ಶಿವಮೊಗ್ಗ : ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಲು ಹೋದ ಪೋಲೀಸರ ಮೇಲೆ ಆರೋಪಿಗಳು ಗಂಭೀರ ಹಲ್ಲೆ ನಡೆಸಿದ ಘಟನೆ ಬುಧವಾರ ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪ ಮಂಡಘಟ್ಟ ನಗರದಲ್ಲಿ ನಡೆದಿದೆ.
ಕುಂಸಿ ಠಾಣೆಯ ಪಿಎಸ್ ಐ ನವೀನ್ ಮಠಪತಿ ಹಾಗೂ ಪಿಸಿ ಬಸವಂತಪ್ಪ ಗಂಭೀರ ಹಲ್ಲೆಗೊಳಗಾದವರು, ಅವರನ್ನು ನಗರದ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಮಂಡಘಟ್ಟದ ಮಧು ಹಾಗೂ ಮನು ಎಂಬುವರನ್ನು ಬಂಧಿಸಲು ಕುಂಸಿ ಠಾಣೆಯ ಪೊಲೀಸರು ಆಯನೂರು ಸಮೀಪದ ಮಂಡಗಟ್ಟದಲ್ಲಿರುವ ಆರೋಪಿಗಳ ಮನೆಯ ಮೇಲೆ ದಾಳಿ ಮಾಡುತ್ತಿದ್ದಂತೆ ಆರೋಪಿಗಳು ಪಿಎಸ್ ಐ ತಲೆಗೆ ಮಾರಕಾಸ್ತ್ರದಿಂದ ಹೊಡೆಡಿದ್ದಾರೆ ಇದರಿಂದ ಗಂಭೀರ ಗಾಯಗೊಂಡು ಪ್ರಜ್ಞಾಹೀನರಾಗಿ ಬೀಳುತ್ತಿದ್ದಂತೆ ಅವರ ರಕ್ಷಣೆಗೆ ತೆರಳಿದ ಪಿಸಿ ಬಸವಂತಪ್ಪನ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಇದರಿಂದ ಬಸವಂತಪ್ಪ ಅವರ ಕೈ ಮುರಿದಿದೆ ಕೂಡಲೇ ಇಬ್ಬರನ್ನೂ ನಗರದ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇದೀಗ ಪಿಎಸ್ ಐ ನವೀನ್ ಮಠಪತಿ ಚೇತರಿಸಿಕೊಂಡಿದ್ದಾರೆ.
ಕುಂಸಿ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ಸಾಗಿದ್ದು, ಈ ಹಿನ್ನೆಲೆಯಲ್ಲಿ ಪಿಎಸ್ ಐ ನಿರಂತರ ಕಾರ್ಯಾಚರಣೆಗಿಳಿದಿದ್ದರು ಎನ್ನಲಾಗಿದೆ. ಈ ಕುರಿತು ಮಂಡಘಟ್ಟ ಗ್ರಾಮದಲ್ಲಿಯೂ ದಾಳಿ ನಡೆಸಿ ನೂರಾರು ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರು.
ಪಿಎಸ್ ಐ ಮೇಲೆ ದಾಳಿ ನಡೆಸಿದ ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.