ಸುಮಾರು 14 ವರ್ಷಗಳ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಳೆದ ವರ್ಷ ರಿಮೇಕ್ ಚಿತ್ರ “ಕವಚ’ಕ್ಕೆ ಬಣ್ಣ ಹಚ್ಚಿದ್ದರು. ಅದಾದ ಬಳಿಕ, ಒಳ್ಳೆಯ ಕಥೆ ಇರುವ ರಿಮೇಕ್ ಚಿತ್ರಗಳಲ್ಲಿ ನಟಿಸಲು ಅಡ್ಡಿ ಇಲ್ಲ ಎಂದೂ ಶಿವಣ್ಣ ಹೇಳಿದ್ದರು. ಯಾವಾಗ ಶಿವಣ್ಣ ಇಂಥದ್ದೊಂದು ಮಾತು ಹೇಳಿದರೊ, ಈಗಾಗಲೇ ಸಾಲು ಸಾಲು ರಿಮೇಕ್ ರೈಟ್ಸ್ ಕೊಂಡು ತಂದಿರುವ ಹತ್ತಾರು ನಿರ್ಮಾಪಕರು, ನಿರ್ದೇಶಕರು ಶಿವಣ್ಣಗೆ ಸಬ್ಜೆಕ್ಟ್ ಒಪ್ಪಿಸಲು ಪೈಪೋಟಿಗೆ ಬೀಳಲು ಶುರು ಮಾಡಿದರು. “ಕವಚ’ ಚಿತ್ರದ ಬಳಿಕ ಒಂದರ ಹಿಂದೊಂದು ರಿಮೇಕ್ ಚಿತ್ರಗಳಲ್ಲಿ ಶಿವಣ್ಣ ಹೆಸರು ಕೇಳಿಬರೋದಕ್ಕೆ ಶುರುವಾಯಿತು.
ಸದ್ಯ ಶಿವರಾಜಕುಮಾರ್ ನಿರ್ದೇಶನದ ಭಜರಂಗಿ-2′, “ಆರ್ ಡಿಎಕ್ಸ್’ ಹಾಗೂ “ಭೈರತಿ ರಣಗಲ್’ ಚಿತ್ರಗಳನ್ನು ಕೈಗೆತ್ತಿಕೊಂಡಿದ್ದು, ಅವುಗಳ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವುಗಳ ನಡುವೆಯೇ ಈಗ ಮತ್ತೂಂದು ರಿಮೇಕ್ ಚಿತ್ರದಲ್ಲಿ ಶಿವರಾಜಕುಮಾರ್ ಹೆಸರು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.
ಹೌದು, ತಮಿಳಿನಲ್ಲಿ ಧನುಷ್ ಅಭಿನಯಿಸಿ ಬಿಗ್ ಹಿಟ್ ಶಿವರಾಜ್ ಕುಮಾರ್ ಅಭಿನಯಿಸಲಿದ್ದಾರೆ. ಅಲ್ಲಿ ಧನುಷ್ ಅಭಿನಯಿಸಿದ್ದ “ಅಸುರನ್ “ ಪಾತ್ರವನ್ನು ಇಲ್ಲಿ ಶಿವಣ್ಣ ಅಭಿನಯಿಸುತ್ತಿದ್ದು, ಪಕ್ಕಾ ಹಳ್ಳಿ ಸೊಗಡಿನ, ಆದರೆ ಅಷ್ಟೇ ರೌದ್ರಾವತಾರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕನ್ನಡದಲ್ಲಿ ಜೇಕಬ್ ವರ್ಗೀಸ್ ಈ ಚಿತ್ರವನ್ನು ನಿರ್ದೇಶನ ಮಾಡುವ ಸಾಧ್ಯತೆಯಿದ್ದು, ತಮಿಳು ನಿರ್ಮಾಪಕರೊಬ್ಬರು ಶಿವಣ್ಣನ ಬಳಿ ಈ ಬಗ್ಗೆಈಗಾಗಲೇ ಒಂದು ಹಂತದ ಮಾತುಕತೆ ಮಾಡಿದ್ದಾರೆ. ಎನ್ನಲಾಗಿದೆ.
ಸದ್ಯ ಕೋವಿಡ್ 19 ಹಾವಳಿಯಿಂದ ಇಡೀ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಬಂದ್ ಆಗಿರುವುದರಿಂದ, ಎಲ್ಲವೂ ಮೊದಲಿನಂತೆ ಸಹಜ ಸ್ಥಿತಿಗೆ ಬಂದ ಮೇಲಷ್ಟೆ ಈ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. ವೆಟ್ರಿಮಾರನ್ ನಿರ್ದೇಶಿಸಿದ್ದ “ಅಸುರನ್’ ಜಾತಿ ವೈಷಮ್ಯದ ಕತಾ ವಸ್ತು ಒಳಗೊಂಡಿತ್ತು. “ವಕ್ಕೆ’ ಎಂಬ ಕಾದಂಬರಿ ಆಧರಿತ ಈ ಚಿತ್ರ ತಮಿಳಿನಲ್ಲಿ ಸೂಪರ್ ಹಿಟ್ ಆಗಿತ್ತು. ಆನಂತರ ಇದೇ ಸಿನಿಮಾವನ್ನು ತೆಲುಗಿನಲ್ಲಿ ವೆಂಕಟೇಶ್ “ನಾರಪ್ಪ’ ಹೆಸರಿನಲ್ಲಿ ರೀಮೇಕ್ ಮಾಡುತ್ತಿದ್ದಾರೆ. ಮತ್ತೂಂದು ಮೂಲದ ಪ್ರಕಾರ ಶಿವಣ್ಣ ಅವರು ತಮಿಳಿನ ಮತ್ತೂಂದು ಹಿಟ್ ಚಿತ್ರ “ಖೈದಿ’ ಯ ಕನ್ನಡ ರಿಮೇಕ್‌ನಲ್ಲೂ ನಟಿಸಲು ಒಪ್ಪಿದ್ದಾರೆ. ಆಕ್ಷನ್, ನಿಗೂಢತೆ, ಸೆಂಟಿಮೆಂಟ್ ಎಲ್ಲವೂ ಹೊಂದಿರುವ ಈ ಸಿನಿಮಾ ಶಿವಣ್ಣ ಅವರ ವ್ಯಕ್ತಿತ್ವಕ್ಕೆ ಚೆನ್ನಾಗಿ ಹೊಂದಿಕೆ ಆಗುತ್ತದೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಶಿವಣ್ಣ ಮತ್ತೆ ರಿಮೇಕ್ ಸಿನಿಮಾ ಮಾಡುತ್ತಾರಾ..? ಮಾಡಿದ್ರೆ ಯಾವ ಸಿನಿಮಾ ಮಾಡುತ್ತಾರೆ ಅನ್ನೊ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಷ್ಟೆ.