Advertisement

ಬಿಜೆಪಿ ಯೂಸ್​ ಆ್ಯಂಡ್​ ಥ್ರೋ ಮಾಡುತ್ತೆ: ಶಿವರಾಜ ತಂಗಡಗಿ

06:09 PM Dec 26, 2022 | Team Udayavani |

ಕೊಪ್ಪಳ: ಯೂಸ್ ಆ್ಯಂಡ್ ಥ್ರೋ ಮಾಡುವವರು ಯಾರಾದ್ರೂ ಇದ್ರೆ ಅದು ಬಿಜೆಪಿ ಪಕ್ಷದವರು ಎನ್ನುವುದಕ್ಕೆ ಜನಾರ್ದನ ರೆಡ್ಡಿ ಅವರೇ ಒಂದು ಉದಾಹರಣೆ. ರೆಡ್ಡಿ ಅವರನ್ನು ಬೇಕಾದಾಗ ಬಳಸಿಕೊಂಡು ಈಗ ಕೈ ಬಿಟ್ಟಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಅವರಿಗೆ ನಾನು ಶುಭಾಶಯ ತಿಳಿಸುವೆ. ಆದರೆ, ಜನಾರ್ದನ ರೆಡ್ಡಿ ಅವರು ಬಿಜೆಪಿಯನ್ನು ನಂಬಿದ್ದರು. ಬಿಜೆಪಿ ಅವರನ್ನು ಬಳಸಿಕೊಂಡು ಕೈ ಬಿಟ್ಟಿದೆ. ಬಿಜೆಪಿ ಒಂದು ತರ ಅವಕಾಶವಾದಿಗಳಿದ್ದಂತೆ, ಅವಕಾಶ ಇದ್ದಾಗ ಯಾರನ್ನು ಬಳಕೆ ಮಾಡಿಕೊಳ್ಳಲು ಅವರು ಯೋಚಿಸಲ್ಲ. ಒಂದು ಕಾಲದಲ್ಲಿ ಜನಾರ್ದನ ರೆಡ್ಡಿ ಅವರು ಬರ್ತಾರೆ ಎಂದರೆ ದೆಹಲಿ ಹಾಗೂ ರಾಜ್ಯ ನಾಯಕರು ಕಾದು ಸ್ವಾಗತ ಕೋರುತ್ತಿದ್ದರು. ಈಗ ಅವರ ಕೆಲಸ ಮುಗಿದಿದೆ. ಜನಾರ್ದನ ರೆಡ್ಡಿ ಅವರನ್ನು ಹೇಗೆಲ್ಲಾ ಉಪಯೋಗಿಸಿಕೊಳ್ಳಬೇಕೋ ಹಾಗೆ ಉಪಯೋಗಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಬರಲು ರೆಡ್ಡಿ ಅವರು ಕಾರಣರಾಗಿದ್ದರು ಎಂದರು.

ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾವು ಐದು ಜನ ಶಾಸಕರನ್ನು ಬಳಕೆ ಮಾಡಿಕೊಂಡು ಅಧಿಕಾರವನ್ನು ಪಡೆಯಿತು. ಆಮೇಲೆ ಕೈ ಬಿಟ್ಟಿತು. ಆ ನಂತರ ಯಡಿಯೂರಪ್ಪ ಅವರನ್ನು ಪಕ್ಷ ಬಳಸಿಕೊಂಡು ಕೈ ಬಿಟ್ಟರು. ಅವರು ಹೋರಾಟ ಮಾಡಿದ್ದವರು. ಪಕ್ಷಕ್ಕಾಗಿ ದುಡಿದವರು. ಅವರನ್ನೂ ಬಿಜೆಪಿ ಕೈ ಬಿಟ್ಟಿತು. ಈಚೆಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು 16 ಜನ ಶಾಸಕರನ್ನು ಖರೀದಿ ಮಾಡಿತು. ಸರ್ಕಾರ ಅಧಿಕಾರಕ್ಕೆ ತಂದ ಬಳಿಕ ಹೆಚ್. ವಿಶ್ವನಾಥ, ಆರ್ ಶಂಕರ್, ನಾಗೇಶ, ಪ್ರತಾಪಗೌಡ ಪಾಟೀಲ್ ಅವರನ್ನು ಉಪಯೋಗಿಸಿಕೊಂಡು ಕೈ ಬಿಟ್ಟಿದೆ. ಬಿಜೆಪಿ ಪಕ್ಷ ಕಟ್ಟಿದ ಎಲ್.ಕೆ. ಅಡ್ವಾನಿ ಅವರು ಈಗ ಏಲ್ಲಿದ್ದಾರೆ ? ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ಬಿಜೆಪಿಯವರು ಒಂದು ರೀತಿ ಅವಕಾಶವಾದಿಗಳು ಎಂದರು.

