Advertisement

ಸಂತ್ರಸ್ತರ ನೆರವಿಗೆ ಸರ್ಕಾರ ಬದ್ಧ

12:08 PM Aug 26, 2019 | Naveen |

ಶಿವಮೊಗ್ಗ: ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ಸಾಕಷ್ಟು ಕುಟುಂಬಗಳು ಸೂರು ಕಳೆದುಕೊಂಡಿವೆ. ಅವರ ಜತೆ ಕೇಂದ್ರ ಮತ್ತು ರಾಜ್ಯ ಸರಕಾರದ ಸದಾ ಇದೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

Advertisement

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಸಂಪುಟ ಸೇರಿದ ಬಳಿಕ ಮೊದಲ ಸಲ ಜಿಲ್ಲೆಗೆ ಆಗಮಿಸಿದ್ದ ಕೆ.ಎಸ್‌.ಈಶ್ವರಪ್ಪ ಅವರಿಗೆ ಸ್ವಾಗತ, ನೆರೆ ಸಂತ್ರಸ್ತರಿಗೆ ನೆರವು ಕಾರ್ಯಕ್ರಮ ಹಾಗೂ ಅರುಣ್‌ ಜೇಟ್ಲಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿಯೊಂದು ಕುಟುಂಬಕ್ಕೆ ಕಾಯಕಲ್ಪ ಕಲ್ಪಿಸುವವರೆಗೆ ಸುಮ್ಮನಿರುವುದಿಲ್ಲ. ಸಮರೋಪಾದಿಯಲ್ಲಿ ಕೆಲಸ ಮಾಡಲಾಗುವುದು. ಈಗಾಗಲೇ ಸಂತ್ರಸ್ತರ ಖಾತೆಗೆ 10 ಸಾವಿರ ರೂ. ಜಮಾ ಮಾಡಲಾಗಿದೆ ಎಂದರು.

ವ್ಯಕ್ತಿಯ ಸಾವಿನೊಂದಿಗೆ ಪಕ್ಷಗಳೂ ಅಸ್ತಿತ್ವ ಕಳೆದುಕೊಂಡ ಸಾಕಷ್ಟು ಉದಾಹರಣೆಗಳು ದೇಶದಲ್ಲಿವೆ. ಆದರೆ, ಬಿಜೆಪಿ ವರ್ಷದಲ್ಲಿಯೇ ಸಾಕಷ್ಟು ಧುರೀಣರನ್ನು ಕಳೆದುಕೊಂಡಿದೆ. ಈಗವರ ಕನಸು ನನಸಾಗಿಸುವ ಹಾಗೂ ಬಿಟ್ಟು ಹೋದ ಕೆಲಸಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದಕ್ಕಾಗಿ, ನಿರಂತರ ಕೆಲಸ ಮಾಡಬೇಕಿದೆ. ಕಾರ್ಯಕರ್ತರು, ಮುಖಂಡರು ಒಂದಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಬಿಜೆಪಿ ಬ್ರಾಹ್ಮಣರ ಪಕ್ಷವೆಂದೇ ಹೇಳುತ್ತಾ ಬರಲಾಗುತ್ತಿದೆ. ಅದು ನಿಜ ಕೂಡ. ಆದರೆ, ಪರಿಶಿಷ್ಟರು ಹಾಗೂ ಹಿಂದುಳಿದವರ ಬಗ್ಗೆ ಕಾಳಜಿ ಇಲ್ಲವೆಂಬ ಆರೋಪವನ್ನು ಒಪ್ಪಲಾಗದು. ಅದಕ್ಕೆ ನನ್ನ ಜೀವನವೇ ಸಾಕ್ಷಿಯಾಗಿದೆ. ನನ್ನಣ್ಣ ಆರ್‌ಎಸ್‌ಎಸ್‌ ಶಾಖೆಯಲ್ಲಿ ಕೆಲಸ ಮಾಡುವಾಗ ತಂದೆಯವರು ಅವರನ್ನು ಮನೆಯಿಂದ ಹೊರಹಾಕಿದ್ದರು. ಆದರೆ, ಅವರಿಗೆ ಇದೇ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬ್ರಾಹ್ಮಣರೊಬ್ಬರು ಆಶ್ರಯ ನೀಡಿದ್ದರು. ಆ ಘಟನೆಯ ಬಳಿಕ ನಮ್ಮ ತಂದೆಯವರಲ್ಲೂ ಪರಿವರ್ತನೆಯಾಯಿತು. ಜತೆಗೆ, ಬಡ ಕುಟುಂಬದಿಂದ ಸಚಿವನಾಗಿ ಬೆಳೆಯಲೂ ಇದೇ ಬಿಜೆಪಿ ಕಾರಣ ಎಂದು ಸ್ಮರಿಸಿದರು.

Advertisement

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ರಾಜ್ಯದಲ್ಲಿ ನೆರೆಯಿಂದ ಸಾಕಷ್ಟು ಜನ ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯ ಮಾಡುವುದೇ ಮಾನವ ಧರ್ಮವಾಗಿದೆ. ಕೆ.ಎಸ್‌. ಈಶ್ವರಪ್ಪ ಅವರು ಗೆದ್ದಾಗ ಹಿಗ್ಗದೇ, ಸೋತಾಗ ಕುಗ್ಗದೇ ನಿರಂತರ ಶಿವಮೊಗ್ಗದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ. ಮುಂದೆಯೂ ಅಭಿವೃದ್ಧಿಯ ಪರ್ವ ಮುಂದುವರಿಯಲಿದ್ದು, ಶಿವಮೊಗ್ಗವನ್ನು ರಾಜ್ಯದಲ್ಲೇ ಮಾದರಿಯಾಗಿಸುವ ನಿಟ್ಟಿನಲ್ಲಿ ಶ್ರಮ ವಹಿಸಲಾಗುವುದು ಎಂದರು. ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಮಾತನಾಡಿ, ಸಂಪುಟ ರಚನೆಯಾಗಿದೆ. ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಯವರೇ ಆಗಿದ್ದು, ಡಿಸಿಎಂ ಕೂಡ ಈಶ್ವರಪ್ಪನವರಿಗೆ ಸಿಗುತ್ತದೆಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಒಂದು ವೇಳೆ, ಇದು ನಿಜವಾದರೆ ಈ ಹಿಂದಿನ ಸರಕಾರದ ಅವಧಿಯಲ್ಲಿ ಪಾಚಿಗಟ್ಟಿದ್ದ ಅಭಿವೃದ್ಧಿ, ಇನ್ಮುಂದೆ ಶರವೇಗದಲ್ಲಿ ಸಾಗಲಿದೆ ಎಂದು ತಿಳಿಸಿದರು.

ಮೇಯರ್‌ ಲತಾ ಗಣೇಶ್‌, ಪಕ್ಷದ ಮುಖಂಡರಾದ ಎಸ್‌. ರುದ್ರೇಗೌಡ, ಡಿ.ಎಸ್‌. ಅರುಣ್‌, ಜ್ಞಾನೇಶ್ವರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next