Advertisement

Shivaratri Special: ಇಲ್ಲಿ 53 ವರ್ಷಗಳಿಂದ 24 ಗಂಟೆ ನಿರಂತರ ಶಿವನಾಮ ಜಪ

11:35 AM Mar 08, 2024 | Team Udayavani |

ಕುಳಗೇರಿ ಕ್ರಾಸ್ (ಜಿ.ಬಾಗಲಕೋಟೆ): ಸೋಮನಕೊಪ್ಪ ಗ್ರಾಮದ ಪೂರ್ಣಾನಂದರ ಮಠದಲ್ಲಿ ಸುಮಾರು 53 ವರ್ಷಗಳಿಂದ ದಿನದ 24 ಗಂಟೆ ನಿರಂತರವಾಗಿ ಹಗಲು-ರಾತ್ರಿ ಶಿವನಾಮ ಜಪ ನಡೆಯುತ್ತಿದೆ. ಜೊತೆಗೆ ಅಂಧಕಾರ ಹೋಗಲಾಡಿಸಲು ಅಂದು ಹಚ್ಚಿದ ದೀಪವೂ ನಿರಂತರ ಪ್ರಜ್ವಲಿಸುತ್ತಿದೆ. ಅಂದು ಹೆಗಲೇರಿದ ತಂಬೂರಿ ಸಹ ನೆಲಮುಟ್ಟದೇ ಶಿವನಾಮ ಹೇಳುತ್ತಿದೆ.

Advertisement

ಹೌದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಸುಕ್ಷೇತ್ರ ಸೋಮನಕೊಪ್ಪ ಕುಳಗೇರಿ ಕ್ರಾಸ್ ಗ್ರಾಮದಿಂದ ಈಶಾನ್ಯ ದಿಕ್ಕಿನಲ್ಲಿ 3 ಕಿ.ಮೀ. ಕ್ರಮಿಸಿದರೆ ಕಾಣ ಸಿಗುತ್ತದೆ. ಪುರ ಪ್ರವೇಶ ಮಾಡುತ್ತಿದ್ದಂತೆ ಕೇಳಿಸುವುದು “ಓಂ ನಮಃ ಶಿವಾಯ” ಎಂಬ ತಂಬುರಿಯ ನಾದ.

ನಿರಂತರ ಶಿವನಾಮಕ್ಕೆ ಕಾರಣ: ಈ ಗ್ರಾಮದಲ್ಲಿ 1970 ಅಗಸ್ಟ್ 23 ರಂದು ಪೂರ್ಣಾನಂದ ಸ್ವಾಮಿಜಿಗಳ ಮಾತಿನಂತೆ ಹಗಲು/ರಾತ್ರಿ ಎನ್ನದೆ ನಿರಂತರ ಭಜನೆಯನ್ನು ಆರಂಭಿಸಲಾಗಿದೆ. ಯಾವ ಗ್ರಾಮದವರು ಶಿವನಾಮ ಸಪ್ತಾಹವನ್ನು ಹೆಚ್ಚು ವರ್ಷ ಮಾಡುತ್ತಾರೋ ಆ ಗ್ರಾಮಕ್ಕೆ ಬರುತ್ತೆನೆಂದು ಆಜ್ಞೆಯನ್ನು ಹೊರಡಿಸಿದ ಪೂರ್ಣಾನಂದ ಸ್ವಾಮೀಜಿ ಆ ಗ್ರಾಮದಲ್ಲೇ ನೆಲೆಸುತ್ತೇನೆ ಎಂದು ಅಲ್ಲಿ ಸೇರಿದ ಮೂರು ಗ್ರಾಮಗಳ ಭಕ್ತರಿಗೆ ತಿಳಿಸಿದರಂತೆ.

ಶ್ರೀಗಳ ಆದೇಶದಂತೆ 39 ವರ್ಷಗಳ ಕಾಲ ಶಿವನಾಮ ಸಪ್ತಾಹ ಮಾಡಲು ಒಪ್ಪಿಕೊಂಡಿದ್ದೇ ಸೋಮನಕೊಪ್ಪ ಭಕ್ತರು. ಅಂದು ಪ್ರಾರಂಭವಾದ ಶಿವನಾಮ ಜಪ 39 ವರ್ಷಗಳ ನಂತರವೂ ಮುಂದುವರೆದಿದ್ದು, ಈ ಗ್ರಾಮದ ಭಕ್ತರ ಮೆಚ್ಚುಗೆ ಮೆಚ್ಚುವಂತದ್ದು.

ನಂತರ ಪೂರ್ಣಾನಂದ ಶ್ರೀಗಳು ಲಿಂಗೈಕ್ಯರಾದರು. ಅಲ್ಲಿಯೇ ಶ್ರೀಗಳ ಗದ್ದುಗೆ ನಿರ್ಮಿಸಲಾಯಿತು. ಇಂದು ಸಹ ಭಕ್ತರು ಶ್ರೀಗಳ ಕರ್ತೃ ಗದ್ದುಗೆಯ ಎದುರಲ್ಲೇ ಶಿವನಾಮ ಮುಂದುವರೆಸಿದ್ದಾರೆ. ಈ ಶಿವನಾಮ ಜಪ 53 ವರ್ಷ ಪೂರೈಸಿದ್ದು ಇಂದು ಸಹ ನಿರಂತರವಾಗಿ ನಡೆದಿದೆ.

