ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ “ರುಸ್ತುಂ ಸಿನಿಮಾ” ಜೂನ್ 28ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ರುಸ್ತುಂನಲ್ಲಿ ಶಿವಣ್ಣ ಪೊಲೀಸ್ ಪಾತ್ರ ನಿರ್ವಹಿಸಿದ್ದಾರೆ. ಆದರೆ ಪೊಲೀಸ್ ಪಾತ್ರ ಶಿವರಾಜ್ ಕುಮಾರ್ ಗೆ ಹೊಸತಲ್ಲ, ಆದರೆ ರುಸ್ತುಂನಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಪ್ರೇಕ್ಷಕರ ಮನ ರಂಜಿಸಲಿದ್ದಾರಂತೆ!
ಖ್ಯಾತ ಸ್ಟಂಟ್ ಮಾಸ್ಟರ್ ರವಿ ವರ್ಮಾ “ರುಸ್ತುಂ” ಸಿನಿಮಾವನ್ನು ನಿರ್ದೇಶಿಸಿದ್ದು, ಜಯಣ್ಣ ಮತ್ತು ಬೋಗೇಂದ್ರ ಚಿತ್ರದ ನಿರ್ಮಾಪಕರಾಗಿದ್ದಾರೆ. ಪೊಲೀಸ್ ಪಾತ್ರಧಾರಿ ಶಿವಣ್ಣ ಫುಲ್ ಆ್ಯಕ್ಷನ್ ಮೂಡ್ ನಲ್ಲಿರುವ ಚಿತ್ರದ ಪೋಸ್ಟರ್ ಅನ್ನು ಸಿನಿಮಾ ತಂಡ ಬಿಡುಗಡೆ ಮಾಡಿದೆ.
ರುಸ್ತುಂ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ಅಭಿನಯಿಸಿದ್ದಾರೆ. ವಿವೇಕ್ ಆನಂದ್ ಒಬೇರಾಯ್, ಆರ್ ಜೆ, ನಟ ರೋಹಿತ್ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ. ಅನೂಪ್ ಸೀಳಿನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ರುಸ್ತುಂ ಚಿತ್ರದ ಬಿಡುಗಡೆ ಕುರಿತು ಉದಯವಾಣಿ ಜೊತೆ ಕಳೆದ ಎರಡು ದಿನಗಳ ಹಿಂದೆ ಮಾತನಾಡಿದ್ದ ಶಿವಣ್ಣ, ಹಿಂದೆ “ಟಗರು’ಚಿತ್ರದಲ್ಲೂ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದೆ. ಅದು ಸೂರಿ ಸಿನಿಮಾ ಆಗಿದ್ದರಿಂದ ಅಲ್ಲಿ ಅಂಡರ್‌ಪ್ಲೇ ಇತ್ತು. ಅದೊಂದು ಪಕ್ಕಾ ಆಟಿಟ್ಯೂಡ್ ಅಧಿಕಾರಿಯಾಗಿರುವ ಸಿನಿಮಾ ಆಗಿತ್ತು. ರುಸ್ತುಂನಲ್ಲೂ ಅಂಥದ್ದೇ ಪಾತ್ರವಿದೆ.
ಯಾರಿಗಾದರೂ ಹೊಡೀತಿನಿ ಅಂದರೆ ಹೊಡೆಯೋದು ಪಕ್ಕಾ . ಒಂದು ರೀತಿಯ ಹೈ ವೋಲ್ಟೆಜ್ ಇರುವಂತಹ ಆ್ಯಂಗ್ರಿ ಪೊಲೀಸ್ ಆಗಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕ ರವಿವರ್ಮ ಪಕ್ಕಾ ಕಮರ್ಷಿಲಯ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ವಿಭಿನ್ನ ಎನ್ನುವುದಕ್ಕಿಂತ ಮೇಕಿಂಗ್‌ನಲ್ಲಿ ಹೊಸತನ ಕೊಡಲು ಪ್ರಯತ್ನ ಮಾಡಲಾಗಿದೆ ಎಂದು ರುಸ್ತುಂ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.