Advertisement

ಸಂಕಷ್ಟದಲ್ಲೂ ಶಿಮುಲ್‌ ಅಪ್ರತಿಮ ಸಾಧನೆ

08:50 PM May 20, 2021 | Team Udayavani |

„ಶರತ್‌ ಭದ್ರಾವತಿ

Advertisement

ಶಿವಮೊಗ್ಗ: 2020 ಎಲ್ಲ ವರ್ಗಕ್ಕೂ ಸಂಕಷ್ಟ ತಂದ ಕರಾಳ ವರ್ಷ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ(ಶಿಮುಲ್‌) ಹಾಲು ಒಕ್ಕೂಟ 2020-21ರ ಸಾಲಿನಲ್ಲಿ 7.73 ಕೋಟಿ ರೂ. ಲಾಭ ಗಳಿಸಿ ದಾಖಲೆ ಬರೆದಿದೆ.

ಲಾಕ್‌ಡೌನ್‌ ನಂತರ ಮದುವೆ, ಸಭೆ, ಸಮಾರಂಭಗಳು, ಹೋಟೆಲ್‌ ಉದ್ಯಮ ನೆಲಕಚ್ಚಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಾಲು ಖರೀದಿಯಲ್ಲಿ ಸಾಕಷ್ಟು ಇಳಿಕೆ ಕಂಡಿತು. ಮನೆಗಳಿಗೆ ಬಿಟ್ಟರೆ ಹೊರ ಜಿಲೆ, ಹೊರ ರಾಜ್ಯಗಳಿಗೆ ಹೋಗುವ ಹಾಲು ಸಂಪೂರ್ಣವಾಗಿ ನಿಂತಿತ್ತು. ಇದರಿಂದ ರಾಜ್ಯದ ಎಲ್ಲ ಹಾಲು ಒಕ್ಕೂಟಗಳು ನಷ್ಟ ಅನುಭವಿಸಿ ಹಾಲು ಖರೀದಿಯನ್ನೇ ಒಂದು ದಿನ ಮುಂದಕ್ಕೆ ಹಾಕಿದ್ದವು.

ನಂತರ ಬಾಕಿ ಉಳಿದ ಎಲ್ಲ ಹಾಲನ್ನು ಪೌಡರ್‌ಗೆ ಕಳುಹಿಸಿದ ಪರಿಣಾಮ ಕೊಂಚ ರಿಲೀಫ್‌ ಗೊಂಡವು. ಲಾಕ್‌ಡೌನ್‌ ಘೋಷಣೆಯಾದ ನಂತರ ಶಿಮುಲ್‌ ಹಾಲು ಉತ್ಪಾದನೆಯಲ್ಲಿ ಭಾರೀ ಏರಿಕೆ ಕಂಡುಬಂತು. ಕಳೆದ ವರ್ಷ 6.43 ಲಕ್ಷ ಲೀಟರ್‌ ಪ್ರತಿದಿನ ಹಾಲು ಉತ್ಪಾದನೆಯಾಗುತ್ತಿತ್ತು. ಮಾರಾಟ ಪ್ರಮಾಣ ಕಡಿಮೆಯಾಗಿತ್ತು. ಇದನ್ನೆಲ್ಲ ಯಶಸ್ವಿಯಾಗಿ ನಿಭಾಯಿಸಿದ ಪರಿಣಾಮ ಒಕ್ಕೂಟ ಲಾಭದತ್ತ ಹೆಜ್ಜೆ ಹಾಕಿದೆ.

ಉತ್ಪಾದನೆಯಲ್ಲಿ ಭಾರೀ ಏರಿಕೆ: ಎರಡು ವರ್ಷದಲ್ಲಿ ಹಾಲು ಸರಬರಾಜಿನಲ್ಲಿ ಭಾರೀ ಏರಿಕೆಯಾಗಿದ್ದು, ರೈತರಿಗೆ ಉತ್ತಮ ಆದಾಯ ದೊರೆಯುತ್ತಿದೆ. 5 ಲಕ್ಷ ಲೀಟರ್‌ ಆಸುಪಾಸು ಇದ್ದ ಹಾಲು ಉತ್ಪಾದನೆ ಈಗ 6.45 ಲಕ್ಷ ಲೀಟರ್‌ ತಲುಪಿದೆ. ಇದು ಈವರೆಗಿನ ಗರಿಷ್ಠ ಉತ್ಪಾದನೆ ಕೂಡ ಹೌದು. ಕೊರೊನಾ ಶುರುವಾದಾಗಿನಿಂದ ಹೈನುಗಾರಿಕೆ ಪ್ರಮಾಣ ಹೆಚ್ಚಾಗಿರುವುದು ಹಾಗೂ ಹಾಲು ಉತ್ಪಾದಕರ ಸಂಘಗಳ ಹೆಚ್ಚಳ, ರೈತರಿಗೆ ನಿರಂತರ ಆದಾಯ ದೊರೆಯುತ್ತಿರುವ ಪರಿಣಾಮ ಹಾಲು ಉತ್ಪಾದನೆಯೂ ಹೆಚ್ಚಳವಾಗಿದೆ.

