ಸಿರವಾರ: ದೇವದುರ್ಗ ಕ್ಷೇತ್ರದ ಅಭಿವೃದ್ದಿ ಬಗ್ಗೆ ಗಮನ ಸೆಳೆಯಲು ಸಿಎಂ ಗ್ರಾಮ ವಾಸ್ತವ್ಯ ನಡೆಸಲಿದ್ದ ಕರೇಗುಡ್ಡ ಗ್ರಾಮಕ್ಕೆ ಪಾದಯಾತ್ರೆ ಕೈಗೊಂಡಿದ್ದ ಶಾಸಕ ಕೆ.ಶಿವನಗೌಡ ನಾಯಕ ಮತ್ತು ಬೆಂಬಲಿಗರನ್ನು ಪೊಲೀಸರು ಬುಧವಾರ ಮಾರ್ಗ ಮಧ್ಯೆಯೇ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮತ್ತು ದೇವದುರ್ಗ ಕ್ಷೇತ್ರದ ಅಭಿವೃದ್ದಿ ಕಡೆಗಣನೆ ಖಂಡಿಸಿ ಬಿಜೆಪಿ ಶಾಸಕ ಶಿವನಗೌಡ ನಾಯಕ ಅವರು ಸಾವಿರಾರು ಕಾರ್ಯಕರ್ತರೊಂದಿಗೆ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದಿಂದ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದವರೆಗೆ ಪಾದಯಾತ್ರೆ ಕೈಗೊಂಡಿದ್ದರು.
ಕರೇಗುಡ್ಡ ಗ್ರಾಮಕ್ಕೆ ಬುಧವಾರ ಪಾದಯಾತ್ರೆ ತಲುಪಬೇಕಿತ್ತು. ಆದರೆ, ಮಾರ್ಗ ಮಧ್ಯೆ ಬಲ್ಲಟಗಿ ಬಳಿ ಶಾಸಕ ಶಿವನಗೌಡ ನಾಯಕ ಮತ್ತು ಇತರರನ್ನು ಪೊಲೀಸರು ವಶಕ್ಕೆ ಪಡೆದರು. ಪರಿಣಾಮ ಶಾಸಕರ ಪಾದಯಾತ್ರೆ ಅರ್ಧಕ್ಕೆ ಮೊಟಕುಗೊಂಡಿತು.
ಬಂಧನಕ್ಕೆ ಖಂಡನೆ: ಬಿಜೆಪಿ ಶಾಸಕ ಶಿವನಗೌಡ ನಾಯಕ್ ಅವರನ್ನು ಮುಖ್ಯಮಂತ್ರಿಗಳ ಚಿತಾವಣೆಯಿಂದ ಬಂಧಿಸಿರುವುದು ಖಂಡನೀಯ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು. ರಾಯಚೂರಿನ ಮಾನ್ವಿ ತಾಲೂಕಿನಲ್ಲಿ ಮನವಿ ಸಲ್ಲಿಸಲು ಮುಂದಾದ ಜನಪ್ರತಿನಿಧಿಯನ್ನೇ ಬಂಧಿಸಿರುವುದು ಸರಿಯಲ್ಲ.
ಇದು ಮುಖ್ಯಮಂತ್ರಿಯವರ ಪಾಳೇಗಾರಿಕೆ ಸಂಸ್ಕೃತಿಯನ್ನು ತೋರಿಸುತ್ತದೆ. ಇದೇ ರೀತಿಯ ಆಡಳಿತ ನಡೆಸಿದರೆ ರಾಜ್ಯದ ಜನ ಸರಿಯಾದ ಪಾಠ ಕಲಿಸಲಿದ್ದಾರೆ. ಶಿವನಗೌಡ ನಾಯಕ್ ಅವರು ವಾಲ್ಮೀಕಿ ಸಮುದಾಯದವರಾಗಿದ್ದು, ಅವರ ಬಂಧನದಿಂದ ಮುಖ್ಯಮಂತ್ರಿಗಳು ವಾಲ್ಮೀಕಿ ಸಮುದಾಯದ ನಾಯಕರಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು.