
ಅಮೃತಾ ಅಯ್ಯಂಗಾರ್ ಅವರಿಗೆ ಮಾಸ್ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ “ಶಿವಾರ್ಜುನ’ ಮೂಲಕ ಈಡೇರಿದೆಯಂತೆ. ಮತ್ತೂಬ್ಬ ನಾಯಕಿ ಅಕ್ಷತಾ ಶ್ರೀನಿವಾಸ್ ಅವರು ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ತೃಪ್ತಿ ಇದೆಯಂತೆ. ಅಕ್ಷತಾ ಬೋಪಯ್ಯ ಅವರಿಗೂ ಇಲ್ಲಿ ಮುಖ್ಯ ಪಾತ್ರವಿದೆಯಂತೆ. ಮೊದಲ ಸಲ ಸ್ಟಾರ್‌ಗಳ ಜೊತೆ ಕೆಲಸ ಮಾಡಿದ ಅನುಭವ ಅನನ್ಯ ಎಂದರು ಅವರು.
ಅಂದು ಶಿವಾರ್ಜುನ್, ಮಂಜುಳಾ ಶಿವಾರ್ಜುನ್, ರಾಮು, ಉದಯ್ ಮೆಹ್ತಾ ಇತರರು ಇದ್ದರು.