ವಿಜಯಪುರ: ವಿಜಯಪುರ ಜಿಲ್ಲೆ ಸೇರಿದಂತೆ ಪ್ರವಾಹ ಬಾಧಿತ ಉತ್ತರ ಕರ್ನಾಟಕದಲ್ಲಿ ಭೀಮಾ ನದಿ ಪಾತ್ರದ ಸಂತ್ರಸ್ತರಿಗೆ ನೆರವಾಗಲು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಿದ್ಧವಿದೆ. ಆದರೆ ಸರ್ಕಾರ ತಾನೇ ಪಡೆದ ದೇಣಿಗೆ ಹಣಕ್ಕೆ ಅನುಮತಿ ನೀಡುತ್ತಿಲ್ಲ. ನಬಾರ್ಡ್ ಕೂಡ ಅನುಮತಿಸುತ್ತಿಲ್ಲ. ಹೀಗಾಗಿ ಭೀಮಾ ಪ್ರವಾಹ ಪೀಡಿತರಿಗೆ ನೆರವಾಗಲು ಸಾಧ್ಯವಾಗುವುದಿಲ್ಲ ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವಾನಂದ ಪಾಟೀಲ ಹೇಳಿದರು.
ಶನಿವಾರ ಡಿಸಿಸಿ ಬ್ಯಾಂಕ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರ್ಕಾರಕ್ಕೆ ಕೋವಿಡ್-19 ಸಂಕಷ್ಟದ ಪರಿಹಾರಕ್ಕೆ 1 ಕೋಟಿ ರೂ. ಹಾಗೂ ಕೋವಿಡ್ ವಾರಿಯರ್ ಆಶಾ ಕಾರ್ಯಕರ್ತೆಯರಿಗೆ 50 ಲಕ್ಷ ರೂ. ನೀಡಿದ್ದೇವೆ. ಸರ್ಕಾರ ದೇಣಿಗೆ ನೀಡಿದ ಹಣಕ್ಕೆ ಅನುಮತಿ ಪತ್ರ ನೀಡುತ್ತಿಲ್ಲ. ಇದರಿಂದ ನಬಾರ್ಡ್‍ನಲ್ಲೂ ತಕರಾರು ಆಗಲಿದ್ದು, ಭೀಮಾ ಸಂತ್ರಸ್ತರಿಗೆ ನೆರವಾಲು ತೊಡಕಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಇದಲ್ಲದೇ ಕೋವಿಡ್ ಸಂಕಷ್ಟಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನಿಡಿರುವ 1 ಕೋಟಿ ರೂ. ಇತರೆ ಕಾರಣಗಳು, ಸರ್ಕಾರ ತಾನು ನೀಡುತ್ತಿದ್ದ ಬಡ್ಡಿ ದರದಲ್ಲಿ 0.30 ಕಡಿತ ಮಾಡಿದೆ. ಸಾಲ ಮರುಪಾವತಿ ವಿಷಯದಲ್ಲಿ ಬಲವಂತ ಮಾಡದ ಕಾರಣವೂ ಮರುಪಾವತಿ ಕಡಿಮೆ ಆಗಿದೆ. ಇಂಥ ಹಲವು ಕಾರಣಗಳಿಂದ ಪ್ರಸಕ್ತ ವರ್ಷದ ನಿವ್ವಳ ಲಾಭದಲ್ಲಿ ಸುಮಾರು 2 ಕೋಟಿ ರೂ. ಕಡಿಮೆಯಾಗಿದೆ. ಕಳೆದ ವರ್ಷ 12 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದರೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ 10.69 ಕೋಟಿ ರೂ. ಮಾತ್ರ ನಿವ್ವಳ ಲಾಭ ಗಳಿಸಿದೆ. ಆದರೆ ರೈತರಿಗೆ ಸಾಲ ನೀಡಿಕೆಯಲ್ಲಿ ಕಳೆದ ವರ್ಷ 50 ಸಾವಿರ ರೂ. ನೀಡಲು ಇದ್ದ ಅವಕಾಶವನ್ನು ಈ ಬಾರಿ 55 ಸಾವಿರ ರೂ.ಗೆ ಏರಿಸಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ:ರಾಜ್ಯದ ಪ್ರತಿಯೊಬ್ಬ ಚಾಲಕರ ಕಷ್ಟ- ಸುಖದ ಜತೆ ನಾವಿರುತ್ತೇವೆ: ಡಿ.ಕೆ ಶಿವಕುಮಾರ್
ಕೋವಿಡ್ ಕಾರಣದಿಂದಾಗಿ ಉದ್ದೇಶಿತ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶತಮಾನೋತ್ಸವದ ಅದ್ದೂರಿ ಸಮಾರಂಭವನ್ನು ರದ್ದು ಮಾಡಿ, ಸಾಂಕೇತಿಕ ಹಾಗೂ ಸರಳ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಆದರೆ ನವೆಂಬರ್ 20 ರಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೇತೃತ್ವದಲ್ಲಿ ನಗರದಲ್ಲಿ ಅಖಿಲ ಭಾರತ 67ನೇ ಸಹಕಾರಿ ಸಪ್ತಾಹ ಸಮಾರೋಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನವೆಂಬರ್ 14 ರಿಂದ 20 ರ ವರೆಗೆ ದೇಶದಲ್ಲಿ ಸಹಕಾರ ಸಪ್ತಾಹ ಹಮ್ಮಿಕೊಂಡಿದ್ದು, ಸಮಾರೋಪ ಕಾರ್ಯಕ್ರಮ ವಿಜಯಪುರದಲ್ಲಿ ನಡೆಯಲಿದೆ ಎಂದರು.
ಸಹಕಾರಿ ಸಂಸ್ಥೆಗಳ ಮೂಲಕ ಆರ್ಥಿಕ ಸೇರ್ಪಡೆ, ಡಿಜಿಟಲೈಸೇಶನ್ ಮತ್ತು ಸಾಮಾಜಿಕ ಜಾಲತಾಣ ವಿಷಯದೊಂದಿಗೆ ಸಹಕಾರಿ ಸಪ್ತಾಹ ಸಮಾರೋಪ ನಡೆಯಲಿದೆ. ಕರ್ನಾಟಕ ರಾಜ್ಯ ಸಹಕಾರಿ ಮಹಾ ಮಂಡಳ, ಜಿಲ್ಲಾ ಸಹಕಾರಿ ಯೂನಿಯನ್, ಕರ್ನಾಟಕ ರಾಜ್ಯದ ಉಣ್ಣೆ ಕೈಮಗ್ಗ ನೇಕಾರರ ಮಹಾ ಮಂಡಲ, ರಾಜ್ಯ ಕುಕ್ಕುಟ ಮಹಾಮಂಡಳ, ಸಹಕಾರಿ ನೂಲಿನ ಗಿರಣಿಗಳ ಮಹಾಮಂಡಲ ಸಹಯೋಗದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.