Advertisement

ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಶಿವಪುರ ತೂಗುಸೇತುವೆ

12:35 PM Apr 25, 2022 | Team Udayavani |

ಜೋಯಿಡಾ: ತಾಲೂಕಿನ ಉಳವಿ ಗ್ರಾಪಂ ಗುಂದ ಅರಣ್ಯ ಇಲಾಖೆ ವ್ಯಾಪ್ತಿಯ ಶಿವಪುರದ ತೂಗು ಸೇತುವೆ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.

Advertisement

ಸುತ್ತಲು ಕಾಡು ಗುಡ್ಡ ಮಧ್ಯ ಹರಿಯುವ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ ತೂಗು ಸೇತುವೆ ಮೇಲೆ ನಡೆಯಲು ಬಹಳಷ್ಟು ಖುಷಿ ಎನಿಸುತ್ತದೆ. ಇದು ಅತ್ಯದ್ಭುತ ಪ್ರವಾಸಿ ತಾಣವೂ ಹೌದು.

2015 ರಲ್ಲಿ ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಇಲಾಖೆಯಿಂದ ನಿರ್ಮಿತವಾದ ಈ ತೂಗು ಸೇತುವೆ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತವಾಗಿದೆ. 234 ಮೀ. ಉದ್ದ, 1.5 ಮೀ. ಅಗಲ ಹೊಂದಿದ್ದು ಈ ಸೇತುವೆ ಪ್ರವಾಸಿ ತಾಣ ಅಷ್ಟೇ ಅಲ್ಲದೇ ಯಲ್ಲಾಪುರ ಮತ್ತು ಜೋಯಿಡಾ ತಾಲೂಕಿನ ಕೊಂಡಿಯಾಗಿದೆ. ಈ ಸೇತುವೆ ಮೇಲೆ ಬೈಕ್‌ ಸವಾರರು ದಾಟಬಹುದಾಗಿದ್ದು, ಸ್ಥಳೀಯ ಬಹಳಷ್ಟು ಜನರು ಯಲ್ಲಾಪುರಕ್ಕೆ ಈ ಸೇತುವೆ ಮೂಲಕವೇ ಸಾಗುತ್ತಾರೆ.

ಶಾಸಕ ಆರ್‌.ವಿ. ದೇಶಪಾಂಡೆ ಅವರು ವಿಶೇಷ ಕಾಳಜಿ ವಹಿಸಿ ಶಿವಪುರದ ತೂಗು ಸೇತುವೆ ನಿರ್ಮಿಸಲು ಶ್ರಮ ವಹಿಸಿದ್ದಾರೆ. ಹಿಂದೆ ಇಲ್ಲಿನ ಜನರು ತೆಪ್ಪದ ಮೂಲಕ ನದಿ ದಾಟಿ ಯಲ್ಲಾಪುರಕ್ಕೆ ಸಾಗುತ್ತಿದ್ದರು. ಹೀಗೆ ದಾಟುವಾಗ ಅನೇಕ ಬಾರಿ ಕೆಲ ಅನಾಹುತಗಳು ಉಂಟಾದ ಕಾರಣ ಇದನ್ನು ಗಮನಿಸಿದ ಶಾಸಕ ಆರ್‌.ವಿ. ದೇಶಪಾಂಡೆ ಈ ಭಾಗದ ಜನರ ಅನುಕೂಲಕ್ಕೆ ಮತ್ತು ಪ್ರವಾಸಿ ತಾಣವಾಗಲೆಂದು ಶಿವಪುರದ ತೂಗು ಸೇತುವೆ ನಿರ್ಮಿಸಲು ಕಾರಣೀಕರ್ತರಾಗಿದ್ದರು.

ರಸ್ತೆ ಅಭಿವೃದ್ಧಿ ಅತ್ಯವಶ್ಯ: ಶಿವಪುರದ ತೂಗು ಸೇತುವೆಗೆ ಸಾಗಲು ಉಳವಿ ಮೂಲಕ 12 ಕಿ.ಮೀ. ಜೀಪ್‌ ಮೂಲಕ ಸಾಗಬೇಕಾಗುತ್ತದೆ. ಬೇರೆ ವಾಹನಗಳ ಮೂಲಕ ಸಾಗುವುದು ಕಷ್ಟಕರ ಮತ್ತು ಅಪಾಯಕಾರಿಯಾಗಿದೆ.

