ಮುಂಬಯಿ, ಫೆ. 21: ಕತ್ತಲು ಎಂಬ ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಬೆಳಗಿಸು ಎಂದು ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಇದು ಇಡೀ ದೇಶಾದ್ಯಂತ ಆಚರಿಸುವ ಹಬ್ಬವಾಗಿದೆ. ದಿನದಲ್ಲಿ ಉಪವಾಸ ರಾತ್ರಿಯಲ್ಲಿ ಜಾಗರಣೆ ಇದರ ವೈಶಿಷ್ಟವಾಗಿದೆ ಶಿವನು ಸರಳತೆ, ಪ್ರಾಮಾಣಿಕತೆ, ನಿಷ್ಕಲ್ಮಶ ಮನುಸ್ಸುಗಳ ಪ್ರತೀಕ ಮತ್ತು ಸಾಧನೆಯ ದ್ಯೋತಕ ಎಂದು ಪಲಿಮಾರು ಮಠದ ಮುಖ್ಯ ಪ್ರಬಂಧಕ, ಟ್ರಸ್ಟಿ, ವಿ| ರಾಧಾಕೃಷ್ಣ ಭಟ್ ಅವರು ತಿಳಿಸಿದರು.
ಫೆ. 21ರಂದು ಬೆಳಗ್ಗೆ ಮೀರಾರೋಡ್ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ವಿವಿಧ ವೈದಿಕ ತತ್ವದಡಿ ಜರಗುವ ಮಹಾಶಿವರಾತ್ರಿಗೆ ಚಾಲನೆ ನೀಡಿ ಮಾತನಾಡಿದ, ಅವರು ಎಲ್ಲ ಆಡಂಬರಗಳಿಂದ ಮುಕ್ತರಾಗಿ ಸರಳ ಶ್ರದ್ಧಾ ಭಕ್ತಿಯಿಂದ ಪರ ಶಿವನನ್ನು ಭಜಿಸಿ ಜೀವನವನ್ನು ಪಾವನಗೊಳಿಸೋಣ ಎಂದು ಹರಸಿ ಇದೇ ಸಂದರ್ಭದಲ್ಲಿ ಅವರು ಸನ್ನಿಧಿಯಲ್ಲಿರುವ ಹಿಮಾಲಯದ ಋಷಿಗಳಿಂದ ಪೂಜೆಯನ್ನು ಸ್ವೀಕರಿಸಿದ ಓಂಕಾರ ಇರುವ ಮಾಣಿಕ್ಯ ಲಿಂಗ ಶ್ರೀಮುಂಗೇಶಿ ಮಹಾ ಮೃತ್ಯುಂಜಯ ರುದ್ರದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಟ್ರಸ್ಟಿ ಸಚ್ಚಿದಾನಂದ ರಾವ್ ಅವರು ಶ್ರೀ ಸನ್ನಿಧಿಯ ಬಗ್ಗೆ ತಿಳಿಸಿ, ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಇಚ್ಛೆ ಮತ್ತು ಸಂಕಲ್ಪದೊಂದಿಗೆ ವಿವಿಧ ಆಧ್ಯಾತ್ಮಿಕ ಚಿಂತನೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮೀರಾರೋಡು ಮಠದಲ್ಲಿ ನಿರಂತರವಾಗಿ ನಡೆಯುತ್ತಿವೆ. ಮಾ. 2ರಂದು ಪಲಿಮಾರು ಶ್ರೀಪಾದರು ಮೀರಾರೋಡು ಪಲಿಮಾರು ಮಠದಲ್ಲಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ, ಶ್ರೀ ರಾಮ ದೇವರ ಪೂಜೆ ಮತ್ತು ಶೋಭಾಯಾತ್ರೆಯನ್ನು ಆಯೋಜಿಸಲಾಗಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸರ್ವರೂ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಪಂಚ ಗವ್ಯ ಪುಣ್ಯಾಹ ವಾಚನ, ಪಂಚವಿಂಶತಿ 25 ಕಲಶ ಪ್ರತಿಷ್ಠೆ, ರುದ್ರಯಾಗ, ರುದ್ರಾಭಿಷೇಕ ಜರಗಿತು. ಮಧ್ಯಾಹ್ನ ಅಭಿಷೇಕ, ಮಹಾಪೂಜೆ, ಭಜನೆ, ದ್ವಾದಶ ಲಿಂಗ ಮಂಡಲ ರಚನೆ, ಶತರುದ್ರ ಅಭಿಷೇಕ, ಶ್ರೀರಂಗ ಪೂಜೆ ನೆರವೇರಿತು. ಪೂಜಾ ಕೈಂಕರ್ಯದಲ್ಲಿ ವಿದ್ವಾನ್‌ರಾದ ವಾಸುದೇವ ಉಪಾದ್ಯಾಯ, ಕಿರಣ್ ಭಟ್, ಗೋಪಾಲ್ ಭಟ್, ಯತಿರಾಜ ಉಪಾಧ್ಯಾಯ ಸಹಕರಿಸಿದರು. ಅಸಂಖ್ಯಾತ ಭಕ್ತರು ಭಕ್ತಿ ಪೂರ್ವಕವಾಗಿ ದೇವರ ದರ್ಶನ ಪಡೆದರು.
ಚಿತ್ರ-ವರದಿ: ರಮೇಶ ಅಮೀನ್