ರಾಯಚೂರು: “ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ದೇವದುರ್ಗ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದಾಗ ಶಾಸಕ ಶಿವನಗೌಡ ನಾಯಕರು ಇನ್ನೂ ಜನಿಸಿರಲಿಲ್ಲ. ಅವರ ಬಂಡವಾಳ ಎಲ್ಲ ಗೊತ್ತಿದೆ. ಅವರಿಂದ ನಾವೇನು ಕಲಿಯಬೇಕಿಲ್ಲ’ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಮೊದಲ ಬಾರಿ ನ್ಯಾಯಾಲಯದ ಮೆಟ್ಟಲೇರಿದ್ದೇ ಶಿವನಗೌಡ ನಾಯಕರ ಕಾರಣದಿಂದ. ಅದನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ. ನನ್ನ ಬಳಿ ಬಂದು ಯಾವುದೋ ದೇವಸ್ಥಾನ ನಿರ್ಮಿಸಬೇಕು 25 ಕೋಟಿ ರೂ.ಕೊಡಿ ಎಂದು ಕೇಳಿದ್ದರು. ಆದರೆ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಲಿಲ್ಲ.
ಸಮಯ ಬಂದರೆ ಕಾಲು, ಇಲ್ಲವಾದರೆ ಜುಟ್ಟು ಹಿಡಿಯುವ ಜಾಯಮಾನ ಅವರದ್ದು. ಅಂಥವರಿಂದ ನಾವು ಏನೂ ಕಲಿಯಬೇಕಿಲ್ಲ. ಶಾಸಕರು ಯಾರಿಗಾಗಿ ಪಾದಯಾತ್ರೆ ಮಾಡುತ್ತಾರೆ ಎಂಬುದು ಗೊತ್ತಿದೆ. ಇಂಥ ಹೋರಾಟಗಳನ್ನು ಸಾಕಷ್ಟು ನೋಡಿದ್ದೇನೆ. ಈಗಾಗಲೇ ಗೂಗಲ್ ದೇವದುರ್ಗ ರಸ್ತೆ ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ’ ಎಂದರು.
“ಈಗ ಅಭಿವೃದ್ಧಿ ಆಗಿಲ್ಲ ಎಂದು ಮಾತನಾಡುವ ಅವರು, 2009ರಲ್ಲಿ ಶಾಸಕರಾಗಿ, ಸಚಿವರೂ ಆದಾಗ ಏನು ಮಾಡಿದ್ದರು. ಐದು ವರ್ಷ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿ ಕಾರದಲ್ಲಿ ಇತ್ತಲ್ಲವೇ? ನಾಲಿಗೆ ಇದೆ ಎಂದು ಹರಿಬಿಡುವುದನ್ನು ನಿಲ್ಲಿಸಲಿ.
ಅಣ್ತಮ್ಮ, ಹೆಂಡತಿ ಕ್ಷೇತ್ರಗಳಿಗೆ ಮಾತ್ರ ಸಿಎಂ ಎಂದಿದ್ದಾರೆ. ನನಗೂ ಎಲ್ಲ ತಿಳಿಯುತ್ತದೆ. ನಾನು ಈ ರಾಜ್ಯದ ಮುಖ್ಯಮಂತ್ರಿ. ದೇವದುರ್ಗ ಐಬಿಯಲ್ಲಿ ಡ್ರಾಮಾ ಮಾಡಿ ಯಡಿಯೂರಪ್ಪ ಅವರನ್ನು ಖೆಡ್ಡಾಕ್ಕೆ ಕೆಡವಿದ್ದನ್ನು ರಾಜ್ಯದ ಜನ ನೋಡಿದ್ದಾರೆ’ ಎಂದು ಶಾಸಕರ ವಿರುದ್ಧ ಹರಿಹಾಯ್ದರು.
“ಬಿಜೆಪಿಯವರು ನನ್ನ ಗ್ರಾಮ ವಾಸ್ತವ್ಯಕ್ಕೆ ಅಡ್ಡಿಪಡಿಸುವ ಉದ್ದೇಶ ಹೊಂದಿದ್ದಾರೆ. ಅವರು ಅ ಧಿಕಾರದಲ್ಲಿದ್ದಾಗ ಮಂಡ್ಯ, ರಾಮನಗರ, ಹಾಸನಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂಬುದು ಗೊತ್ತಿದೆ. ಆದರೆ, ನಾನು ಶಿಕಾರಿಪುರಕ್ಕೆ 500 ಕೋಟಿ ರೂ. ನೀಡಿದ್ದೇನೆ. ಎಲ್ಲದ್ದಕ್ಕೂ ಹೃದಯ ವೈಶಾಲ್ಯತೆ ಬೇಕು’ ಎಂದರು.