ಬೆಳಗಾವಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅತ್ಯಂತ ಭಕ್ತಿಪೂರ್ವಕ ಹಾಗೂ ಅದ್ಧೂರಿಯಾಗಿ ಮಹಾಶಿವರಾತ್ರಿಯನ್ನು ಗುರುವಾರ ಆಚರಿಸಲಾಯಿತು.
ದಕ್ಷಿಣ ಕಾಶಿ ಎಂದೇ ಖ್ಯಾತವಾದ ಶ್ರೀ ಕಪಿಲೇಶ್ವರ ಮಂದಿರ ಸೇರಿದಂತೆ ಜಿಲ್ಲೆಯ ಶಿವನ ದೇವಾಲಯಗಳು ಗುರುವಾರ ಆಕರ್ಷಣೆಯ ಕೇಂದ್ರವಾಗಿದ್ದವು. ಶಿವನ ಧ್ಯಾನ ಮತ್ತು ಜಾಗರಣೆ ಮಾಡುವ ಮೂಲಕ ಭಕ್ತರು ಶಿವನ ಆರಾಧನೆ ಮಾಡಿದರು. ಶಿವನ ದೇವಾಲಯಗಳನ್ನು ಸ್ವತ್ಛಗೊಳಿಸಿ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಎಲ್ಲ ದೇವಸ್ಥಾನಗಳಲ್ಲಿಯೂ ಭಕ್ತರ ದಂಡು ಹರಿದು ಬಂದಿತ್ತು. ಶಿವನಿಗೆ ವಿಶೇಷ ಪೂಜೆ, ಅಭಿಷೇಕ, ರುದ್ರಾಭಿಷೇಕ, ಪುಷ್ಪಾರ್ಚನೆ ಮಾಡಲಾಯಿತು. ವಿಶೇಷ ಪೂಜೆ ಸಲ್ಲಿಸುವವರ ಹೆಸರು ನೋಂದಾಯಿಸಿಕೊಂಡು ಬೆಳಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಭಕ್ತಸಾಗರ ಹರಿದು ಬಂದಿತ್ತು.
ಭಕ್ತರು ಮಹಾಶಿವರಾತ್ರಿಯಂದು ಗುರುವಾರ ಇಡೀ ದಿನ ಉಪವಾಸ ಮಾಡಿದರು. ನಗರದ ಶ್ರೀ ಕಪಿಲೇಶ್ವರ ಮಂದಿರವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ದೇವಸ್ಥಾನದ ಸುತ್ತಲೂ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಒಳಭಾಗವನ್ನು ಸಂಪೂರ್ಣವಾಗಿ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಶಿವಲಿಂಗಕ್ಕೆ ಪಂಚಾಮƒತ ಅಭಿಷೇಕ, ರುದ್ರಾಭಿಷೇಕ ಸೇರಿದಂತೆ ಅನೇಕ ಪೂಜೆಗಳನ್ನು ನೆರವೇರಿಸಲಾಯಿತು. ದೇವಸ್ಥಾನ ಆವರಣದಲ್ಲಿ ಅಗ್ನಿಹೋತ್ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗುರುವಾರ ಬೆಳಗ್ಗೆಯಿಂದ ರಾತ್ರಿವರೆಗೂ ಸಹಸ್ರನಾಮ ಜಪ ನೆರವೇರಿತು. ರಾತ್ರಿಯಿಡೀ ಭಜನೆ, ಶಿವನಾಮಸ್ಮರಣೆ, ಜಾಗರಣೆ ಇತ್ತು.
ನಗರದ ಮಿಲಿಟರಿ ಮಹಾದೇವ ಮಂದಿರ, ಶಾಹೂ ನಗರದ ಶಿವಾಲಯ, ಮಹಾಂತೇಶ ನಗರದ ಶಿವಾಲಯ, ರಾಮತೀರ್ಥ ನಗರದ ಶಿವಾಲಯ, ರಾಮಲಿಂಗಖೀಂಡ ಗಲ್ಲಿಯ ರಾಮಲಿಂಗೇಶ್ವರ ದೇವಸ್ಥಾನ, ಶಹಾಪುರದ ಶ್ರೀ ಬಸವೇಶ್ವರ ಮಂದಿರ, ತಾಲೂಕಿನ ಬಿ.ಕೆ. ಕಂಗ್ರಾಳಿಯ ಶ್ರೀ ಕಲ್ಮೇಶ್ವರ ಮಂದಿರ, ಬಸವನ ಕುಡಚಿಯ ಶ್ರೀ ಬಸವೇಶ್ವರ ಮಂದಿರ, ಸುಳೇಭಾವಿಯ ಶ್ರೀ ಕಲ್ಮೇಶ್ವರ ಮಂದಿರ ಸೇರಿದಂತೆ ಮೊದಲಾದ ಕಡೆಗಳಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರು ದರ್ಶನ ಪಡೆದರು. ನಗರದ ಶ್ರೀ ಕಪಿಲೇಶ್ವರ ಮಂದಿರದಲ್ಲಿ ಈ ಬಾರಿ ವಿಶೇಷವಾಗಿ ಮ್ಯೂರಲ್ ಪೇಂಟಿಂಗ್‌ಗಳನ್ನು ಅಳವಡಿಸಲಾಗಿದೆ. ದೇವಸ್ಥಾನದಲ್ಲಿ ಶಿವನ ಜೀವನದ ಪ್ರಮುಖ ಘಟ್ಟಗಳ ಬಗೆಗಿನ ಎಂಟು ಮ್ಯೂರಾಲ್ ಕಲಾಕೃತಿಗಳನ್ನು ಅಳವಡಿಸಲಾಗಿದೆ. ರಾವಣನ ಗರ್ಭವಧನ, ಆತ್ಮಲಿಂಗ ಕಥನ, ಗಂಗಾವತರಣ ಹೀಗೆ ಕಲಾಕೃತಿಗಳು ಗಮನಸೆಳೆಯುತ್ತಿವೆ.
ಮಹಾನಗರ ಡಿಸಿಪಿ ವಿಕ್ರಂ ಅಮಟೆ ಕಪಿಲೇಶ್ವರ ಮಂದಿರದಲ್ಲಿ ನಡೆದ ಮಹಾಶಿವರಾತ್ರಿ ಮಹಾಪೂಜೆಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿವಸ್ಮರಣೆ ಮಾಡಿದರು. ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಸೇರಿದಂತೆ ಅನೇಕ ಗಣ್ಯಮಾನ್ಯರು ದೇವರ ದರ್ಶನ ಪಡೆದುಕೊಂಡರು.