“ಅಮರಶ್ರೀಗೆ ಪದ್ಮಶ್ರೀನಾ? – ಶಿವರಾಜ್‌ಕುಮಾರ್ ಹೀಗೆ ಹೇಳಿ ಒಂದು ಕ್ಷಣ ಮೌನವಾದರು. ತಮ್ಮನ ಅಗಲಿಕೆಯ ನೋವು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಎಷ್ಟೇ ನೋವಿದ್ದರೂ ಅಣ್ಣನಾಗಿ ತಮ್ಮನ ಕಾರ್ಯಗಳನ್ನು ಮುಂದೆ ನಿಂತು ಮಾಡುವ ಅನಿವಾರ್ಯತೆ. ಇದೇ ಸಂದರ್ಭದಲ್ಲಿ ಅಭಿಮಾನಿಗಳಿಂದ ಕೇಳಿಬರುತ್ತಿರುವ ಒತ್ತಾಯವೆಂದರೆ ಪುನೀತ್ ರಾಜ್‌ಕುಮಾರ್ ಅವರಿಗೆ ಪದ್ಮಶ್ರೀ ನೀಡಬೇಕೆಂಬುದು.
ಈ ಬಗ್ಗೆ ಮಾತನಾಡುವ ಶಿವರಾಜ್‌ಕುಮಾರ್, “ನನ್ನ ತಮ್ಮ ಅಮರಶ್ರೀ. ಎಲ್ಲರ ಹೃದಯದಲ್ಲಿ ಪ್ರೀತಿಯಿಂದ ಇರುತ್ತಾನೆ. ಅದೇ ದೊಡ್ಡ ಪ್ರಶಸ್ತಿ. ಅದೇ ಪದ್ಮಶ್ರೀಗಿಂತ ದೊಡ್ಡದು’ ಎನ್ನುವುದು ಶಿವರಾಜ್ ಕುಮಾರ್ ಮಾತು. ಪುನೀತ್ ರಾಜ್ ಕುಮಾರ್ ಅವರ 11ನೇ ದಿನದ ಕಾರ್ಯದ ಬಗ್ಗೆ ಮಾತನಾಡಿದ ಶಿವಣ್ಣ, “ನಾವು ಇದನ್ನೆಲ್ಲಾ ಪುನೀತ್‌ಗೆ ಮಾಡುತ್ತಿದ್ದೇವಾ ಎಂದು ಫೀಲ್ ಆಗುತ್ತದೆ. ಆದರೆ, ವಿಧಿ ವಿಧಾನ ಮಾಡಲೇಬೇಕು. ಪುನೀತ್ ಇಲ್ಲ ಎಂಬ ನೋವು ನನಗೆ ಸದಾ ಕಾಡುತ್ತಿರುತ್ತದೆ.
ತಮ್ಮ ಅನ್ನೋದಕ್ಕಿಂತ ಮಗನೇ ಹೋದಂತಹ ನೋವು ಆಗುತ್ತಿದೆ. ಆ ನೋವಿನಿಂದ ಹೊರಬರಲು ಸಾಧ್ಯವೇ ಇಲ್ಲ. ಚಿಕ್ಕ ವಯಸ್ಸಿನಿಂದಲೂ ನಾವು ಅವನನ್ನು ಆರಾಧಿಸಿದ್ದೇವೆ. ಅವನ ಬೆಳವಣಿಗೆ ನೋಡಿ ಖುಷಿಪಟ್ಟಿದ್ದೇವೆ. ನಮಗೆ ಇಷ್ಟೊಂದು ನೋವಾಗಿದೆ ಎಂದ ಮೇಲೆ ಅವನನ್ನು ಪ್ರೀತಿಸುವ ಅಭಿಮಾನಿಗಳಿಗೆ ಎಷ್ಟು ನೋವಾಗಬೇಡ ಹೇಳಿ. ಹಾಗಂತ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರಬಾರದು.
ಅವನು ಸಂತೋಷವಾಗಿ ಇರಬೇಕೆಂದರೆ ಅಭಿಮಾನಿ ಗಳು ಈ ರೀತಿ ನಡೆದುಕೊಳ್ಳಬಾರದು. ಅಪ್ಪು ಹೆಸರನ್ನು ಇನ್ನೂ ಅಮರವಾಗಿಸಲು ಪ್ರಯತ್ನಿಸಿ. ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಅಪ್ಪು ಮಾಡುತ್ತಿದ್ದ ಕಾರ್ಯಗಳನ್ನು ಮುಂದುವರಿಸಿ’ ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದರು. ಇದೇ ವೇಳೆ ಮಾತನಾಡಿದ ಶಿವಣ್ಣ, ಪುನೀತ್‌ಗೆ ಜನ ತೋರಿಸುತ್ತಿರುವ ಪ್ರೀತಿಗೆ ಬೆಲೆ ಕಟ್ಟೋಕೆ ಆಗಲ್ಲ.
ಇದು ಅವನ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. ನಾವು ಮೂವರು ಸಹೋದರರು ಒಟ್ಟಿಗೆ ಸಿನಿಮಾ ಮಾಡುವ ಕನಸಿತ್ತು. ಇತ್ತೀಚೆಗೆ ನಡೆದ “ಸಲಗ’ ಇವೆಂಟ್ ನಲ್ಲೂ ಅಣ್ಣನ ಸಿನಿಮಾ ನಿರ್ದೇಶನ ಮಾಡಬೇಕೆಂಬ ಆಸೆ ತೋಡಿಕೊಂಡಿದ್ದ ಅಪ್ಪು. ಆದರೆ, ಅದು ಈಡೇರಲೇ ಇಲ್ಲ’ ಎಂದು ಭಾವುಕರಾದರು.