ವರನಟ ಡಾ. ರಾಜಕುಮಾರ್ ಕುಟುಂಬದ ಆಶ್ರಯದಲ್ಲಿರುವ ಮೈಸೂರಿನ “ಶಕ್ತಿಧಾಮ’ ಕೇಂದ್ರದಲ್ಲಿ ಬುಧವಾರ ನಡೆದ ಗಣರಾಜ್ಯೋತ್ಸವದಲ್ಲಿ ನಟ ಶಿವರಾಜಕುಮಾರ್ ಭಾಗಿಯಾಗಿ ಅಲ್ಲಿನ ಮಕ್ಕಳೊಂದಿಗೆ ಗಣರಾಜ್ಯೋತ್ಸವವನ್ನು ಆಚರಿಸಿ ಸಂಭ್ರಮಿಸಿದರು.
“ಶಕ್ತಿಧಾಮ’ದ ಮಕ್ಕಳು ಮತ್ತು ಸಿಬ್ಬಂದಿಯ ಆಶಯದಂತೆ, ಧ್ವಜಾರೋಹಣ ಮಾಡಿದ ಶಿವರಾಜಕುಮಾರ್, ಬಳಿಕ ತಾವೇ ಮಕ್ಕಳಿಗೆ ಸಿಹಿ ಹಂಚಿಕೆ ಮಾಡಿದರು. ಈ ವೇಳೆ ಗೀತಾ ಶಿವರಾಜಕುಮಾರ್, ನಿರ್ದೇಶಕ ಚಿ. ಗುರುದತ್, “ಶಕ್ತಿಧಾಮ’ದ ಸಿಬ್ಬಂದಿ ಮೊದಲಾದವರು ಶಿವರಾಜಕುಮಾರ್ ಅವರಿಗೆ ಸಾಥ್ ನೀಡಿದರು.
ಮಕ್ಕಳೊಂದಿಗೆ ಜಾಲಿ ರೈಡಿಂಗ್: ಇನ್ನು ಗಣರಾಜ್ಯೋತ್ಸವ ಆಚರಣೆಗೆ ಮುನ್ನ ನಟ ಶಿವರಾಜಕುಮಾರ್, “ಶಕ್ತಿಧಾಮ’ದ ಮಕ್ಕಳನ್ನು ಜಾಲಿ ರೈಡ್‌ಗೆ ಕರೆದುಕೊಂಡು ಹೋಗಿದ್ದಾರೆ. ಸ್ವತಃ ತಾವೇ “ಶಕ್ತಿಧಾಮ’ದ ವಾಹನವನ್ನು ಚಾಲನೆ ಮಾಡಿದ ಶಿವರಾಜಕುಮಾರ್, ಅಲ್ಲಿನ ಮಕ್ಕಳನ್ನೆಲ್ಲ ಕರೆದುಕೊಂಡು ಊರನ್ನು ಒಂದು ಸುತ್ತು ಹಾಕಿ ಬಂದಿದ್ದಾರೆ. ಕೆಲವು ದಿನಗಳ ಹಿಂದಷ್ಟೇ “ಶಕ್ತಿಧಾಮ’ದಲ್ಲಿ ಶಿವರಾಜ ಕುಮಾರ್ ಮಕ್ಕಳೊಂದಿಗೆ ಖೋ ಖೋ ಆಟ ಆಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿ, ಶಿವಣ್ಣ ಕಾರ್ಯಕ್ಕೆ ಮೆಚ್ಚುಗೆಯ ಮಾತುಗಳು ಕೇಳಿಬಂದಿದ್ದವು.
ಇದನ್ನೂ ಓದಿ:ಹೊರಬಂತು ‘ಜೇಮ್ಸ್’ ಹೊಸ ಲುಕ್ ಪೋಸ್ಟರ್
ಅನಾಥ, ಕುಟುಂಬದಿಂದ ದೂರ ಉಳಿದ ಮತ್ತು ಶಿಕ್ಷಣದಿಂದ ವಂಚಿತರಾದ ಹೆಣ್ಣು ಮಕ್ಕಳಿಗಾಗಿ ಇರುವ “ಶಕ್ತಿಧಾಮ’ ಹೆಣ್ಣು ಮಕ್ಕಳ ಆಶ್ರಯ ಕೇಂದ್ರವನ್ನು ಜವಾಬ್ದಾರಿಯನ್ನು ಪಾರ್ವತಮ್ಮ ರಾಜಕುಮಾರ್ ನೋಡಿಕೊಳ್ಳುತ್ತಿದ್ದರು. ಹಲವು ವರ್ಷಗಳಿಂದ ಡಾ. ರಾಜಕುಮಾರ್ ಕುಟುಂಬ ಆಶ್ರಯದದಿಂದ ನಡೆಯುತ್ತಿರುವ “ಶಕ್ತಿಧಾಮ’ ಆಶ್ರಯ ಕೇಂದ್ರವನ್ನು ಜವಾಬ್ದಾರಿಯನ್ನು ಪಾರ್ವತಮ್ಮ ರಾಜಕುಮಾರ್ ಅವರ ನಿಧನದ ಬಳಿಕ ಪುನೀತ್ ರಾಜಕುಮಾರ್ ಈ ಹೊಣೆಗಾರಿಯನ್ನು ವಹಿಸಿಕೊಂಡಿದ್ದರು. ಇದೀಗ ಪುನೀತ್ ರಾಜಕುಮಾರ್ ನಿಧನದ ಬಳಿಕ “ಶಕ್ತಿಧಾಮ’ದ ಜವಾಬ್ದಾರಿಯನ್ನು ಗೀತಾ ಶಿವರಾಜಕುಮಾರ್ ವಹಿಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ನಿಧನದ ಬಳಿಕ ಶಿವರಾಜಕುಮಾರ್ ಪತ್ನಿ ಗೀತಾ ಅವರೊಂದಿಗೆ ಆಗಾಗ್ಗೆ ಮೈಸೂರಿನ “ಶಕ್ತಿಧಾಮ’ಕ್ಕೆ ಭೇಟಿ, ಅಲ್ಲಿನ ಕುಂದುಕೊರತೆಗಳನ್ನು ನೋಡಿಕೊಳ್ಳುತ್ತಿದ್ದಾರೆ