ಶಿವಮೊಗ್ಗ: ಹಿಂಗಾರು, ಮುಂಗಾರು ಪೂರ್ವ ಮಳೆ ಕೈಕೊಟ್ಟ ಕಾರಣ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ನೀರಸವಾಗಿವೆ. ಮುಂಗಾರು ಸಹ ವಿಳಂಬವಾಗಿದ್ದು ರೈತರು ಆಕಾಶದತ್ತ ಮುಖ ಮಾಡಿದ್ದಾರೆ. ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಚದುರಿದಂತೆ ಮಳೆಯಾಗುತ್ತಿದ್ದು ಕೃಷಿ ಇಲಾಖೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಗೆ ಸಿದ್ಧತೆ ಮಾಡಿಕೊಂಡಿದೆ.
Advertisement
ಕೈಕೊಟ್ಟ ಮಳೆ:ಜಿಲ್ಲೆಯಲ್ಲಿ ಹಿಂಗಾರು ಮಳೆ ಶೇ.43ರಷ್ಟು ಕೊರತೆಯಾಗಿ ಯಾವುದೇ ಬೆಳೆ ಬಿತ್ತನೆಯಾಗಿರಲಿಲ್ಲ. ಶಿವಮೊಗ್ಗ ತಾಲೂಕಿನಲ್ಲಿ 200ಮಿಮೀ ವಾಡಿಕೆ ಮಳೆ ಇದ್ದು 83 ಮಿಮೀ ಮಳೆಯಾಗಿದೆ. ಭದ್ರಾವತಿಯಲ್ಲಿ 198 ಮಿಮೀ ಮಳೆ ಬದಲು 93 ಮಿಮೀ, ತೀರ್ಥಹಳ್ಳಿಯಲ್ಲಿ 219 ಮಿಮೀ ಬದಲು 103 ಮಿಮೀ, ಸಾಗರ ತಾಲೂಕಿನಲ್ಲಿ 200 ಮಿಮೀ ವಾಡಿಕೆ ಬದಲು 125 ಮಿಮೀ, ಹೊಸನಗರದಲ್ಲಿ 227 ವಾಡಿಕೆ ಬದಲು 130 ಮಿಮೀ, ಶಿಕಾರಿಪುರದಲ್ಲಿ 179 ಮಿಮೀ ಬದಲು 126 ಮಿಮೀ, ಸೊರಬ 177 ಮಿಮೀ ವಾಡಿಕೆಗೆ 148 ಮಿಮೀ ಮಾತ್ರ ಮಳೆಯಾಗಿತ್ತು. ಇದರಿಂದ ಹಿಂಗಾರಿನಲ್ಲಿ ಬಿತ್ತನೆ ಆಗಲೇ ಇಲ್ಲ.
Related Articles
Advertisement
ಮಳೆ ವಿವರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 43.60 ಮಿಮೀ ಮಳೆಯಾಗಿದ್ದು, ಸರಾಸರಿ 6.23 ಮಿಮೀ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 390.67 ಮಿಮೀ ಇದ್ದು, ಇದುವರೆಗೆ ಸರಾಸರಿ 18.57 ಮಿಮೀ ಮಳೆ ದಾಖಲಾಗಿದೆ.
ಶಿವಮೊಗ್ಗ 01.80 ಮಿಮೀ, ಭದ್ರಾವತಿ 01.20 ಮಿಮೀ, ತೀರ್ಥಹಳ್ಳಿ 06.00 ಮಿಮೀ, ಸಾಗರ 05.60 ಮಿಮೀ, ಶಿಕಾರಿಪುರ 02.60 ಮಿಮೀ, ಸೊರಬ 04.00 ಮಿಮೀ ಹಾಗೂ ಹೊಸನಗರ 22.40 ಮಿಮೀ ಮಳೆಯಾಗಿದೆ.
ಬಿತ್ತನೆ ಗುರಿ: ಜಿಲ್ಲೆಯಲ್ಲಿ ಭತ್ತ ಪ್ರಮುಖ ಬೆಳೆಯಾಗಿದ್ದು, ನಂತರ ಸ್ಥಾನದಲ್ಲಿ ಮೆಕ್ಕೆಜೋಳ ಇದೆ. ಮುಂಗಾರು ಹಂಗಾಮಿನಲ್ಲಿ 99 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ ಗುರಿ ಹೊಂದಿದ್ದರೆ, 55 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, ಹತ್ತಿ 1397 ಹೆಕ್ಟೇರ್, ತೊಗರಿ 800 ಹೆಕ್ಟೇರ್, 1598 ಹೆಕ್ಟೇರ್‌ನಲ್ಲಿ ಕಬ್ಬು ಸೇರಿ 1,59,546 ಹೆಕ್ಟೇರ್ ಬಿತ್ತನೆಗೆ ಗುರಿ ಹೊಂದಲಾಗಿದೆ.
ಮುಂಗಾರು ಪೂರ್ವ ಮಳೆ ಕೊರತೆಯಾದ ಕಾರಣ ರೈತರು ಬಿತ್ತನೆಗೆ ಭೂಮಿಯನ್ನು ಸಿದ್ಧಪಡಿಸಿಕೊಂಡಿಲ್ಲ. ಎರಡು ದಿನಗಳಿಂದ ಚದುರಿದಂತೆ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಮುಂಗಾರು ಸಹ ವಿಳಂಬವಾಗಿರುವುದರಿಂದ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಕಳೆದ ವರ್ಷ ಈ ವೇಳೆಗೆ 5ರಿಂದ 6 ಸಾವಿರ ಹೆಕ್ಟೇರ್ ಬಿತ್ತನೆಯಾಗಿತ್ತು. ಈ ವರ್ಷ 30ರಿಂದ 40 ಹೆಕ್ಟೇರ್ ಮಾತ್ರ ಬಿತ್ತನೆ ಮಾಡಲಾಗಿದೆ. ಮೆಕ್ಕೆಜೋಳ ಬಿತ್ತನೆಗೆ ಈ ಅವಧಿ ಪ್ರಶಸ್ತವಾಗಿದ್ದು ಅಗತ್ಯ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಇದೆ. ಭತ್ತ, ಹತ್ತಿ, ತೊಗರಿ ಬಿತ್ತನೆ ಬೀಜ ಸಹ ದಾಸ್ತಾನು ಇದ್ದು, ವಿತರಣೆಗೆ ಕೃಷಿ ಇಲಾಖೆ ಸರ್ವಸನ್ನದ್ಧವಾಗಿದೆ.•ಡಾ| ಎಂ. ಕಿರಣ್‌ಕುಮಾರ್
ಜಂಟಿ ನಿರ್ದೇಶಕ, ಕೃಷಿ ಇಲಾಖೆ