Advertisement

ಜಾತಿ-ಬೇಧವಿಲ್ಲದ ಶಿವಭಜನೆ: ಪ್ರತಿದಿನವೂ ಒಂದು ಮನೆಗೆ ಒಬ್ಬರಂತೆ ಮೂರು ಗಂಟೆಗಳ ಕಾಲ ಶಿವನಾಮ ಜಪ ಮಾಡುವ ಸಮಯ ಹೊಂದಿಸಿಕೊಂಡಿದ್ದಾರೆ. ಜಾತಿ-ಬೇಧವಿಲ್ಲದೇ ಶಿವಭಜನೆ ಮಾಡುವವರ ಎಲ್ಲ ಸಮುದಾಯದ ಮನೆತನದ ಪಟ್ಟಿ ಮಾಡಿ ಮಠದ ಆವರಣದಲ್ಲಿ ಹಾಕಲಾಗಿದೆ. ಶಿವಭಜನೆ ಮಾಡುವ ಭಕ್ತರು ಪಾಳೆಯದಂತೆ ಬಂದು ಹೆಗಲಿಗೆ ಹಾಕಿದ ತಂಬೂರಿಯನ್ನ ನೆಲಕ್ಕೆ ಮುಟ್ಟದಂತೆ ವರ್ಗಾಯಿಸುತ್ತ ಕಾಯ್ದುಕೊಂಡು ಬಂದಿದ್ದಾರೆ.

ಕೋಟಿ ಜಪಯಜ್ಞ ಹರಿಕಾರ ಶ್ರದ್ಧಾನಂದರು: ನಂತರ ಶ್ರದ್ಧಾನಂದ ಶ್ರೀಗಳು ಪಟ್ಟಾಧಿಕಾರ ವಹಿಸಿಕೊಂಡು ಪೂರ್ಣಾನಂದ ಶ್ರೀಗಳ ಮಾರ್ಗದರ್ಶನದಲ್ಲಿ ಮುಂದುವರೆಯುತ್ತಾರೆ. ನಿರಂತರ ಭಕ್ತರನ್ನ ಉದ್ಧರಿಸುತ್ತ ಸಂಚಾರದಲ್ಲಿದ್ದ ಶ್ರದ್ಧಾನಂದ ಶ್ರೀಗಳು ಮುಪ್ಪಾವಸ್ಥೆ ತಲುಪುವ ವೆಳೆಗೆ ಸೋಮನಕೊಪ್ಪ ಗ್ರಾಮಕ್ಕೆ ಬಂದು ತಮ್ಮ ಶಿಷ್ಯರಾಗಿದ್ದ ನೀಲಲೋಹಿತ ಸ್ವಾಮಿಜಿಗಳಿಗೆ ಪಟ್ಟಾಧಿಕಾರ ವಹಿಸಿಕೊಡುತ್ತಾರೆ.

ಕಳೆದ 53 ವರ್ಷಗಳಿಂದಲೂ ಹಗಲು ರಾತ್ರಿ ಎನ್ನದೇ ಶಿವನಾಮ ಜಪ ನಿಲ್ಲದೇ ನಡೆಯುತ್ತಿದೆ. ಗ್ರಾಮಸ್ಥರು ಸಹ ಹೀಗೆ ಮುಂದುವರೆಸಿಕೊಂಡು ಹೋಗುವ ಸಂಕಲ್ಪ ತೊಟ್ಟಿದ್ದಾರೆ. ಶ್ರೀಗಳ ವಾಣಿಯಂತೆ ಶಿವನಾಮ ಜಪದಿಂದ ಗ್ರಾಮಸ್ಥರು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ ಎನ್ನುತ್ತಾರೆ ಶ್ರೀಮಠದ ನೀಲಲೋಹಿತ ಸ್ವಾಮಿಜಿ.

ಶ್ರೀಗಳು ಗ್ರಾಮಕ್ಕೆ ಬರುವ ಮುಂಚೆ ಅಶಾಂತಿ, ಅನಕ್ಷರತೆ, ಬಡತನ ಹೀಗೆ ಒಂದಿಲ್ಲೊಂದು ಸಮಸ್ಯೆಗಳನ್ನ ಎದುರಿಸುತ್ತಿದ್ದ ನಮ್ಮ ಗ್ರಾಮಸ್ಥರು ಬೇರೆ ಗ್ರಾಮ ಪಟ್ಟಣಗಳಿಗೆ ಹೋಗಿ ದುಡಿದು ತಂದು ತಮ್ಮ ಜೀವನ ಸಾಗಿಸುತ್ತಿದ್ದರು. ನಮಗೆ ದೇವರಾಗಿ ಬಂದು ಕಾಪಾಡಿದ ಪೂರ್ಣಾನಂದ ಶ್ರೀಗಳು ಈ ಭಾಗದ ಭಕ್ತರನ್ನ ಉದ್ದರಿಸಿದರು. ಹಗಲು-ರಾತ್ರಿ ಶಿವನಾಮ ಮಾಡುತ್ತಿರುವ ನಮ್ಮೂರಿನ ಭಕ್ತರಿಗೆ ನನ್ನದೊಂದು ದನ್ಯವಾದ ಹೇಳುತ್ತೆನೆ. ಶಿವಾನಂದ ಚೋಳನ್ನವರ ಮಾಜಿ ಗ್ರಾಪಂ ಸದಸ್ಯರು.

ವಿಶೇಷ ವರದಿ: ಮಹಾಂತಯ್ಯ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next