Advertisement

ಎಲ್ಲೆಡೆ ಮೊಳಗಿದ ಶಿವನಾಮ ಜಪ

01:03 PM Feb 22, 2020 | Suhan S |

ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಶುಕ್ರವಾರ ಸಾರ್ವಜನಿಕರು ಶ್ರದ್ಧೆ- ಭಕ್ತಿಯಿಂದ ಆಚರಿಸಿದರು.

Advertisement

ಸೂರ್ಯೋದಯಕ್ಕೂ ಮುನ್ನವೇ ಜಿಲ್ಲೆಯ ಸೋಮನಾಥೇಶ್ವರ, ಪಂಚಲಿಂಗೇಶ್ವರ, ಪರಮೇಶ್ವರ ಸೇರಿದಂತೆ ಈಶ್ವರನ ವಿವಿಧ ದೇವಸ್ಥಾನಗಳಲ್ಲಿ ಮಹಾರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಜಲಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.

ಅದರಂತೆ ಭಕ್ತರು ಬೆಳಗ್ಗೆ ಅಭ್ಯಂಗ ಸ್ನಾನ ಮುಗಿಸಿ, ಶಿವನ ದೇವಸ್ಥಾನಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ಶಿವನ ಆರಾಧನೆ, ಶಿವ ಸ್ತೋತ್ರಗಳನ್ನು ಸ್ತುತಿಸಿ, ಮಂತ್ರಗಳ ಪಠಣದೊಂದಿಗೆ ರುದ್ರಾಕ್ಷಿ ಮಾಲೆಗೆ ಪೂಜೆ, ಅಭಿಷೇಕ ಹಾಗೂ ಪೂಜಾ ಕೈಂಕರ್ಯ ನೆರವೇರಿಸುವ ಮೂಲಕ ಇಡೀ ದಿನ ಶಿವಶಂಕರನ ನಾಮ ಸ್ಮರಣೆಯಲ್ಲಿ ತಲ್ಲೀನರಾಗಿದ್ದರು.

ಅವಳಿ ನಗರದ ಶಿವನ ಪ್ರಮುಖ ದೇವಸ್ಥಾನಗಳಾದ ತ್ರಿಕೂಟೇಶ್ವರ ದೇವಸ್ಥಾನ, ಬೆಟಗೇರಿ ರಂಗಪ್ಪಜ್ಜನ ಮಠ ಸಮೀಪದ ಅಮರೇಶ್ವರ ದೇವಸ್ಥಾನ, ಸಿದ್ಧಲಿಂಗ ನಗರದ ಸಿದ್ದಲಿಂಗೇಶ್ವರ ದೇವಸ್ಥಾನ, ಗ್ರೇನ್‌ ಮಾರುಕಟ್ಟೆಯ ಈಶ್ವರ ದೇಗುಲ, ಪಿ ಆ್ಯಂಡ್‌ ಟಿ ಕ್ವಾರ್ಟರ್ಸ್‌ನ ಪರಮೇಶ್ವರ ದೇಗುಲ, ರಾಜೀವ್‌ ಗಾಂಧಿ ನಗರದ ಈಶ್ವರ ಸನ್ನಿಧಾನ, ಶಹಪುರಪೇಟೆಯ ಶಂಕರಲಿಂಗ ದೇವಸ್ಥಾನ, ಸರಾಫ್‌ ಬಜಾರ್‌ ರಸ್ತೆಯ ಪಂಚಲಿಂಗೇಶ್ವರ ದೇವಸ್ಥಾನ, ಸಂಭಾಪುರ ರಸ್ತೆಯ ಕಾಶಿ ವಿಶ್ವನಾಥ ದೇವಸ್ಥಾನ ಸೇರಿದಂತೆ ಅವಳಿ ನಗರದ ಇನ್ನಿತರೆ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಪೂಜೆ, ಪುನಸ್ಕಾರದ ಸಂಭ್ರಮ ಮನೆ ಮಾಡಿತ್ತು.

ಮಹಾಶಿವರಾತ್ರಿ ಅಂಗವಾಗಿ ಶಿವಭಕ್ತರು ಉಪವಾಸ ವ್ರತಾಚರಣೆ ಕೈಗೊಂಡಿದ್ದು, ವಿವಿಧ ದೇವಸ್ಥಾನಗಳಲ್ಲಿ ನಡೆದ ಭಜನೆ, ಶಿವನ ನಾಮಸ್ಮರಣೆಯೊಂದಿಗೆ ದಿನ ಕಳೆದರು. ಬಳಿಕ ಸಂಜೆ ಶಿವನಿಗೆ ಪೂಜೆ ಸಲ್ಲಿಸಿ, ಇಷ್ಟಾರ್ಥಗಳ ಈಡೇರಿಸುವಂತೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮನೆಮಂದಿಯಲ್ಲಾ ಒಟ್ಟಿಗೆ ಕುಳಿತು, ಹಣ್ಣು- ಹಂಪಲ ಸೇವಿಸಿ, ಶಿವನ ಧ್ಯಾನ ಮಾಡಿ, ಧನ್ಯತೆ ಮೆರೆದರು.

Advertisement

ದರ್ಶನಕ್ಕಾಗಿ ಸರದಿ: ನಗರದ ಐತಿಹಾಸಿಕ ಪ್ರಸಿದ್ಧ ಕೃತಪುರ ನಿವಾಸಿ ತ್ರಿಕೂಟೇಶ್ವರ ಹಾಗೂ ಭಲ್ಲೇಶ್ವರ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕಾಗಿ ಬೆಳಗ್ಗೆಯಿಂದಲೇ ಭಕ್ತರು ಸಾಲುಗಟ್ಟಿದ್ದರು. ಬೆಳಗ್ಗೆ ನಡೆದ ಮಹಾರುದ್ರಾಭೀಷೇಕ, ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಸೇರಿದಂತೆ ಇನ್ನಿತರೆ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನಗಳಲ್ಲಿ ನೆರೆದಿದ್ದ ನೂರಾರು ಭಕ್ತರು ಕಣ್ತುಂಬಿಕೊಂಡು, ಭಕ್ತಿ ಪರವಶರಾದರು. ಶಿವರಾತ್ರಿ ನಿಮಿತ್ತ ದೇವಸ್ಥಾನಗಳಲ್ಲಿ ತರಹೇವಾರಿ ಪುಷ್ಪಗಳಿಂದ ಮಾಡಿದ್ದ ಅಲಂಕಾರ ನೋಡುಗರಿಗೆ ಮುದ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next