Advertisement

ಕುವೆಂಪು ವಿವಿ ಕುಲಪತಿ ಅಧಿಕಾರ ಸ್ವೀಕಾರ

05:20 PM Aug 03, 2019 | Team Udayavani |

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ಮನುಜಮತ, ವಿಶ್ವಪಥ, ಸಮನ್ವಯ ಸೇರಿದಂತೆ ಪಂಚಶೀಲ ತತ್ವಗಳನ್ನು ಆಧರಿಸಿ ಕಾರ್ಯ ನಿರ್ವಹಿಸುವ ಮೂಲಕ ವಿಶ್ವವಿದ್ಯಾಲಯವನ್ನು ದೇಶದ ಟಾಪ್‌ 50 ವಿವಿಗಳ ಸಾಲಿಗೆ ತರುವ ನಿಟ್ಟಿನಲ್ಲಿ ಶ್ರಮ ವಹಿಸುವುದಾಗಿ ನೂತನ ಕುಲಪತಿ ಪ್ರೊ| ಬಿ.ಪಿ. ವೀರಭದ್ರಪ್ಪ ತಿಳಿಸಿದರು.

Advertisement

ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ನಂತರ ಪ್ರೊ| ಎಸ್‌.ಪಿ. ಹಿರೇಮಠ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸೇರಿದಂತೆ ವಿವಿಧ ರೀತಿಯ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಗ್ರಾಮೀಣ ಭಾಗದ ಪ್ರತೀ ಪದವಿ ವಿದ್ಯಾರ್ಥಿಗೂ ಉನ್ನತ ಶಿಕ್ಷಣವನ್ನು ನೀಡುವ ಮುಖ್ಯ ಗುರಿಯನ್ನು ವಿವಿಯು ಹೊಂದಲು ಬಯಸುತ್ತದೆ ಎಂದರು. ವಿಶ್ವವಿದ್ಯಾಲಯದಲ್ಲಿ ಸಮರ್ಥ ಸಿಬ್ಬಂದಿ ವರ್ಗವಿದ್ದು ಸುಲಲಿತ ಆಡಳಿತ ಸಾಧ್ಯವಿದೆ. ವಿಶ್ವವಿದ್ಯಾಲಯದ ಈ ಹಿಂದಿನ ಕಾರ್ಯಸಾಧನೆಗಳು ಬಹಳ ಎತ್ತರದಲ್ಲಿದ್ದು, ಆ ಗುಣಮಟ್ಟವನ್ನು ಮುಂದುವರಿಸುವ ಮತ್ತು ಇನ್ನಷ್ಟು ಉತ್ಕೃಷ್ಟಗೊಳಿಸುವ ಸವಾಲು ನಮ್ಮ ಮೇಲಿದೆ. ಇದಕ್ಕಾಗಿ ಎಲ್ಲರ ಸಹಕಾರವನ್ನು ಕೋರುತ್ತೇನೆ ಹಾಗೂ ಈ ಹುದ್ದೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವ ಮೂಲಕ ವಿವಿಯ ಘನತೆಯನ್ನು ಎತ್ತಿ ಹಿಡಿಯುತ್ತೇನೆಂದು ತಿಳಿಸಿದರು.

ಪ್ರಭಾರ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದ್ದ ಡಾ| ಎಸ್‌. ಎಸ್‌. ಪಾಟೀಲ್ ಮಾತನಾಡಿ, ವಿವಿಯು ಈ ಹಿಂದೆ ಅನೇಕ ವಿದ್ವಾಂಸ ಕುಲಪತಿಗಳನ್ನು ಕಂಡಿದೆ. ಈ ಬಾರಿಯೂ ದಕ್ಷ, ದೂರದೃಷ್ಟಿಯುಳ್ಳ ಶಿಕ್ಷಕರನ್ನು ಆಡಳಿತಗಾರರನ್ನಾಗಿ ಪಡೆದಿದೆ. ಇವರ ಮಾರ್ಗದರ್ಶನದಲ್ಲಿ ವಿವಿಯು ಉನ್ನತ ಸಾಧನೆ ಮಾಡುತ್ತದೆ ಎಂದು ಆಶಿಸಿದರು.

ವಿಶ್ವವಿದ್ಯಾಲಯದ ಕುಲಸಚಿವ ಪ್ರೊ| ಭೋಜ್ಯಾನಾಯ್ಕ ಸ್ವಾಗತಿಸಿದರು. ಪ್ರೊ| ಹಿರೇಮಣಿನಾಯ್ಕ ಕುಲಪತಿಗಳನ್ನು ಪರಿಚಯಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ|ರಾಜಾ ನಾಯಕ ವಂದಿಸಿದರು. ಡಾ| ಹಸೀನಾ ವಂದಿಸಿದರು. ಕುಲಪತಿಗಳ ದಾವಣಗೆರೆ ವಿವಿಯ ಸಹೋದ್ಯೋಗಿಗಳು, ಕುಟುಂಬ ವರ್ಗ, ವಿವಿಯ ವಿವಿಧ ವಿಭಾಗಗಳ ಮತ್ತು ಘಟಕಗಳ ಬೋಧಕ ಸಿಬ್ಬಂದಿ ಮತ್ತು ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next