ಶಿವರಾಜಕುಮಾರ್ ಅವರ “ಕವಚ’ ಚಿತ್ರ ಬಿಡುಗಡೆಗೆ ಸರಿಯಾದ ಮುಹೂರ್ತವೇ ಕೂಡಿಬರುತ್ತಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರ ಡಿಸೆಂಬರ್‌ನಲ್ಲಿ ತೆರೆಕಾಣಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಬಿಡುಗಡೆ ಮುಂದಕ್ಕೆ ಹೋಯಿತು. ಆ ನಂತರ ಚಿತ್ರತಂಡ ಎಲ್ಲಾ ಪಕ್ಕಾ ಮಾಡಿಕೊಂಡು ಈ ಬಾರಿ ಬಿಡುಗಡೆ ಮಾಡಿಯೇ ಬಿಡೋದು ಎಂದು ತೀರ್ಮಾನಿಸಿ ಇದೇ ಜ.18ಕ್ಕೆ ಚಿತ್ರ ಬಿಡುಗಡೆಯ ಡೇಟ್ ಅನೌನ್ಸ್ ಮಾಡಿತ್ತು ಚಿತ್ರತಂಡ.
ಈ ಬಾರಿ ಮತ್ತೆ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಜ.18 ರ ಬದಲು ಚಿತ್ರ ಫೆಬ್ರವರಿಯಲ್ಲಿ ತೆರೆಕಾಣಲಿದೆ. ಎಲ್ಲಾ ಓಕೆ, ಈ ಬಾರಿ “ಕವಚ’ ಬಿಡುಗಡೆ ಮುಂದೆ ಹೋಗಲು ಕಾರಣವೇನು ಎಂದು ಕೇಳಬಹುದು. ಅದಕ್ಕೆ ಉತ್ತರ ತಾಂತ್ರಿಕ ಸಮಸ್ಯೆ. ಸಿಂಕ್ ಸೌಂಡ್ ವಿಚಾರದಲ್ಲಿ ಈ ಬಾರಿ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಚಿತ್ರದಲ್ಲಿ ಬಳಸಿದ ಪದವೊಂದರ ಬದಲಿಗೆ ಅದಕ್ಕೆ ಸಮಾನಾರ್ಥ ಕೊಡುವ ಬೇರೆ ಪದ ಬಳಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿದ್ದು, ಆ ಕೆಲಸಗಳು ಕೂಡಾ ನಡೆಯುತ್ತಿವೆ.
ಇನ್ನು ಚಿತ್ರದ ಚಿತ್ರದ ಕೆಲಸಗಳು ಚೆನ್ನೈ, ಹೈದರಬಾದ್‌ನಲ್ಲಿ ನಡೆಯುತ್ತಿದ್ದು, ಎಲ್ಲರೂ ಹಬ್ಬದ ಮೂಡ್‌ನಲ್ಲಿದ್ದಾರೆ. ಹಾಗಾಗಿ, ತಾಂತ್ರಿಕ ಕೆಲಸಗಳು ತಡವಾಗುತ್ತಿವೆ. ಎಲ್ಲಾ ಓಕೆ, ಹಾಗಾದರೆ ಮುಂದೆ “ಕವಚ’ ಯಾವಾಗ ಬಿಡುಗಡೆಯಾಗುತ್ತದೆ ಎಂದು ನೀವು ಹೇಳಬಹುದು. ಅದಕ್ಕೆ ಉತ್ತರ ಫೆಬ್ರವರಿ. ಚಿತ್ರವನ್ನು ಫೆಬ್ರವರಿ 22 ರಂದು ತೆರೆಗೆ ತರುವ ಬಗ್ಗೆಯೂ ಚಿತ್ರತಂಡ ಯೋಚಿಸುತ್ತಿದೆ. ಕಳೆದ ವರ್ಷ ಫೆ.23 ರಂದು ಶಿವರಾಜಕುಮಾರ್ ಅವರ “ಟಗರು’ ಚಿತ್ರ ಬಿಡುಗಡೆಯಾಗಿ ದೊಡ್ಡ ಯಶಸ್ಸು ಕಂಡಿತ್ತು.
ಆ ಕಾರಣದಿಂದ ಈ ಬಾರಿ “ಕವಚ’ವನ್ನು ಫೆಬ್ರವರಿಯಲ್ಲಿ ತೆರೆಗೆ ತರುವ ಬಗ್ಗೆ ಯೋಚಿಸುತ್ತಿದೆ ಚಿತ್ರತಂಡ. “ಕವಚ’ ಚಿತ್ರದಲ್ಲಿ ನಟ ಶಿವರಾಜ ಕುಮಾರ್ ಮೊದಲ ಬಾರಿಗೆ ಅಂಧನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರ ಅಂಧರಿಗೆ ಬದುಕಿಗೆ ಸ್ಪೂರ್ತಿ, ಪ್ರೇರಣೆ ನೀಡುವಂಥದ್ದಾಗಿದೆ ಎನ್ನುತ್ತದೆ ಚಿತ್ರತಂಡ. “ಕವಚ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆದಿದ್ದು ಹೈದರಾಬಾದ್‌ನಲ್ಲಿ. ಹಾಗಾಗಿ ಚಿತ್ರ ಡಿ.ಐ ಸೇರಿದಂತೆ ಹಲವು ಕೆಲಸಗಳನ್ನು ಅಲ್ಲಿನ ನುರಿತ ತಂತ್ರಜ್ಞರು ನಿರ್ವಹಿಸಿದ್ದಾರೆ.
ಈ ವೇಳೆ ಚಿತ್ರವನ್ನು ನೋಡಿದ ಅಲ್ಲಿನ ತಂತ್ರಜ್ಞರು ಶಿವಣ್ಣ ಅಭಿನಯ ನೋಡಿ ಫಿದಾ ಆಗಿದ್ದಾರೆ ಎನ್ನುತ್ತದೆ ಚಿತ್ರತಂಡ. “ಕವಚ’ ಚಿತ್ರದಲ್ಲಿ ಶಿವರಾಜಕುಮಾರ್ ಅವರೊಂದಿಗೆ ಇಶಾ ಕೊಪ್ಪಿಕರ್, ರವಿಕಾಳೆ, ಕೃತಿಕಾ, ರಾಜೇಶ್ ನಟರಂಗ, ವಸಿಷ್ಠ ಸಿಂಹ, ಬೇಬಿ ಮೀನಾಕ್ಷಿ, ಜಯಪ್ರಕಾಶ್ ಮೊದಲಾದ ಕಲಾವಿದರ ದೊಡ್ಡ ತಾರಾಗಣವಿದೆ. “ಹೆಚ್.ಎಂ.ಎ ಸಿನಿಮಾ’ ಬ್ಯಾನರ್‌ನಲ್ಲಿ ಎಂ.ವಿ.ವಿ ಸತ್ಯ ನಾರಾಯಣ್ “ಕವಚ’ ಚಿತ್ರವನ್ನು ನಿರ್ಮಿಸಿದ್ದಾರೆ. ರಾಮ್‌ಗೊಪಾಲ್ ವರ್ಮಾ (ಆರ್‌ಜಿವಿ) ಅವರ ಜೊತೆ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದ ಜಿವಿಆರ್ ವಾಸು ಮೊದಲ ಬಾರಿಗೆ ಕನ್ನಡದಲ್ಲಿ “ಕವಚ’ ಚಿತ್ರವನ್ನು ನಿರ್ದೇಶಿಸಿದ್ದಾರೆ.