ಮಣಿಪಾಲ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಫೆ. 22ರಂದು ಆರಂಭಗೊಂಡ ಅತಿರುದ್ರ ಮಹಾಯಾಗವು ರವಿವಾರ ಬೆಳಗ್ಗೆ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಶ್ರೀ ವಿಧುಶೇಖರ ಭಾರತೀತೀರ್ಥ ಮಹಾಸ್ವಾಮಿಯವರ ಉಪಸ್ಥಿತಿಯಲ್ಲಿ ಪೂರ್ಣಾಹುತಿಯೊಂದಿಗೆ ಸಂಪನ್ನ ಗೊಂಡಿತು.
ಸುಮಾರು 40 ಸಾವಿರಕ್ಕೂ ಅಧಿಕ ಭಕ್ತರು ದೂರದೂರುಗಳಿಂದ ಆಗಮಿಸಿ ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಅತೀ ಅಪರೂಪದ ಯಾಗವನ್ನು ಕಣ್ತುಂಬಿಕೊಂಡರು. ಯಾಗ ಮಂಟಪದಲ್ಲಿ ಬೆಳಗ್ಗೆ 6.30 ರಿಂದ ವಿಧಿವಿಧಾನಗಳು ಆರಂಭ ಗೊಂಡವು. ಸುಮಾರು 180 ಋತ್ವಿಜರಿಂದ ಏಕಾದಶ ಕುಂಡಗಳಲ್ಲಿ ಅತಿರುದ್ರ ಮಹಾಯಾಗ, ವೈದಿಕರ ವೇದಘೋಷ, ಶೃಂಗೇರಿ ಮಠ ಆಸ್ಥಾನ ದವರಿಂದ ವಾದ್ಯಗೋಷ್ಠಿ, ಚೆಂಡೆ ವಾದನದ ಜತೆಗೆ ಬೆಳಗ್ಗೆ 11.30ಕ್ಕೆ ಯಾಗ ಪೂರ್ಣಾಹುತಿಗೊಂಡಿತು. ಮಧ್ಯಾಹ್ನ ಜಗದ್ಗುರುಗಳಿಂದ ಶ್ರೀ ಉಮಾಮಹೇಶ್ವರ ದೇವರಿಗೆ ಕಲಶಾಭಿ ಷೇಕ, ಪ್ರಸನ್ನಪೂಜೆ, ಮಹಾಪೂಜೆ, ಭಕ್ತರಿಗೆ ಫಲಮಂತ್ರಾಕ್ಷತೆ ಮತ್ತು ಮಧ್ಯಾಹ್ನ ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನೆರವೇರಿತು.
ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ, ಸಚಿವ ಸುನಿಲ್ ಕುಮಾರ್, ಶಾಸಕ ಸುಕುಮಾರ್ ಶೆಟ್ಟಿ, ಚಿತ್ರನಟ ರಕ್ಷಿತ್ ಶೆಟ್ಟಿ, ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕುಲಪತಿ ಲೆ|ಜ| ಡಾ| ಎಂ.ಡಿ. ವೆಂಕಟೇಶ್, ಶೃಂಗೇರಿ ಮಠದ ಉಡುಪಿ ಧರ್ಮಾಧಿಕಾರಿ ವಾಗೀಶ ಶಾಸ್ತ್ರೀ, ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷ, ಶಾಸಕ ರಘುಪತಿ ಭಟ್, ಶಿವಪಾಡಿ ದೇಗುಲದ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್, ದೇಗುಲದ ಆಡಳಿತ ಮೊಕ್ತೇಸರರಾದ ಶುಭಾಕರ ಸಾಮಂತ್, ಎಸ್. ದಿನೇಶ್ ಪ್ರಭು, ಶಾಶ್ವತ ಟ್ರಸ್ಟಿ ದಿನೇಶ್ ಶ್ರೀಧರ ಸಾಮಂತ್, ಕೋಶಾಧಿಕಾರಿ ಸತೀಶ್ ಪಾಟೀಲ್, ಗಣ್ಯರು, ಪ್ರಮುಖರು, ಸಾವಿರಾರು ಭಕ್ತರು ಭಾಗವಹಿಸಿದ್ದರು.