ಬಿಜೆಪಿಯವರು ಯೂಸ್ ಎಂಡ್ ಥ್ರೋ ಸಂಸ್ಕೃತಿ ನಮಗೆ ಮೊದಲೇ ಗೊತ್ತಾಯಿತು. ನಮ್ಮನ್ನು ಅವರು ಅನರ್ಹ ಮಾಡಿದರು. ಆದರೆ ಜನಾರ್ದನ ರೆಡ್ಡಿ ಅವರಿಗೆ ಈಗ ಗೊತ್ತಾಗಿದೆ. ಬಿಜೆಪಿಯಲ್ಲಿ ಕೆಲಸ ಮುಗಿಯವ ವರೆಗೂ ಮಾತ್ರ ಮಾಮಾ ಎನ್ನುವಂತ ಸಂಸ್ಕೃತಿಯಿದೆ ಎಂದರಲ್ಲದೇ, ಜನಾರ್ದನ ರೆಡ್ಡಿ ಅವರಿಗೆ ಬಿಜೆಪಿಯಲ್ಲಿ ಅನ್ಯಾಯವಾಗಿದೆ. ಹಾಗಾಗಿ ಹೊಸ ಪಕ್ಷ ಕಟ್ಟಿದ್ದಾರೆ ಎಂದು ನನಗೆ ಅನಿಸುತ್ತದೆ. ಹೊಸ ಪಕ್ಷ ಈಗತಾನೇ ಉದಯವಾಗಿದೆ. ಅವರ ಪ್ರಚಾರ ವೈಖರಿ ಮೇಲೆ ಮುಂದೆ ಎಲ್ಲ ನಿರ್ಧಾರವಾಗುತ್ತದೆ. ಆದರೆ ರೆಡ್ಡಿ ಅವರು ಬಿಜೆಪಿಗೆ ಒಂದು ಪಾಠವನ್ನಂತೂ ಕಲಿಸುತ್ತಾರೆ ಎಂದುಕೊಂಡಿದ್ದೇನೆ ಎಂದರು.

ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಅವರ ಸ್ಪರ್ಧೆ ನಮಗೆ ಏನೂ ಸಮಸ್ಯೆ ಆಗಲ್ಲ. ಜಿಲ್ಲೆಯ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಗೆಲ್ಲಲಿದ್ದಾರೆ. ಜಿಲ್ಲೆಯಲ್ಲಿ ಸಿದ್ದರಾಮಯ್ಯ ಅವರು ಹಿಂದೆ ಸ್ಪರ್ಧಿಸಿದ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಹೇಳಿದ್ದಾರೆ. ಈಗಾಗಲೇ ಅವರು ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ಎನ್ನುವುದು ನಿರ್ಧಾರ ಮಾಡಲಿದೆ. 2023ರ ಚುನಾವಣೆಯಲ್ಲಿ ಯಾರ ಉಸಿರು ನಿಲ್ಲುತ್ತೆ ಎನ್ನುವುದು ಜನ ನಿರ್ಧಾರ ಮಾಡ್ತಾರೆ ಎಂದು ಬಿಎಸ್‌ವೈ ಹೇಳಿಕೆಗೆ ಟಾಂಕ್ ನೀಡಿದರು.

Advertisement

ಕೊಪ್ಪಳ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳ ಚುನಾವಣೆಯ ಆಕಾಂಕ್ಷಿ ಅಭ್ಯರ್ಥಿಗಳ ಸಭೆ ಕರೆದಿದ್ದೇವೆ. ಎಲ್ಲ ಬ್ಲಾಕ್ ಅಧ್ಯಕ್ಷರನ್ನು ಸಭೆಗೆ ಆಹ್ವಾನಿಸಲಾಗಿದೆ. ಜಿಲ್ಲಾ ವೀಕ್ಷಕರಾಗಿ ಶರಣಪ್ಪ ಸುಣಗಾರ ಆಗಮಿಸಲಿದ್ದು, ಅವರು ಆಕಾಂಕ್ಷಿತರ ಹಾಗೂ ಮುಖಂಡರ ಅಭಿಪ್ರಾಯ ಪಡೆಯಲಿದ್ದಾರೆ. ಜಿಲ್ಲೆಯ ಆಕಾಂಕ್ಷಿಗಳಿಗೆ ಸಭೆಯಲ್ಲಿ ಮಾತನಾಡಲು ಅವಕಾಶವಿದೆ. ಕೆಪಿಸಿಸಿ ಬ್ಲಾಕ್ ಅಧ್ಯಕ್ಷರು, ಮುಂಚೂಣಿ ಘಟಕದ ಅಧ್ಯಕ್ಷರು, ಜಿಲ್ಲೆಯ ಪದಾಧಿಕಾರಿಗಳಿಗೆ ಈ ಸಭೆಗೆ ಪಾಲ್ಗೊಳ್ಳುವಲ್ಲಿ ಅವಕಾಶವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next