Advertisement

ಏಕೆಂದರೆ ಇಲ್ಲಿ ರಸ್ತೆ ಅಭಿವೃದ್ಧಿಪಡಿಸದ ಕಾರಣ ಇಲ್ಲಿನ ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ಬಹಳಷ್ಟು ಸಮಸ್ಯೆ ಉಂಟಾಗಿದೆ. ಈಗಾಗಲೇ ಅರ್ಧದಷ್ಟು ರಸ್ತೆ ಕೆಲಸ ಮುಗಿದಿದ್ದು, ಇನ್ನುಳಿದ ರಸ್ತೆ ಮಾಡಲು ಅರಣ್ಯ ಇಲಾಖೆ ತಡೆಯೊಡ್ಡಿದೆ ಎನ್ನುವುದು ಬೇಸರದ ಸಂಗತಿ. ಆದಷ್ಟು ಬೇಗ ರಸ್ತೆ ಕೆಲಸ ಮುಗಿದಲ್ಲಿ ಮಳೆಗಾಲದಲ್ಲಿ ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೂ ಅನುಕೂಲವಾಗುತ್ತದೆ.

ರಾಜ್ಯದ ಉತ್ತಮ ಪ್ರವಾಸಿ ತಾಣಗಳಲ್ಲಿ ಒಂದಾದ ಶಿವಪುರದ ತೂಗು ಸೇತುವೆಗೆ ಕೋಟಿ ಕೋಟಿ ಖರ್ಚು ಮಾಡಿದರೂ ರಸ್ತೆ ಸರಿಯಿಲ್ಲದ ಕಾರಣ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಈ ವರ್ಷ ಜಿ.ಪಂ ಇಲಾಖೆಯಿಂದ ತೂಗು ಸೇತುವೆ ರಿಪೇರಿ ಮತ್ತು ಬಣ್ಣ ಹಚ್ಚುವ ಕೆಲಸ ನಡೆದಿದ್ದು, ಇಷ್ಟೆಲ್ಲ ಹಣ ಖರ್ಚು ಮಾಡಿದರು ರಸ್ತೆ ಸರಿ ಇಲ್ಲದೆ ಮಾಡಿದ ಕೆಲಸ ವ್ಯರ್ಥವಾಗಿದೆ ಎನ್ನುವುದು ಸ್ಥಳೀಯರ ದೂರಾಗಿದೆ.ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಗಮನ ಹರಿಸಿ ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕೆಮದು ಪ್ರವಾಸಿಗ ರಂಜಿತ್‌ ಪೂಜಾರಿ ಹೇಳಿದ್ದಾರೆ.

ಶಿವಪುರದ ತೂಗು ಸೇತುವೆ ಸುಂದರ ಪ್ರವಾಸಿ ತಾಣ. ಆದರೆ ರಸ್ತೆ ಸರಿಯಿಲ್ಲದ ಕಾರಣ ಈ ಸ್ಥಳಕ್ಕೆ ಸಾಗಲು ಸಮಸ್ಯೆ ಉಂಟಾಗುತ್ತದೆ. ನಾವೇನೋ ಒಂದು ದಿನ ಬಂದು ಹೋಗುತ್ತೇವೆ. ಆದರೆ ಇಲ್ಲಿ ದಿನ ನಿತ್ಯ ಓಡಾಡುವವರು ಕಷ್ಟದ ಜೀವನ ನಡೆಸುತ್ತಿರುವುದು ಕಟು ಸತ್ಯ. ಈ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಿಸಬೇಕಿದೆ.

-ಸಂದೇಶ ದೇಸಾಯಿ

Advertisement

Udayavani is now on Telegram. Click here to join our channel and stay updated with the latest news.

Next