ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿದೆ ಎನ್ನಲಾದ ಡ್ರಗ್ಸ್ ಮಾಫಿಯಾ ಸದ್ಯ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಚಿತ್ರರಂಗದ ಅನೇಕರು ಇದರ ಬಗ್ಗೆ ತಮ್ಮದೇ ಆದ ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೇ ವೇಳೆ ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ನ ಆಗು-ಹೋಗುಗಳಲ್ಲಿ ಮುಂದಾಳತ್ವ ವಹಿಸಿಕೊಳ್ಳುತ್ತಿರುವ ನಟ ಶಿವರಾಜಕುಮಾರ್ ಕೂಡ, ಚಂದನವನದ ಡ್ರಗ್ಸ್ ಮಾಫಿಯಾ ಬಗ್ಗೆ ಮಾತನಾಡಿದ್ದಾರೆ.
“ಯಾವುದೇ ಇಂಡಸ್ಟ್ರಿಯಾದ್ರೂ, ಅಲ್ಲಿ ಒಳ್ಳೆಯದು ಇರುತ್ತೆ, ಕೆಟ್ಟದ್ದು ಇರುತ್ತೆ. ಅದ್ರಲ್ಲಿ ಯಾವುದನ್ನು ತೆಗೆದುಕೊಳ್ಳಬೇಕು ಎಂಬ ಅರಿವು ನಮಗಿರಬೇಕು. ಫನ್‌ಗೊಸ್ಕರ ನಾವು ಮಾಡುವ ಕೆಲಸದಿಂದ ಸಮಾಜಕ್ಕೆ ತೊಂದರೆಯಾಗಬಾರದು. ನಾವು ಈ ವ್ಯವಸ್ಥೆಯಲ್ಲಿ ಬದುಕುತ್ತಿರುವುದರಿಂದ ಸಮಾಜಕ್ಕೆ ನಾವು ಮಾದರಿಯಾಗಬೇಕು’ ಎಂದಿದ್ದಾರೆ.
“ನಮ್ಮ ಇಂಡಸ್ಟ್ರಿಯಲ್ಲಿ ಡ್ರಗ್ಸ್ ಇದೆ ಅಥವಾ ಇಲ್ಲ ಅನ್ನೋದನ್ನು ನಾವು ಹೇಳುವುದಕ್ಕೆ ಆಗಲ್ಲ. ಅದನ್ನು ಪೊಲೀಸರು ತನಿಖೆ ಮಾಡಿ ಹೇಳಬೇಕು. ಆದ್ರೆ, ನಾನು ಇಲ್ಲಿಯವರೆಗೆ ಶೂಟಿಂಗ್ ಮಾಡಿದ ಸಿನಿಮಾಗಳಲ್ಲಿ, ನಾನು ಕಂಡಂತೆ ಅದರ ಎಲ್ಲ ಆರ್ಟಿಸ್ಟ್, ಟೆಕ್ನಿಷಿಯನ್ಸ್ ತಮ್ಮ ಕೆಲಸಕ್ಕಷ್ಟೇ ಗಮನ ಕೊಟ್ಟಿದ್ದಾರೆ. ನಾನಂತೂ ಈ ಥರದ ಚಟುವಟಿಕೆಗಳನ್ನು ನಮ್ಮ ಇಂಡಸ್ಟ್ರಿಯಲ್ಲಿ ನೇರವಾಗಿ ಕಂಡಿಲ್ಲ. ತಪ್ಪು ಯಾರೇ ಮಾಡಿದ್ರೂ, ಯಾವ ಇಂಡಸ್ಟ್ರಿಯವರು ಮಾಡಿದ್ರೂ, ತಪ್ಪು ತಪ್ಪೆ. ಅದನ್ನು ಯಾರೂ ವಹಿಸಿಕೊಂಡು ಮಾತನಾಡುವುದು ಸರಿಯಲ್ಲ. ಈ ಬಗ್ಗೆ ತನಿಖೆ ನಡೆಯಲಿ. ಯಾರು ತಪ್ಪು ಮಾಡಿದ್ದಾರೋ ಅಂಥವರಿಗೆ ಶಿಕ್ಷೆಯಾಗಲಿ. ಯಾರೋ ಕೆಲವರು ಮಾಡುವ ಕೆಲಸಕ್ಕೆ ಇಡೀ ಇಂಡಸ್ಟ್ರಿ ಬಗ್ಗೆ ದೂರುವುದು ಸರಿಯಲ್ಲ’ ಅನ್ನೋದು ಶಿವಣ್ಣ ಅಭಿಪ್ರಾಯ.
“ಸಿನಿಮಾ ಇಂಡಸ್ಟ್ರಿಯಲ್ಲಿ ಹಿರಿಯರು ಅಥವಾ ಲೀಡರ್ ಅಂದ್ರೆ, ಇಲ್ಲಿರುವವರಿಗೆ ಆಗಾಗ್ಗೆ ಎಚ್ಚರಿಕೆ – ಸಲಹೆ ಕೊಡುತ್ತಿರುವುದಷ್ಟೇ ಕೆಲಸವಲ್ಲ. ಅದ್ರಲ್ಲೂ ಇಂಥ ವಿಷಯಗಳ ಬಗ್ಗೆ ಜಾಗೃತಿ ಪ್ರತಿಯೊಬ್ಬರಿಗೂ ಅವರ ಮನಸ್ಸಿಗೆ ಬರಬೇಕು ಎಂದಿದ್ದಾರೆ ಶಿವಣ್ಣ.