Advertisement

ಮಾಲಂಬಿ ಮಳೆಮಲ್ಲೇಶ್ವರ ಬೆಟ್ಟದಲ್ಲಿ ಸಂಭ್ರಮದ ಶಿವರಾತ್ರಿ

04:18 PM Feb 26, 2017 | Harsha Rao |

ಶನಿವಾರಸಂತೆ: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಸಮಿಪದ ಮಾಲಂಬಿ ಮಳೆಮಲ್ಲೇಶ್ವರ ಬೆಟ್ಟದಲ್ಲಿರುವ ಶ್ರೀಮಳೆಮಲ್ಲೇ ಶ್ವರ ದೇವಾಲಯದಲ್ಲಿ ಶುಕ್ರವಾರ ಸಡಗರ- ಸಂಭ್ರಮದಿಂದ ಮಹಾ ಶಿವರಾತ್ರಿ ಹಬ್ಬವನ್ನು ಆಚರಿಸಲಾಯಿತು. 350 ವರ್ಷಗಳಷ್ಟು ಇತಿಹಾಸವನ್ನು ಹೊಂದಿರುವ ಮಾಲಂಬಿ ಮಳೆಮಲ್ಲೇಶ್ವರ ಬೆಟ್ಟದಲ್ಲಿ ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೂ ಬೆಟ್ಟದ ತುದಿಯಲ್ಲಿರುವ ಶ್ರೀಮಳೆಮಲ್ಲೇಶ್ವರ ದೇವಾಲಯದಲ್ಲಿ ಮಲ್ಲೇಶ್ವರನಿಗೆ ವಿಶೇಷ ಪೂಜಾ ವಿದಿವಿಧಾನವನ್ನು ನೆರವೇರಿಸಲಾಯಿತು. ಇದರ ಜೊತೆಯಲ್ಲಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ಶ್ರೀಗಣಪತಿ ಮತ್ತು ಶ್ರೀಬಸವಣ್ಣ ದೇವರಿಗೂ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ ದೇವಾಲಯದ ಹಿಂಭಾಗದಲ್ಲಿ ಪ್ರತಿಷ್ಠಾಪಿಸಿರುವ ಶ್ರೀವೀರಭದ್ರ ಸ್ವಾಮಿಗೆ ಪೂಜೆ ಯನ್ನು ಸಲ್ಲಿಸಲಾಯಿತು. 

Advertisement

ಬೆಳಗ್ಗೆ 6 ಗಂಟೆಯಿಂದ ಸ್ಥಳೀಯ ಗ್ರಾಮ ಸೇರಿದಂತೆ ಸೋಮವಾರಪೇಟೆ ತಾಲೋಕಿನ ವಿವಿಧ ಕಡೆಗಳಿಂದ ಬಂದ ಸಾವಿರಾರು ಭಕ್ತರು ಬೆಟ್ಟವನ್ನೇರುತ್ತಿದ್ದರು. ಜಿಲ್ಲೆ ಹಾಗೂ ನೆರೆ ಜಿಲ್ಲೆಯ ಪಿರಿಯಾಪಟ್ಟಣ, ಬೆಟ್ಟದಪುರ, ಕೇರಳಪುರ, ಹಾಸನ ಜಿಲ್ಲೆಯ ಅರಕಲಗೂಡು, ಕೊಣನೂರು, ಯಸಳೂರು, ಮಲ್ಲಿಪಟ್ಟಣ, ಹೊಸೂರು ಮುಂತಾದ ಕಡೆಗಳಿಂದ ಸಾವಿರಾರು ಭಕ್ತಾಧಿಗಳು ಬಂದು ಮಳೆ ಮಲ್ಲೇಶ್ವರ ಬೆಟ್ಟವನ್ನೇರಿ ಬೆಟ್ಟದ ಮೇಲಿರುವ ಶ್ರೀಮಳೆ ಮಲ್ಲೇಶ್ವರಸ್ವಾಮಿಯ ದರ್ಶನ ಪಡೆದರು, ಈ ಸಂದರ್ಭದಲ್ಲಿ ಪುಟ್ಟ ಮಕ್ಕಳು ಸೇರಿದಂತೆ ವಯೋ ವೃದ್ದರೂ ಸಹ ಸಡಗರ ಸಂಭ್ರಮದಿಂದ ಬೆಟ್ಟವನ್ನೇರುತ್ತಿದದ್ದು ಕಂಡು ಬಂದಿತು. ಈ ಸಂದರ್ಭದಲ್ಲಿ ಭಕ್ತಾಧಿಗಳಿಗೆ ದೇವಾಲಯ ಸಮಿತಿ ವತಿಯಿಂದ ಕುಡಿಯುವ ನೀರು ಮತ್ತು ಅನ್ನದಾನವನ್ನು ಏರ್ಪಡಿಸಲಾಗಿತು. ದೇವಾಲಯದ ಅರ್ಚಕರುಗಳಾದ ಬಾಲಕೃಷ್ಣ, ಲಿಂಗರಾಜು, ನಂಜುಂಡಯ್ಯ, ಚಂದ್ರಪ್ಪ ಪೂಜಾ ವಿದಿವಿಧಾನವನ್ನು ನಡೆಸಿಕೊಟ್ಟರು. 

ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಪ್ರಮುಖರಾದ ಎಚ್‌.ಪಿ. ಶೇಷಾದ್ರಿ, ಡಿ.ಬಿ. ಧರ್ಮಪ್ಪ, ಎಚ್‌.ಕೆ. ಹಾಲಪ್ಪ, ಎಚ್‌.ಕೆ. ಸದಾಶಿವ, ಎಚ್‌.ಪಿ. ಮೋಹನ್‌, ಎಚ್‌.ವಿ. ದಿವಾಕರ್‌, ಎಚ್‌.ವಿ. ಸುರೇಶ್‌, ಎಸ್‌.ಸಿ. ಶರತ್‌ಶೇಖರ್‌, ಮಹಾಂತೇಶ್‌, ಎಚ್‌.ಎಸ್‌. ಪಾಲಾಕ್ಷ, ಎಚ್‌.ಆರ್‌. ಮುತ್ತಣ್ಣ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next