Advertisement

ಶಿವಮೊಗ್ಗ ಹಾಲು ಒಕ್ಕೂಟ ಕೂಡ ರಾಜ್ಯದಲ್ಲೇ ಉತ್ತಮ ಬೆಲೆಗೆ ಹಾಲು ಖರೀದಿ ಮಾಡುತ್ತಿದ್ದು, ರೈತರು ಸಂತುಷ್ಟರಾಗಿದ್ದಾರೆ. ಹಾಲು ಗರಿಷ್ಠ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದ್ದರೂ ಅದನ್ನು ನಿಭಾಯಿಸುವಲ್ಲಿ ಒಕ್ಕೂಟ ಯಶಸ್ವಿಯಾಗಿದೆ. ಪ್ರಸ್ತುತ 6.45 ಲಕ್ಷ ಲೀಟರ್‌ ಹಾಲು ಪ್ರತಿದಿನ ಬರುತ್ತಿದ್ದು ಅದರಲ್ಲಿ 2.04 ಲಕ್ಷ ಲೀಟರ್‌ ಪ್ಯಾಕೇಟ್‌ ಹಾಲಿಗೆ, ಮೊಸರು, ಮಜ್ಜಿಗೆ 33ರಿಂದ 34 ಸಾವಿರ ಲೀಟರ್‌, 90 ಸಾವಿರ ಲೀಟರ್‌ ಇಂಟರ್‌ ಡೇರಿ ಸೇಲ್‌, 2.90ರಿಂದ 3 ಲಕ್ಷ ಲೀಟರ್‌ ಹಾಲಿನ ಪೌಡರ್‌ ಉತ್ಪಾದನೆಗೆ ಹೋಗುತ್ತದೆ.

ಹಾಲು ಮಾರಾಟ ಹೆಚ್ಚಳ ಮಾಡುವ ಸಲುವಾಗಿ ನಂದಿನಿ ಪಾರ್ಲರ್‌ಗಳ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ಶಿವಮೊಗ್ಗದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ್ದು, ದಾವಣಗೆರೆಯಲ್ಲೂ ಹಾಲು ಮಾರಾಟ ವೃದ್ಧಿಯಾಗಿದೆ. ಹೊಸ ಪಾಯಿಂಟ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮಾರಾಟ ಪ್ರಮಾಣ ಗಣನೀಯ ಹೆಚ್ಚಳವಾಗಿದೆ. ಕೊರೊನಾ ಪ್ರಭಾವ ಕಡಿಮೆಯಾದರೆ ಬೇರೆ ರಾಜ್ಯಗಳಿಗೆ ಹಾಲು ಮಾರಾಟ ಮತ್ತೆ ವಿಸ್ತರಣೆ ಮಾಡುವ ಚಿಂತನೆಯಲ್ಲಿ ಶಿಮುಲ್‌ ಇದೆ.

ಹಾಲಿನ ಸಂಗ್ರಹಣೆ 7 ಲಕ್ಷ ಲೀಟರ್‌ ತಲುಪುವ ಉದ್ದೇಶ ಹೊಂದಲಾಗಿದೆ. ಲಾಕ್‌ ಡೌನ್‌ ಕಾರಣ ಮಾರಾಟದಲ್ಲಿ ಕುಂಠಿತವಾಗಿತ್ತು. ಶಿಮುಲ್‌ ಒಕ್ಕೂಟದಿಂದ ಆ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಡೇರಿಯಲ್ಲಿ ಪೌಡರ್‌ ಘಟಕ, ಟೆಟ್ರಾ ಪ್ಯಾಕಿಂಗ್‌ ಘಟಕ, ಹಾಲು ಉತ್ಪಾದಕರಿಗೆ ಹೆಚ್ಚಿನ ಲಾಭಾಂಶ ನೀಡುವ ಉದ್ದೇಶ ಹೊಂದಲಾಗಿದೆ ಸಾರ್ವಜನಿಕರು ನಂದಿನಿ ಹಾಲನ್ನೇ ಹೆಚ್ಚು ಬಳಸುವುದರಿಂದ ರೈತರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ.
ಡಿ.ಆನಂದ್‌, ಶಿಮುಲ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next