Advertisement

ಶಿವಾನಂದ ಶೆಲ್ಲಿಕೇರಿ ಹೆಗಲಿಗೆ ಕನ್ನಡದ ಶಾಲು

07:22 PM Nov 22, 2021 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷರ ಚುನಾವಣೆಯಲ್ಲಿ ಹಿರಿಯ ಸಾಹಿತಿ, ಕರ್ನಾಟಕ ಬಯಲಾಟ ಅಕಾಡೆಮಿ ಮಾಜಿ ಸದಸ್ಯ ಡಾ| ಶಿವಾನಂದ ಶೆಲ್ಲಿಕೇರಿ ಆಯ್ಕೆಯಾಗಿದ್ದಾರೆ. ಕಳೆದ ಆರು ತಿಂಗಳ ಹಿಂದೆಯೇ ಚುನಾವಣೆ ಘೋಷಣೆಯಾಗಿತ್ತಾದರೂ ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ರವಿವಾರ ಜಿಲ್ಲೆಯ ಒಂಭತ್ತು ತಾಲೂಕುಗಳಲ್ಲಿ ಬೆಳಗ್ಗೆಯಿಂದಲೇ
ಮತದಾನ ಪ್ರಕ್ರಿಯೆ ಜೋರಾಗಿತ್ತು.

Advertisement

ಸಾಹಿತಿಗಳು, ಸಾಹಿತ್ಯಾಸಕ್ತರು ಸಹಿತ ಪರಿಷತ್‌ನ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದವರು ಮತ ಚಲಾಯಿಸಿದರು.ಸಂಜೆವರೆಗೂ ನಡೆದ ಮತ ಚಲಾವಣೆಯ ವೇಳೆ ಮೂವರು ಅಭ್ಯರ್ಥಿಗಳು,ತಮಗೆ ಮತ ನೀಡುವಂತೆ ಮತಗಟ್ಟೆ ಕೇಂದ್ರದ ಎದುರು ಕೈ ಮುಗಿದು ಮನವಿ ಮಾಡುತ್ತಿದ್ದರು. ಜಿಲ್ಲೆಯಾದ್ಯಂತ 9 ತಾಲೂಕು ಕೇಂದ್ರ ಹಾಗೂ ಕೆಲವೆಡೆ ಹೆಚ್ಚುವರಿ ಸೇರಿ ಒಟ್ಟು 12 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಜೋರಾಗಿ ನಡೆದಿದ್ದು, ಸಾಹಿತಿಗಳು, ಸಾಹಿತ್ಯಾಸಕ್ತರು ತಮ್ಮ ಹಕ್ಕು ಚಲಾಯಿಸಿದರು.

ಸಂಜೆ ಮತ ಏಣಿಕೆ ಪ್ರಕ್ರಿಯೆ ಆರಂಭಗೊಂಡಿತು. ಪ್ರಥಮ ಸುತ್ತಿನಿಂದಲೂ ಶಿವಾನಂದ ಶೆಲ್ಲಿಕೇರಿ ಅವರು ಮುನ್ನಡೆ ಕಾಯ್ದುಕೊಂಡು ಬಂದಿದ್ದರು. ಕೊನೆಯ ಸುತ್ತಿನಲ್ಲಿ ಒಟ್ಟು 811 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದರು. ಜಿಲ್ಲೆಯಾದ್ಯಂತ 8787 ಜನ ಮತದಾರರಿದ್ದರು. ಅದರಲ್ಲಿ 4706 ಮತಗಳು ಚಲಾವಣೆಗೊಂಡವು.

ಕರ್ನಾಟಕ ಬಯಲಾಟ ಅಕಾಡೆಮಿ ಮಾಜಿ ಸದಸ್ಯರೂ ಆಗಿರುವ ಶಿವಾನಂದ ಶೆಲ್ಲಿಕೇರಿ ಅವರಿಗೆ 2452, ಬಸವೇಶ್ವರ ಶಿಕ್ಷಣ ಕಾಲೇಜಿನ ಪ್ರಾಧ್ಯಾಪಕ ಪ್ರೊ| ಜಿ.ಕೆ. ತಳವಾರ ಅವರಿಗೆ 1641 ಮತಗಳು ಬಿದ್ದರೆ, ಇಳಕಲ್ಲನ ಕಲಾವಿದ ಮಹಾಂತೇಶ ಗಜೇಂದ್ರಗಡ ಅವರಿಗೆ 567 ಮತಗಳು ಲಭಿಸಿದವು. ಒಟ್ಟು 46 ಮತಗಳು ರಿಜೆಕ್ಟ್ ಆದವು. ಮೂವರು ಅಭ್ಯರ್ಥಿಗಳಲ್ಲಿ ಅತಿಹೆಚ್ಚು ಮತ ಪಡೆದ ಶಿವಾನಂದ ಶೆಲ್ಲಿಕೇರಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಪ್ರೊ.ಜಿ.ಕೆ. ತಳವಾರ ಅವರಿಗಿಂತ 811 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬಾಗಲಕೋಟೆ ತಹಶೀಲ್ದಾರ್‌ ಗುರುಸಿದ್ದಯ್ಯ ಹಿರೇಮಠ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ನಿಯೋಜಿತ ಕಸಾಪ ಅಧ್ಯಕ್ಷರಾಗಿ ಆಯ್ಕೆಯಾದ ಶಿವಾನಂದ ಶೆಲ್ಲಿಕೇರಿ ಅವರನ್ನು ಜಿಲ್ಲೆಯ ಹಲವು ಸಾಹಿತಿಗಳು, ಸಾಹಿತ್ಯಾಸಕ್ತರು ಸನ್ಮಾನಿಸಿದರು.

ಜಾನಪದ ಕಲಾವಿದರ ಸಂಘದ ಮೂಲಕ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದೇನೆ. ಇದನ್ನು ಗುರುತಿಸಿ ಪ್ರಜ್ಞಾವಂತ ಸಾಹಿತಿ, ಸಾಹಿತ್ಯಾಸಕ್ತ ಮತದಾರರು ಜಿಲ್ಲಾ ಕಸಾಪ ಚುನಾವಣೆಯಲ್ಲಿ ಬಹುಮತದಿಂದ ನನ್ನನ್ನು ಗೆಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲರನ್ನೂ ಕರೆದುಕೊಂಡು ಕನ್ನಡಮ್ಮನ ಸೇವೆ ಮಾಡುವೆ.
ಶಿವಾನಂದ ಜಿ. ಶೆಲ್ಲಿಕೇರಿ, ಕಸಾಪ ನೂತನ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next